ADVERTISEMENT

ಕೋಚಿಮುಲ್‌: 4 ಮಂದಿ ಅವಿರೋಧ ಆಯ್ಕೆ, ಚುನಾವಣಾ ಕಣದಲ್ಲಿ 21 ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:54 IST
Last Updated 8 ಮೇ 2019, 14:54 IST
ಜಯಸಿಂಹ ಕೃಷ್ಣಪ್ಪ
ಜಯಸಿಂಹ ಕೃಷ್ಣಪ್ಪ   

ಕೋಲಾರ: ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 54 ಮಂದಿ ಪೈಕಿ 29 ಮಂದಿ ಉಮೇದುವಾರಿಕೆ ಹಿಂಪಡೆದಿದ್ದು, ಅಂತಿಮವಾಗಿ 21 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದ ಬುಧವಾರ 29 ಮಂದಿ ಚುನಾವಣಾ ಕಣದಿಂದ ಹಿಂದೆ ಸರಿದರು. 4 ಮಂದಿ ಅವಿರೋಧ ಆಯ್ಕೆಯಾದರು.

ಒಕ್ಕೂಟದ 13 ನಿರ್ದೇಶಕರ ಸ್ಥಾನಕ್ಕೆ ಮೇ 13ರಂದು ಚುನಾವಣೆ ನಡೆಯಲಿದೆ. 9 ಸ್ಥಾನಗಳಿಗೆ 21 ಮಂದಿ ನಡುವೆ ಸೆಣಸಾಟವಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್ ಮುಖಂಡರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಚುನಾವಣಾ ಕಣ ರಂಗೇರಿದೆ.

ADVERTISEMENT

ಮತದಾರರ ಓಲೈಕೆಗೆ ಹಣ, ಚಿನ್ನಾಭರಣದ ಆಮಿಷವೊಡ್ಡಲಾಗುತ್ತಿದೆ. ಕೆಲ ತಾಲ್ಲೂಕುಗಳಲ್ಲಿ ಬೈಕ್‌ ನೀಡಿ ಮತದಾರರನ್ನು ಸೆಳೆಯಲಾಗುತ್ತಿದೆ. ಮತ್ತೆ ಕೆಲವೆಡೆ ಮತದಾರರನ್ನು ವಿಮಾನ, ಐಷಾರಾಮಿ ಬಸ್‌ಗಳಲ್ಲಿ ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ.

ಅವಿರೋಧ ಆಯ್ಕೆ: ಬಂಗಾರಪೇಟೆ ತಾಲ್ಲೂಕು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಮುಖಂಡ ಹಾಗೂ ಒಕ್ಕೂಟದ ಹಾಲಿ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಅವರ ವಿರುದ್ಧ ಕಣಕ್ಕಿಳಿದಿದ್ದ ಹುನುಕುಂದದ ಬಿ.ಎಂ.ವೆಂಕಟೇಶ್, ಚಂದ್ರೇಗೌಡ, ಬಳವನಹಳ್ಳಿಯ ವೆಂಕಟರಾಮರೆಡ್ಡಿ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಜಯಸಿಂಹ ಅವರ ಗೆಲುವಿನ ಹಾದಿ ಸುಗಮವಾಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಿಂದ ಕಣಕ್ಕಿಳಿದಿದ್ದ ಹಾಲಿ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಕಾಂತರಾಜ್ ಸಹ ಅವಿರೋಧ ಆಯ್ಕೆಯಾಗಿದ್ದು, ಅವರ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿ ಬೆಂಬಲಿತ ಶ್ರೀನಿವಾಸರೆಡ್ಡಿ, ಲಂಕಪ್ಪ ನಾಮಪತ್ರ ಹಿಂಪಡೆದಿದ್ದಾರೆ.

ಗುಡಿಬಂಡೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಶ್ವತ್ಥರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸುನಂದಮ್ಮ ಅವರ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮುಖಂಡರ ಒತ್ತಾಯಕ್ಕೆ ಮಣಿದು ಕಣದಿಂದ ಹಿಂದೆ ಸರಿದರು. ಹೀಗಾಗಿ ಅಶ್ವತ್ಥರೆಡ್ಡಿ ಮತ್ತು ಸುನಂದಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.