ಕೋಲಾರ: ಬಯಲು ಸೀಮೆಯ ಜಿಲ್ಲೆಗಳ ನೀರಿನ ಸಮಸ್ಯೆ ಪರಿಹರಿಸಲುವ ನಿಟ್ಟಿನಲ್ಲಿ ನೀರಾವರಿ ತಜ್ಞ ಪರಮಶಿವಯ್ಯ ಸಲ್ಲಿಸಿರುವ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಘಟನಾ ಘಟಕದ ಪ್ರಮುಖರು ನಗರದಲ್ಲಿ ಪ್ರತ್ಯೇಕವಾಗಿ ಧರಣಿ, ಮೆರವಣಿಗೆ ನಡೆಸಿದರು.
ಹಸಿರುಸೇನೆ: ನಗರದ ಗಾಂಧಿವನದಲ್ಲಿ ಧರಣಿ ನಡೆಸಿದ ಸೇನೆಯ ಪ್ರಮುಖರು, ಬಯಲು ಸೀಮೆಯ ಜಿಲ್ಲೆಗಳಿಗೆ ಆಶಾಕಿರಣದಂತೆ ಕಾಣುತ್ತಿರುವ ಪರಮಶಿವಯ್ಯನವರ ವರದಿ ಜಾರಿಗೆ ಹಿಂಜರಿಯುತ್ತಿರುವುದು ಆತಂಕ ಮೂಡಿಸುತ್ತಿದೆ. ಅದೇ ವೇಳೆ ಎತ್ತಿನಹೊಳೆ ಯೋಜನೆ ಜಾರಿಗೊಳಿಸಿ ಐದು ಜಿಲ್ಲೆಗೆ ನೀರು ಪೂರೈಸಲಾಗುವುದು ಎಂಬುದು ಸರ್ಕಾರದ ಆತುರದ ತೀರ್ಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಇತಿಹಾಸದಲ್ಲಿ ಯಾವುದೇ ಲಿಫ್ಟ್ ಆಧಾರಿತ ನೀರಿನ ಯೋಜನೆ ಇದುವರೆಗೂ ಯಶಸ್ವಿಯಾಗಿಲ್ಲ ಎಂಬುದನ್ನು ಸರ್ಕಾರ ಮನ ಗಾಣಬೇಕು. ಎತ್ತಿನಹೊಳೆ ಯೋಜನೆ ಯನ್ನು ಕೈಬಿಡಬೇಕು. ಪರಮಶಿವಯ್ಯ ವರದಿ ಜಾತಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಗಣೇಶಗೌಡ, ಅಬ್ಬಣಿ ಶಿವಪ್ಪ, ಬೈಚೇಗೌಡ, ಟಿ.ಎಂ.ವೆಂಕಟೇಶಗೌಡ, ಎನ್. ಚಂದ್ರಶೇಖರ್, ರಾಮೇಗೌಡ, ರಮೇಶ್, ಚೆನ್ನಕೇಶವ, ಶ್ರೀಧರ್, ವೀರಭದ್ರಸ್ವಾಮಿ, ಎ. ಅಶ್ವಥರೆಡ್ಡಿ ಭಾಗವಹಿಸಿದ್ದರು.
ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ನೀರು ಸಾಲುತ್ತಿಲ್ಲ. ಮಳೆಯೂ ಸಕಾಲಕ್ಕೆ ಸಮರ್ಪಕ ವಾಗಿ ಸುರಿಯುತ್ತಿಲ್ಲ. ಇಂಥ ವೇಳೆಯಲ್ಲಿ ಪರಮಶಿವಯ್ಯನವರ ವರದಿ ಜಾರಿಗೊಳಿಸು ವುದೇ ಏಕೈಕ ದಾರಿ ಎಂದು ಪ್ರತಿಪಾದಿಸಿದರು.
ಎಸ್.ಎನ್.ರಾಜಗೋಪಾಲಗೌಡ, ಎಲ್.ಇ.ಕೃಷ್ಣೇಗೌಡ, ಮೇಡಿಹಾಳ ಎಂ.ಕೆ.ರಾಘವೇಂದ್ರ, ವೆಂಕಟೇಶಮೂರ್ತಿ, ಎನ್.ಕೋದಂಡರಾಮಯ್ಯ, ನಾಗರಾಜ್, ಕಿಟ್ಟಣ್ಣ, ಮಂಜುನಾಥ, ನಂಜುಂಡಪ್ಪ, ನಾರಾಯಣ ಸ್ವಾಮಿ, ಮೈಲಾರಿಗೌಡ, ಮುನೇಗೌಡ, ರಾಮಪ್ರಸಾದ್, ಮುರಳಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.