ADVERTISEMENT

ವಲಸೆ ಬಾಲಕಾರ್ಮಿಕರ ಹೆಚ್ಚಳ: ವಿಷಾದ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 5:02 IST
Last Updated 1 ಮಾರ್ಚ್ 2014, 5:02 IST

ಕೋಲಾರ: ಜಿಲ್ಲೆಯ ಗಡಿಭಾಗಗಳಿಂದ ಬಾಲ ಕಾರ್ಮಿಕರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಅವರು ಎಂಥ ಕನಿಷ್ಠ ಸೌಕರ್ಯಗಳ ನಡುವೆ ಕೆಲಸ ಮಾಡು­ತ್ತಾರೆ ಎಂಬ ಬಗ್ಗೆ ಮಾಹಿತಿಗಳಿಲ್ಲ. ಅವರಿಂದ ಕೆಲಸ ಮಾಡಿಸಿಕೊಳ್ಳುವವರ ವಿರುದ್ಧವೂ ಕ್ರಮ ಕೈಗೊಂಡ ನಿದರ್ಶನ­ಗಳಿಲ್ಲ ಎಂದು ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಯೋಜನಾ ನಿರ್ದೇಶಕಿ ಶಶಿಕಲಾ ಶೆಟ್ಟಿ ವಿಷಾದಿ­ಸಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ) 2012, ಭಿಕ್ಷಾಟನೆ ಮತ್ತು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು  ಬೆಂಗ­ಳೂರು ವಿಭಾಗ ಮಟ್ಟದ ಅಧಿಕಾರಿ­ಗಳಿಗೆಂದು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಾಗಾರ­ದಲ್ಲಿ ಮಾತನಾಡಿ, ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬಾಲ­ಕಾರ್ಮಿಕರು ಮತ್ತು ಬೆಂಗಳೂರಿಗೆ ವಲಸೆ ಹೋಗುತ್ತಿರುವ ಬಾಲ ಕಾರ್ಮಿ­ಕರ ಸ್ಥಿತಿ–ಗತಿಗಳ ಕಡೆಎಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಗಂಭೀರ ಗಮನ ಹರಿಸ­ಬೇಕಿದೆ ಎಂದು ಅವರು ಹೇಳಿದರು.

10ನೇ ತರಗತಿಯಲ್ಲಿ ಉತ್ತೀರ್ಣರಾ­ದವರು, ಅನುತ್ತೀರ್ಣ­ರಾದ ಮಕ್ಕಳು ದಿಢೀರನೆ ಶ್ರೀಮಂತರಾಗುವ ಕನಸು ಹೊತ್ತು ಬೆಂಗಳೂರಿಗೆ ವಲಸೆ ಹೋಗುತ್ತಿ­ದ್ದಾರೆ. ಸ್ವಯಂಸೇವಾ ಸಂಸ್ಥೆಗಳ ಗಮನಕ್ಕೂ ಈ ವಿಷಯ ಬಂದಿದೆ. ಮಕ್ಕಳ ರಕ್ಷಣಾ ಘಟಕವು ಇಂಥ ವಿಷಯಗಳ ಕಡೆಗೆ ಗಮನ ಹರಿಸಿ ಕಾರ್ಯಪ್ರವೃತ್ತವಾಗಬೇಕು ಎಂದರು.

ಎಲ್ಲೆಡೆ ಯಾವುದೇ ಸಣ್ಣ ಪ್ರಮಾ­ಣದ ರಕ್ಷಣೆಯೂ ಇಲ್ಲದೆ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆಂದು ಕರೆ­ದೊಯ್ಯುವ ಹೆಣ್ಣು ಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕಾದರೆ, ಅವರು ಹುಟ್ಟಿ ಬೆಳೆದ ಪರಿಸರದಲ್ಲಿಯೇ ಜೀವನವನ್ನು ನಡೆ­ಸಲು ಬೇಕಾದ ಉದ್ಯೋಗ, ಕೌಶಲ್ಯ­ಗಳನ್ನು ಹೇಳಿಕೊಡಬೇಕಾಗಿದೆ ಎಂದರು.

