ADVERTISEMENT

ಮುನಿಯಪ್ಪ ಕ್ಷಮೆ ಯಾಚಿಸಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 8:55 IST
Last Updated 1 ಜೂನ್ 2011, 8:55 IST

ಮಾಲೂರು: ಕೇಂದ್ರದಲ್ಲಿ ಮಂತ್ರಿಯಾಗಿರುವ ಕೆ.ಎಚ್.ಮುನಿಯಪ್ಪ ಉತ್ತಮ ಆಡಳಿತ ನೀಡದೇ ಸರ್ಕಾರ ಮತ್ತು ಗುತ್ತಿಗೆದಾರರ ಮಧ್ಯೆ ದಲ್ಲಾಳಿ ಭಟ್ಟಂಗಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎ.ನಾಗರಾಜು ಆರೋಪಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, 2010-11ರ ರೈಲ್ವೆ ನೇಮಕಾತಿಯಲ್ಲಿ ಕೆಲಸ ಕೊಡಿಸುವುದಾಗಿ ಸಚಿವರು 200 ಅಭ್ಯರ್ಥಿಗಳಿಂದ ತಲಾ ರೂ.5 ಲಕ್ಷ ಲಂಚ ಪಡೆದಿರುವ ಕುರಿತು ಸಿಬಿಐ ತನಿಖೆ ಪ್ರಾರಂಭವಾಗಿದೆ ಎಂದರು.

ಮುನಿಯಪ್ಪ ರೂ.2 ಸಾವಿರ ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ದಾಖಲೆಗಳ ಸಮೇತ ಬಿ.ಎಸ್.ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಹೈಕಮಾಂಡ್‌ಗೆ ಇತ್ತೀಚೆಗೆ ದೂರು ಸಲ್ಲಿಸಿದ್ದಾರೆ.
 
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ  ಕೃಪಾಕಟಾಕ್ಷದಿಂದ ಕಳೆದ 3 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ವಿಷಯ ಮರೆಯಬಾರದು ಎಂದು ಅವರು ಎಚ್ಚರಿಸಿದರು.

ಬಿಜೆಪಿ ಜತೆ ಹೊಂದಾಣಿಕೆ ರಾಜಕೀಯದ ನೀತಿ ಅನುಸರಿಸುತ್ತಿರುವ ಮುನಿಯಪ್ಪ, ಕಾಂಗ್ರೆಸ್ ಪಕ್ಷದವರನ್ನೇ ಬಲಿ ತೆಗೆದುಕೊಳ್ಳುವುದರ ಮೂಲಕ ತಮ್ಮ ರಾಜಕೀಯ ಸಮಾಧಿ ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು `ಬಿಹಾರ್ ಕಾಂಗ್ರೆಸ್~ ಮಾಡಿದ ಕೀರ್ತಿ ಸಚಿವರಿಗೆ ಸಲ್ಲುತ್ತದೆ ಎಂದು ಅವರು ಲೇವಡಿ ಮಾಡಿದರು.

ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ಪಕ್ಷದಲ್ಲಿನ ವೈಫಲ್ಯಗಳನ್ನು ಜನತೆಗೆ ಮನವರಿಕೆ ಮಡಿಕೊಡಲು ಹಾಗೂ ಉತ್ತಮ ಆಡಳಿತ ನೀಡಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಬಂಗಾರಪೇಟೆ ಉಪಚುನಾವಣೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿಯ ಕೆಟ್ಟ ರಾಜಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕಾಯಿತು ಎಂದು ಮುನಿಯಪ್ಪ ದೂರಿದ್ದಾರೆ. ಈ ಹೇಳಿಕೆಯನ್ನು ಅವರು ಕೂಡಲೇ ಹಿಂಪಡೆದು ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ವಿ.ಗೋಪಾಲರೆಡ್ಡಿ, ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಬಾಬುರಾವ್‌ಸಾಳುಂಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.