ADVERTISEMENT

ಫಿಲ್ಟರ್ ಮರಳು ಕೇಂದ್ರದ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 10:05 IST
Last Updated 21 ಅಕ್ಟೋಬರ್ 2012, 10:05 IST
ಫಿಲ್ಟರ್ ಮರಳು ಕೇಂದ್ರದ ಮೇಲೆ ದಾಳಿ
ಫಿಲ್ಟರ್ ಮರಳು ಕೇಂದ್ರದ ಮೇಲೆ ದಾಳಿ   

ಕೋಲಾರ/ಮುಳಬಾಗಲು: ಜಿಲ್ಲೆಯಲ್ಲಿ ಮರಳು ಫಿಲ್ಟರ್, ಅಕ್ರಮ ಸಾಗಣೆ ಹಾವಳಿ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅವರು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರು ಕೋಲಾರ ಮತ್ತು ಮುಳಬಾಗಲಿನಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ.

ಶನಿವಾರ ಮುಳಬಾಗಲು ತಾಲ್ಲೂಕು ಬೈರಕೂರು ಹೋಬಳಿಯ 9ಕ್ಕೂ ಹೆಚ್ಚು ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮರಳು ಫಿಲ್ಟರ್ ಕೇಂದ್ರಗಳನ್ನು ನಾಶಗೊಳಿಸಿದ್ದಾರೆ. 15ಕ್ಕೂ ಹೆಚ್ಚು ರೈತರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ.

ತಾಲ್ಲೂಕಿನ ಬೈರಕೂರು ಹೋಬಳಿಯ ಎನ್.ಗಡ್ಡೂರು, ಸೀಗೆಹೊಸಹಳ್ಳಿ, ಮುದುಗೆರೆ, ಜಲಪಲ್ಲಿ, ತಿಪ್ಪದೊಡ್ಡಿ, ಹೆಬ್ಬಣಿ. ನೆಗವಾರ, ಚಿಕ್ಕನೆಗವಾರ, ಬೂಡದೇರು ಸೇರಿದಂತೆ ಹಲವು ಗ್ರಾಮಗಳ ಕೃಷಿ ಜಮೀನಿನಲ್ಲಿ ಫಿಲ್ಟರ್ ದಂಧೆ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿದ ಕಂದಾಯ, ಗಣಿ ಮತ್ತು ಭೂವಿಜ್ಞಾನ. ಬೆಸ್ಕಾಂ, ಪೊಲೀಸರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡ ಧೀಡಿರ್ ದಾಳಿ ನಡೆಸಿ ಕೇಂದ್ರಗಳನ್ನು ನಾಶಪಡಿಸಿತು.

ತಹಶೀಲ್ದಾರ್ ಎಂ.ನಂಜಯ್ಯ. ಕಂದಾಯ ನಿರೀಕ್ಷಕ ವೆಂಕಟೇಶಯ್ಯ, ಲೋಕೋಪಯೋಗಿ ಇಲಾಖೆಯ ರಾಜೇಶ್, ಭೂವಿಜ್ಞಾನ ಇಲಾಖೆಯ ಷಣ್ಮುಗಂ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.  ಶುಕ್ರವಾರ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಐದು ಆಕ್ರಮ ಮರಳು ಲಾರಿಗಳನ್ನು ವಶಪಡಿಸಿಕೊಂಡು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಲಾಗಿತ್ತು.

ದಾಳಿ ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಜಮೀನು ಮತ್ತು ಕೆರೆಗಳಲ್ಲಿ ಈ ದಾಳಿಗಳು ನಡೆಯುತ್ತಿವೆ.

ಕೋಲಾರ: ಅ. 18ರಂದು ತಾಲ್ಲೂಕಿನ ನರಸಾಪುರ ಕೆರೆಗೆ ದಾಳಿ ಮಾಡಿ ಮರಳು ತುಂಬಿದ ಎರಡು ಲಾರಿ, ಮರಳು ತೆಗೆಯುವ ಒಂದು ಯಂತ್ರ, 2 ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ.

ದಾಳಿ ನಡೆಸುತ್ತಿದ್ದಂತೆಯೇ ದುಷ್ಕರ್ಮಿಗಳು ಪರಾರಿಯಾದರು. ದೊಡ್ಡ ಕೆರೆಯಾದ್ದರಿಂದ ಯಾರನ್ನೂ ಬೆನ್ನಟ್ಟಿ ಹಿಡಿಯಲು ಸಾಧ್ಯವಾಗಲಿಲ್ಲ. ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.