ಮಕ್ಕಳ ಹಕ್ಕು ಮರೆತ ಸಮಾಜ:
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಪೋಷಕರು, ಸಮುದಾಯ ಸೇರಿದಂತೆ ಇಡೀ ಸಮಾಜವು ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ. ಮಕ್ಕಳನ್ನು ದೇಶದ ಆಸ್ತಿ ಎಂದು ಭಾವಿಸುವ ಔದಾರ್ಯಕ್ಕಿಂತಲೂ ಕೊನೆಗಾಲದಲ್ಲಿ ತಮ್ಮನ್ನು ನೋಡಿಕೊಳ್ಳಬೇಕಾದವರು ಎಂಬ ಭಾವನೆಯೇ ಬಹುತೇಕ ಪೋಷಕರಲ್ಲಿದೆ. ಮಕ್ಕಳನ್ನು ಬೆಳೆಸುವುದು ತಮಗಾಗಿಯೇ ಹೊರತು ದೇಶಕ್ಕಾಗಿ ಅಲ್ಲ ಎಂಬ ಭಾವನೆಯನ್ನು ಪೋಷಕರು ಬಿಟ್ಟಾಗ ಮಾತ್ರ ಮಕ್ಕಳು  ಮಹಾನ್ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಿದರು.

ಕೌಟುಂಬಿ, ಆರ್ಥಿಕ ಮತ್ತು ಸಾಮಾ­ಜಿಕ ಕಾರಣಗಳಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆ ಹೆಚ್ಚು ನಡೆಯುತ್ತಿದೆ. ಆ ಬಗ್ಗೆ ಅಧಿಕಾರಿಗಳು ಮತ್ತು ಇಲಾಖೆಗಳು ಕಾರ್ಯಾ­ಗಾರಗಳನ್ನು ನಡೆಸಿ ಚರ್ಚಿಸಿ­ದರಷ್ಟೇ ಸಾಕಾಗುವುದಿಲ್ಲ. ಬದಲಿಗೆ ಮಕ್ಕಳ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಎಲ್ಲರೂ ಕಾರ್ಯತತ್ಪರರಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸೆಪಟ್, ಮಕ್ಕಳ ಹಕ್ಕುಗಳ ರಕ್ಷಣೆ ವಿಷಯದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸುವಲ್ಲಿ ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕೆಲಸ ಮಾಡಿದರೆ ಉದ್ದೇಶ ಈಡೇರುವುದಿಲ್ಲ. ಸಹಯೋಗದಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಹೇಳಿದರು.

ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸದಸ್ಯ ಶ್ರೀಧರ್, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಜಗೋಪಾಲ್‌. ಇಲಾಖೆಯ ಉಪನಿರ್ದೇಶಕಿ ಎ.ಶಕುಂ­ತಲಾ ಉಪಸ್ಥಿತರಿದ್ದರು.

ನಂತರ ನಡೆದ ಕಾರ್ಯಾಗಾರದಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ) 2012ರ ಕುರಿತು ಬೆಂಗಳೂರಿನ ಎನ್‌ಫೋಲ್ಡ್ ಸಂಸ್ಥೆಯ ಖುಷಿ, ಭಿಕ್ಷಾಟನೆ ಮತ್ತು ಸಾಗಾಣಿಕೆ ನಿಷೇಧ ಕಾಯ್ದೆಗಳು, ಮಕ್ಕಳ ಸ್ಥಿತಿ–ಗತಿ ಕುರಿತು ಅಪ್ಸಾ ಸಂಸ್ಥೆಯ ಉಷಾ, ಬಾಲಕಾರ್ಮಿಕ ಪದ್ಧತಿಯ ಹಿನ್ನೆಲೆ, ದುಷ್ಪರಿಣಾಮ, ನಿಯಂತ್ರಣ ಕಾಯ್ದೆಗಳ ಕುರಿತು ಬಚ್ಪನ್ ಬಚಾವೋ ಆಂದೋಲನದ ರಾಜ್ಯ ಸಂಚಾಲಕಿ ವಾಣಿ. ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವಲ್ಲಿ ಬಾಲ ನ್ಯಾಯ ಮಂಡಳಿ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಮಹತ್ವ ಕುರಿತು ಯುನಿಸೆಫ್‌ ಮಂಗಳೂರು ಘಟಕದ ಸಂಚಾಲಕಿ ಸಿಸ್ಟರ್ ಡುಲ್ಸಿನ್ ಮಾತನಾಡಿದರು.
ಬೆಂಗಳೂರು ವಿಭಾಗಕ್ಕೆ ಸೇರಿದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.