ADVERTISEMENT

ಬಾರದ ಅಂಕಪಟ್ಟಿ: ಪದವಿ ವಂಚಿತ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:00 IST
Last Updated 12 ಸೆಪ್ಟೆಂಬರ್ 2011, 9:00 IST

ಮುಳಬಾಗಲು: ಪರೀಕ್ಷೆ ಬರೆದು ಎರಡು ವರ್ಷವಾದರೂ ಅಂಕಪಟ್ಟಿ ಬಾರದ ಕಾರಣ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

 ಬೆಂಗಳೂರು ವಿಶ್ವವಿದ್ಯಾಲಯ 2009ರಲ್ಲಿ ನಡೆಸಿದ ಬಿ.ಕಾಂ. 3ನೇ ಸೆಮಿಸ್ಟರ್ ಪರೀಕ್ಷೆಯ ಅಂಕಪಟ್ಟಿ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಇದುವರೆಗೂ ಬಂದಿಲ್ಲ. ಪದವಿ ಮುಗಿದರೂ ಅಂಕಪಟ್ಟಿ ಇಲ್ಲದೇ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಲಾಗದೆ ಪರಿತಪಿಸುತ್ತಿದ್ದಾರೆ.

ಕಂಪ್ಯೂಟರ್ ಫಂಡಮೆಂಟಲ್ ವಿಷಯದ ಆಂತರಿಕ ಅಂಕಗಳನ್ನು ಕಾಲೇಜಿನಿಂದ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರೂ ಅಲ್ಲಿನ ಸಿಬ್ಬಂದಿ ಕಂಪ್ಯೂಟರ್‌ನಲ್ಲಿ ಅಂಕ ದಾಖಲಿಸದಿರುವುದು ಅಂಕಪಟ್ಟಿ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಎರಡು ಸಲ ಆಂತರಿಕ ಅಂಕಗಳ ಪಟ್ಟಿಯನ್ನು ವಿ.ವಿ.ಗೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಕುಲ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಈಚೆಗೆ ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರೂ, ಮೂರನೇ ಸೆಮಿಸ್ಟರ್ ಅಂಕಪಟ್ಟಿ ಇಲ್ಲವೆಂದು ಯಾರಿಗೂ ಉದ್ಯೋಗ  ನೀಡಿಲ್ಲ. ಉದ್ಯೋಗ, ಉನ್ನತ ಶಿಕ್ಷಣ ಎರಡರಿಂದಲೂ ಈ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.