ADVERTISEMENT

ಕೈಗಾರಿಕಾ ಪ್ರದೇಶಕ್ಕೆ 1,273 ಎಕರೆ ಜಾಗ ಗುರುತು; ರೈತರಿಂದ ಆಕ್ಷೇಪಣೆ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:19 IST
Last Updated 2 ಜೂನ್ 2025, 13:19 IST
ಶ್ರೀನಿವಾಸಪುರ ತಾಲ್ಲೂಕಿನ ಯದರೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಎಚ್‌.ಎಚ್‌.ವೆಂಕಟಲಕ್ಷ್ಮಿ ನೇತೃತ್ವದಲ್ಲಿ ರೈತರಿಂದ ಆಕ್ಷೇಪಣೆ ಸ್ವೀಕಾರ ಸಭೆ ನಡೆಯಿತು
ಶ್ರೀನಿವಾಸಪುರ ತಾಲ್ಲೂಕಿನ ಯದರೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿ ಎಚ್‌.ಎಚ್‌.ವೆಂಕಟಲಕ್ಷ್ಮಿ ನೇತೃತ್ವದಲ್ಲಿ ರೈತರಿಂದ ಆಕ್ಷೇಪಣೆ ಸ್ವೀಕಾರ ಸಭೆ ನಡೆಯಿತು    

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಗುರುತಿಸಿರುವ ಜಮೀನು ಸಂಬಂಧ ರೈತರಿಂದ ಕೆಐಎಡಿಬಿ ಅಧಿಕಾರಿಗಳು ಸೋಮವಾರ ಆಕ್ಷೇಪಣೆ ಸ್ವೀಕರಿಸಿದರು.

ಗ್ರಾಮದ ಸಮೀಪ 1,273 ಎಕರೆ ಜಮೀನನ್ನು ಕೈಗಾರಿಕೆಗಳಿಗೆ ಗುರುತಿಸಿದ್ದು, ಆ ಪೈಕಿ 551 ಮಂದಿ ಖಾತೆದಾರರಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕೇ? ಬೇಡವೇ ಎಂಬದರ ಬಗ್ಗೆ ರೈತರಿಂದ ಆಕ್ಷೇಪಣೆ ಸ್ವೀಕರಿಸಲು ನೋಟಿಸ್‌ ನೀಡಲಾಗಿತ್ತು. ಆದರಂತೆ ಕೆಐಎಡಿಬಿ ಇಲಾಖೆಯ ವಿಶೇಷ ಭೂಸ್ವಾಧೀನಾಧಿಕಾರಿ ಎಚ್‌.ಎಸ್‌.ವೆಂಕಟಲಕ್ಷ್ಮಿ ನೇತೃತ್ವದಲ್ಲಿ ಸಭೆ ನಡೆಯಿತು.

ಕೈಗಾರಿಕೆಗಳನ್ನು ಇಲ್ಲಿ ಸ್ಥಾಪನೆ ಮಾಡುವುದೇ ಬೇಡ ಎಂದು ಕೆಲವರು ಅಧಿಕಾರಿಗಳನ್ನು ಒತ್ತಾಯಿಸಿದರು. ಆಗ ಗ್ರಾಮದ ಖಾತೆದಾರರಲ್ಲಿ ಕೆಲವರು, ‘ಕೈಗಾರಿಕೆ ಬೇಡ ಎನ್ನುತ್ತಿರುವವರು ಸ್ಥಳೀಯ ಗ್ರಾಮಸ್ಥರಲ್ಲ; ಬೇರೆ ಊರುಗಳವರು. ಗ್ರಾಮಸ್ಥರ ಅಭಿಪ್ರಾಯ ಪಡೆದು ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಆಗ ಮಧ್ಯ ಪ್ರವೇಶಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ‘ರೈತರ ಅಭಿಪ್ರಾಯ ಸಂಗ್ರಹಿಸಲು ಅಧಿಕಾರಿಗಳು ಬಂದಿದ್ದಾರೆ. ಸರ್ಕಾರವು ಕೈಗಾರಿಕೆಗಳಿಗೆ ಸೂಕ್ತ ಜಾಗವನ್ನು ಗುರುತಿಸಿದೆ. ತಕರಾರರು ಏನಾದರೂ ಇದ್ದರೆ ಸಲ್ಲಿಸಲು ಅವಕಾಶ ಇದೆ’ ಎಂದರು.

ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೈತರನ್ನು ಕ್ರಮ ಸಂಖ್ಯೆಯಂತೆ ಕರೆದು ಆಕ್ಷೇಪಣೆಗಳನ್ನು ವೆಂಕಟಲಕ್ಷ್ಮಿ ಸಂಗ್ರಹಿಸಲು ಮುಂದಾದರು. ಇದಕ್ಕೆ ಸಿಪಿಎಂ ಮುಖಂಡ ಸೂರ್ಯನಾರಾಯಣ, ಕಾಂಗ್ರೆಸ್‌ ಮುಖಂಡರಾದ ಕೆ.ಕೆ.ಮಂಜುನಾಥ್‌, ಬ್ಯಾಟಪ್ಪ, ನವೀನ್‌ ಕುಮಾರ್‌, ಜತೆಗೆ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಬಹುತೇಕ ಮಂದಿಗೆ ನೋಟಿಸ್‌ ಕೈ ಸೇರಿಲ್ಲ. ಇನ್ನು 10 ದಿನ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿ ಲಿಖಿತವಾಗಿ ಮನವಿ ಸಲ್ಲಿಸಿದರು.

ಮನವಿಗೆ ಸ್ಪಂದಿಸಿದ ವೆಂಕಟಲಕ್ಷ್ಮಿ, ‘ಈ ಭಾಗದಲ್ಲಿ ಕೈಗಾರಿಕೆಗಳಿಗೆ ಜಾಗ ಗುರುತು ಮಾಡಲಾಗಿದ್ದು, ಇನ್ನೂ ನೋಟೀಫಿಕೇಶನ್‌ ಆಗಿಲ್ಲ. ಈಗಾಗಲೇ ನೋಟಿಸ್‌ ನೀಡಲಾಗಿರುವ ರೈತರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಅಭಿಪ್ರಾಯನ್ನು ಸಂಗ್ರಹಿಸಲಾಗುವುದು, ಯಾರಿಗೆ ನೋಟಿಸ್‌ ಸಿಕ್ಕಿಲ್ಲವೋ ಅವರಿಂದ 10 ದಿನಗಳ ನಂತರ ಆಕ್ಷೇಪಣೆ ಸ್ವೀಕರಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರತಿಭಟನೆ ನಡೆಸುತ್ತಿದ್ದ ಕೆಲ ವ್ಯಕ್ತಿಗಳು ಸಮಾಧಾನಕರವಾಗಿ ವಾಪಸ್‌ ತೆರಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ನಂದಕುಮಾರ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಆಕ್ಷೇಪಣೆ ಸ್ವೀಕಾರ ವೇಳೆ ಉಂಟಾದ ವಾಗ್ವಾದವನ್ನು ಪೊಲೀಸರು ನಿಯಂತ್ರಣಕ್ಕೆ ತಂದರು

ಎರಡು ಗುಂಪುಗಳ ನಡುವೆ ವಾಗ್ವಾದ

ಅಧಿಕಾರಿಗಳು ರೈತರಿಂದ ಆಕ್ಷೇಪಣೆ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ಸಭೆಗೆ ಅಡ್ಡಿಪಡಿಸಲು ಯತ್ನಿಸಿ ಚೇರು ಟೇಬಲ್‌ ಎಳೆದಾಡಿದರು. ಇದಕ್ಕೆ ಗರಂ ಆದ ಯದರೂರು ಗ್ರಾಮದ ಕೆಲವರು ‘ನಮ್ಮೂರಿನ ಸಮಸ್ಯೆ ಇದು ನಾವೇ ಬಗೆಹರಿಸಿಕೊಳ್ಳುತ್ತೇವೆ. ಹೊರಗಿನ ವ್ಯಕ್ತಿಗಳಿಗೇನು ಕೆಲಸ ಇಲ್ಲಿ. ನಮಗೆ ಕೈಗಾರಿಕೆಗಳು ಬೇಕು ಇದರಿಂದ ನಮಗೆ ಕೆಲಸ ಸಿಗುತ್ತದೆ’ ಎಂದರು. ಸ್ಥಳದಲ್ಲಿ ಜಮಾಯಿಸಿದ್ದ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಎರಡೂ ಕಡೆಯವರು ಪರ ವಿರೋಧ ಘೋಷಣೆ ಕೂಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.