ADVERTISEMENT

ಮೋಹಕ ಬಲೆ ಅಳವಡಿಸಲು ಸಲಹೆ

ಮಾವಿನ ತೋಟಗಳಲ್ಲಿ ಊಜಿ ನೊಣದ ಹಾವಳಿ

​ಪ್ರಜಾವಾಣಿ ವಾರ್ತೆ
Published 30 ಮೇ 2018, 12:14 IST
Last Updated 30 ಮೇ 2018, 12:14 IST
ಶ್ರೀನಿವಾಸಪುರದ ಹೊರವಲಯದಲ್ಲಿನ ಮಾವಿನ ತೋಟದಲ್ಲಿ ರೈತರೊಬ್ಬರು ಮೋಹಕ ಬಳೆ ಅಳವಡಿಸಿರುವುದು.
ಶ್ರೀನಿವಾಸಪುರದ ಹೊರವಲಯದಲ್ಲಿನ ಮಾವಿನ ತೋಟದಲ್ಲಿ ರೈತರೊಬ್ಬರು ಮೋಹಕ ಬಳೆ ಅಳವಡಿಸಿರುವುದು.   

ಶ್ರೀನಿವಾಸಪುರ: ತಾಲ್ಲೂಕಿನ ಮಾವಿನ ತೋಟಗಳಲ್ಲಿ ಕಾಣಿಸಿಕೊಂಡಿರುವ ಊಜಿ ನೊಣ ಮಾವಿನ ಫಸಲಿಗೆ ಮಾರಕವಾಗಿದೆ. ಮಾವು ಬೆಳೆಗಾರರು ಈ ಅಪಾಯಕಾರಿ ನೊಣದ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ.

ಊಜಿ ನೊಣ ಸಾಮಾನ್ಯವಾಗಿ ನಿಂಬೆ ಹಣ್ಣು ಗಾತ್ರದ ಮಾವಿನ ಮಿಡಿ ಕಚ್ಚಿ ಮೊಟ್ಟೆ ಇಡುತ್ತದೆ. ಮೊಟ್ಟೆ
ಯೊಡೆದು ಬರುವ ಹುಳುಗಳು ಮಾವು ಪ್ರವೇಶಿಸಿ ಕಾಯಿ ಕೆಡುವಂತೆ ಮಾಡುತ್ತವೆ. ಈ ಬಾರಿ ಬಿಸಿಲಿನ ಝಳ ಹೆಚ್ಚಾಗಿದೆ. ಮಾವಿನ ಹೀಚು ಉದುರಿ ನೆಲ ಕಚ್ಚಿದೆ. ರೈತರು ಉದುರಿದ ಹೀಚು ಸಂಗ್ರಹಿಸದೆ ಬಿಟ್ಟಿರುವುದರಿಂದ ನೊಣದ ಹಾವಳಿ ಹೆಚ್ಚಿದೆ.

ಊಜಿ ನೊಣದ ಹಾವಳಿ ನಿಯಂತ್ರಣಕ್ಕೆ ತೋಟಗಳಲ್ಲಿ ಮೋಹಕ ಬಲೆ ಅಳವಡಿಸಬೇಕು. ಇಲ್ಲವಾದರೆ ಫಸಲು ನಷ್ಟದ ಪ್ರಮಾಣ ಹೆಚ್ಚುತ್ತದೆ ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾ
ಸನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೋಹಕ ಬಲೆಯ ಒಣಗಿನ ಮರದ ತುಂಡಿಗೆ ಯೂಜಿನಾಲ್‌ ಹಾಗೂ ನಾಲ್ಕು ತೊಟ್ಟು ನುವಾನ್‌ ಔಷಧ ಹಾಕಬೇಕು. ಔಷಧದ ವಾಸನೆ ಗಂಡು ನೊಣಗಳನ್ನು ಆಕರ್ಷಿಸುತ್ತದೆ. ಹೆಣ್ಣು ನೊಣದ ಗುಂಗಿನಲ್ಲಿ ಬರುವ ಗಂಡು ಊಜಿ ನೊಣಗಳು ಮೋಹಕ ಬಲೆ ಪ್ರವೇಶಿಸಿದೊಡನೆ ನುವಾನ್‌ ವಾಸನೆಯಿಂದ ಸಾಯುತ್ತವೆ ಎಂದು ವಿವರಿಸಿದರು.

ಮೋಹಕ ಬಲೆಯನ್ನು ನೆಲದಿಂದ ಐದು ಅಡಿ ಎತ್ತರದಲ್ಲಿ ನೆರಳುಳ್ಳ ಕೊಂಬೆಗೆ ಕಟ್ಟಬೇಕು. ಒಂದು ಎಕರೆ ತೋಟದಲ್ಲಿ 8 ಮೋಹಕ ಬಲೆ ಕಟ್ಟಿದರೆ ಸಾಕು. ಅಲ್ಲೊಬ್ಬರು ಇಲ್ಲೊಬ್ಬರು ಮೋಹಕ ಬಲೆ ಅಳವಡಿಸುವುದರಿಂದ ಹೆಚ್ಚಿನ ಪ್ರಯೋಜನ ಆಗವುದಿಲ್ಲ. ಸಾಂಘಿಕ ಪ್ರಯತ್ನದಿಂದ ಮಾತ್ರ ಊಜಿ ನೊಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎನ್ನುವರು ಮಣಿಗಾನಹಳ್ಳಿ ಗ್ರಾಮದ ಮಾವು ಬೆಳೆಗಾರ ಎನ್.ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರೈತರು ಮಾವಿನ ಹೂವಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವರು. ಆದರೆ ಕಾಯಿ ರಕ್ಷಣೆಗೆ ಅಗತ್ಯವಾದ ಗಮನ ನೀಡುವುದಿಲ್ಲ. ಇದರಿಂದ ಬಹಳಷ್ಟು ಕಾಯಿ ಊಜಿ ನೊಣದ ಹಾವಳಿಗೆ ತುತ್ತಾಗಿ ಮರಗಳಲ್ಲಿಯೇ ಕೊಳೆಯುತ್ತವೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ. ಬಿಸಿಲಿನ ತಾಪಕ್ಕೆ ಉದುರಿದ ಪಿಂದೆಯನ್ನು ತೋಟಗಳಲ್ಲಿ ಕೊಳೆಯಲು ಬಿಡಬಾರದು. ಅದನ್ನು ಆರಿಸಿ ಹಳ್ಳದಲ್ಲಿ ಹಾಕಿ ಮಣ್ಣು ಮುಚ್ಚಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.