ADVERTISEMENT

ಮಾಲೂರು: ತಿಂಡಿಗಾಗಿ ಅಲೆದಾಟ

ಜನದಟ್ಟಣೆಯಿಂದ ಹೋಟೆಲ್‌ಗಳಲ್ಲಿ ತಿಂಡಿ ಖಾಲಿ

​ಪ್ರಜಾವಾಣಿ ವಾರ್ತೆ
Published 12 ಮೇ 2018, 10:15 IST
Last Updated 12 ಮೇ 2018, 10:15 IST

ಮಾಲೂರು: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಧಾನಸಭಾ ಚುನಾವಣೆಗೆ ನಿಯುಕ್ತರಾದ ಸಿಬ್ಬಂದಿ ಬೆಳಿಗ್ಗೆ ತಿಂಡಿಗಾಗಿ ಅಲೆದಾಡಿದರು.

ಮನೆಗಳಿಂದ ಬುತ್ತಿ ಜತೆ ಬಂದವರು ಸಮಾಧಾನವಾಗಿ ಊಟ ಮಾಡಿತ್ತಿದ್ದರು. ಹಲವರು ತಿಂಡಿಗಳಿಗಾಗಿ ಹೋಟೆಲ್‌ ತಡಕಾಡಿದರು. ಏಕಾಏಕಿ ನೂರಾರು ಮಂದಿ ಬಂದ ಕಾರಣ ಸುತ್ತಮುತ್ತಲಿನ ಹೋಟೆಲ್ ಗಳಲ್ಲಿ ಊಟ ಬೇಗ ಖಾಲಿಯಾಗಿತ್ತು.

ನೀರಿನ ಕ್ಯಾನ್ ಗಳು ಬಹಳ ಬೇಗ ಖಾಲಿಯಾದವು. ಮಳೆ ಬರುವ ಸಾಧ್ಯತೆ ಇದ್ದ ಕಾರಣ ಸಿಬ್ಬಂದಿ ವಾಹನದ ಬಳಿ ಹೋಗಬೇಕು ಎಂದು ಅಧಿಕಾರಿಗಳು ಪದೇ ಪದೇ ಸಿಬ್ಬಂದಿಯನ್ನು ಮೈಕ್ ಮೂಲಕ ಎಚ್ಚರಿಸುತ್ತಿದ್ದರು. ಚುನಾವಾಣಾಧಿಕಾರಿ ಕೃಷ್ಣಮೂರ್ತಿಮತಗಟ್ಟೆ ಅಧಿಕಾರಿಗಳ ವಾಹನಗಳಿಗೆ ಚಾಲನೆ ನೀಡಿದರು.

ADVERTISEMENT

‘ಮತಗಟ್ಟೆಗಳಿಗೆ ತೆರಳುವ ಅಧಿಕಾರಿಗಳು ಮತಗಟ್ಟೆಗಳಲ್ಲಿ ಗೊಂದಲಗಳಿಗೆ ಅವಕಾಶ ನೀಡದೆ ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಸಹಕರಿಸಬೇಕು’ ಎಂದರು.

ತಾಲ್ಲೂಕಿನಲ್ಲಿ 248 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,490 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 1,81,168 ಮತದಾರರು ಮತ ಚಲಾಯಿಸಲಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. 18 ಸೆಕ್ಟರ್ ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದಾರೆ.

ಮತಗಟ್ಟೆಗಳಿಗೆ ಬರುವ ಮತದಾರರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಹಾಗೂ ಅಂಗವಿಕಲರಿಗೆ ರ‍್ಯಾಂಪ್ ಸೌಕರ್ಯ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶನಿವಾರ ಸಂಜೆ ವರೆಗೆ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿದೆ. ಮತದಾನಕ್ಕೆ ಮತದಾರರ ಗುರುತಿನ ಚೀಟಿ , ಬ್ಯಾಂಕ್ ಪಾಸ್ ಬುಕ್, ಚಾಲಕ ಪರವಾನಿಗೆ ಸೇರಿದಂತೆ 13 ವಿವಿಧ ಗುರುತಿನ ಚೀಟಿಗಳನ್ನು ತೋರಿಸಿ ಮತ ಚಲಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.