ADVERTISEMENT

ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 9:22 IST
Last Updated 17 ಡಿಸೆಂಬರ್ 2012, 9:22 IST

ಶ್ರೀನಿವಾಸಪುರ: ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ (ಪುಟ್ಟಣ್ಣ ಬಣ) ತಾಲ್ಲೂಕು ಘಟಕದ ಕಾರ್ಯಕರ್ತರು ಶನಿವಾರ ಶ್ರೀನಿವಾಸಪುರದ ಬೆಸ್ಕಾಂ ಕಚೇರಿ ಎದುರು ಧರಣಿ ನಡೆಸಿದರು.

ತಾಲ್ಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಪಂಪ್‌ಸೆಟ್ ಸುಟ್ಟುಹೋಗುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಲೋ ಒಲ್ಟೇಜ್ ಸಮಸ್ಯೆಯಿಂದ ರಾತ್ರಿ ಹೊತ್ತು ವಿದ್ಯಾರ್ಥಿಗಳು ಓದಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಕೊಡುವ ಅವಧಿಯಲ್ಲಿ ಹಲವು ಸಲ ವಿದ್ಯುತ್ ಕಡಿತವಾಗುತ್ತಿದೆ. ಇದರಿಂದ ವಾಸ್ತವವಾಗಿ ವಿದ್ಯುತ್ ಕೊಡುವ ಅವಧಿ ಕಡಿಮೆಯಾಗಿದೆ ಎಂದು ಪ್ರತಿಭಟನಕಾರರು ಹೇಳಿದರು.

ತಡೆರಹಿತ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ರೈತರು ಅರ್ಜಿ ಕೊಟ್ಟ ಎರಡು ತಿಂಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಹಳೆ ಲೈನ್‌ಗಳನ್ನು ತೆಗೆದು ಹೊಸ ಲೈನ್ ಅಳವಡಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ವಿದ್ಯುತ್ ಪೂರೈಸಬೇಕು. ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸುವ ಜತೆ, ಕೃಷಿ ಪಂಪ್‌ಸೆಟ್ ವಿದ್ಯುತ್ ಬಾಕಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಬೆಸ್ಕಾಂ ಅಧಿಕಾರಿಗೆ ನೀಡಲಾಯಿತು. ಮುಖಂಡರಾದ ಮುಕುಂದಗೌಡ, ಗಂಗಾಧರ್, ಕೃಷ್ಣಪ್ಪ, ಪ್ರಸಾದ್, ಸೀನಪ್ಪ, ಬಾಲಾಜಿ ಸಿಂಗ್, ಎಂ.ಚಂದ್ರು, ನಾಗರಾಜಗೌಡ, ಮುಕುಂದ, ಶ್ರೀರಾಮ್ ಚಿಕ್ಕನರಸಿಂಹಯ್ಯ, ಆಂಜಿ, ವೆಂಕಟೇಶ್, ಎಂ.ವೆಂಕಟರಮಣ, ವೆಂಕಟೇಶ್, ಬೈಯ್ಯಾರೆಡ್ಡಿ, ಮಂಜುನಾಥ್, ಸಂತೋಷ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.