ADVERTISEMENT

ನಾಟಿ ಕೋಳಿಗೆ ಕಾಲುಕಟ್ಟು ರೋಗ

ಆರ್.ಚೌಡರೆಡ್ಡಿ
Published 12 ಫೆಬ್ರುವರಿ 2018, 9:10 IST
Last Updated 12 ಫೆಬ್ರುವರಿ 2018, 9:10 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಪಕ್ಕದಲ್ಲಿ ತೂಕಡಿಸುತ್ತಿರುವ ರೋಗಪೀಡತ ನಾಟಿ ಕೋಳಿಗಳು
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಮನೆಯೊಂದರ ಪಕ್ಕದಲ್ಲಿ ತೂಕಡಿಸುತ್ತಿರುವ ರೋಗಪೀಡತ ನಾಟಿ ಕೋಳಿಗಳು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ನಾಟಿ ಕೋಳಿಗಳು ಕೊಕ್ಕರೆ ರೋಗ ಹಾಗೂ ಕಾಲುಕಟ್ಟು ರೋಗಕ್ಕೆ ಬಲಿಯಾಗುತ್ತಿವೆ. ಇದರಿಂದ ನಾಟಿ ಕೋಳಿ ಸಾಕಿರುವ ರೈತರು ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಕೊಕ್ಕರೆ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಬೇಸಿಗೆ ಪ್ರಾರಂಭವಾಗುವ ಮೊದಲೇ ರೋಗ ಬಾಧೆ ತಟ್ಟಿದೆ. ರೋಗ ಪೀಡಿತ ಕೋಳಿಗಳು ಜ್ವರದಿಂದ ತೂಕಡಿಸಿ ಸಾಯುತ್ತಿವೆ.

ಕೊಕ್ಕರೆ ರೋಗಕ್ಕೆ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯ. ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವಾರದಲ್ಲಿ ನಿಗದಿತ ದಿನದಂದು ರೋಗ ನಿರೋಧ ಲಸಿಕೆ ನೀಡಲಾಗುತ್ತದೆ. ರೋಗ ಬರುವುದಕ್ಕೆ ಮೊದಲು ಲಸಿಕೆ ಕೊಡಿಸಿದರೆ ಮಾತ್ರ ರೋಗ ನಿರೋಧಕ ಶಕ್ತಿ ಬರುತ್ತದೆ. ರೋಗ ಬಂದ ಮೇಲೆ ಲಸಿಕೆ ಕೊಡಿಸುವುದರಿಂದ ಪ್ರಯೋಜನವಿಲ್ಲ ಎಂದು ಪಶುವೈದ್ಯರು ಹೇಳುತ್ತಾರೆ. ಆದರೆ ರೈತರು ತಾವು ಸಾಕಿರುವ ಕೋಳಿಗಳಿಗೆ ರೋಗ ನಿರೋಧಕ ಲಸಿಕೆ ನೀಡುವುದರ ಬಗ್ಗೆ ಗಮನ ಕೊಡುವುದಿಲ್ಲ. ರೋಗ ಬಂದ ಮೇಲೆ ಕೋಳಿ ಸತ್ತಿತು ಎಂದು ಪರಿತಪಿಸುತ್ತಾರೆ.

ರೋಗದಿಂದ ಸತ್ತ ಕೋಳಿಗಳನ್ನು ಹೂಳಬೇಕು. ಆದರೆ ರೈತರು ಹಾಗೆ ಮಾಡುವುದಿಲ್ಲ. ಸತ್ತ ಕೋಳಿಗಳನ್ನು ತಿಪ್ಪೆಗೆ ಎಸೆಯುತ್ತಾರೆ. ಈ ರೀತಿ ಮಾಡುವುದರಿಂದ ಆರೋಗ್ಯವಂತ ಕೋಳಿಗಳಿಗೂ ರೋಗ ಹರಡುತ್ತದೆ. ಸತ್ತ ಕೋಳಿಗಳು ನಾಯಿಗಳ ಪಾಲಾಗುತ್ತವೆ. ಕೋಳಿ ಮಾರಿ ನಾಲ್ಕು ಕಾಸು ಸಂಪಾದಿಸುತ್ತಿದ್ದ ಕೃಷಿಕರಿಗೆ ಹೊಡೆತ ಬಿದ್ದಿದೆ.

ADVERTISEMENT

ತಾಲ್ಲೂಕಿನಲ್ಲಿ ನಾಟಿ ಕೋಳಿ ಸಾಕಾಣಿಕೆ ಕೃಷಿಕರ ಉಪ ಕಸಬು. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿಗಳ ಸಂಖ್ಯೆ ಹೆಚ್ಚುತ್ತದೆ. ಮಣ್ಣು ಸೇರಿದ ರಾಗಿ, ಕಾಳುಗಳನ್ನು ಕೋಳಿಗೆ ಹಾಕಿ ಸಾಕಲಾಗುತ್ತದೆ. ಬಯಲಿನಲ್ಲಿ ಮೇದು ಬಂದು ಮೊಟ್ಟೆ ಇಡುವ ಹಾಗೂ ಮರಿ ಮಾಡುವ ಕೋಳಿಗಳಿಗೆ ಲೆಕ್ಕವಿಲ್ಲ.

ಇತ್ತೀಚಿನ ವರ್ಷಗಳಲ್ಲಿ ನಾಟಿ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕೊಬ್ಬಿನ ಅಂಶ ತೀರಾ ಕಡಿಮೆ ಇರುವ ಈ ಕೋಳಿಯನ್ನು ಮಾಂಸ ಪ್ರಿಯರು ಹೆಚ್ಚು ಇಷ್ಟಪಡುತ್ತಾರೆ. ಈಗೀಗ ‘ನಾಟಿ ಕೋಳಿ ಹಾಕಿಸ್ತೀರಾ’ ಎಂದು ಕೇಳುವುದು ಸಾಮಾನ್ಯವಾಗಿದೆ. ಆದ್ದರಿಂದಲೇ ನಾಟಿ ಕೋಳಿ ಬೆಲೆ ಕೆ.ಜಿಯೊಂದಕ್ಕೆ ₹ 250 ರಿಂದ 300 ಇದೆ. ಆದರೂ ಬೇಡಿಕೆ ಮಾತ್ರ ಕುಸಿದಿಲ್ಲ.

ಕೋಳಿ ಪಂದ್ಯಗಳಿಂದು ಕಾನೂನು ಬಾಹಿರವಾದರೂ ಕದ್ದು ಮುಚ್ಚಿ ಪಂದ್ಯ ಆಡುವುದುಂಟು. ಅಂಥ ಪಂದ್ಯಗಳಲ್ಲಿ ಬಳಸುವ ಜಾತಿ ಹುಂಜಗಳ ಬೆಲೆ ₹ 2,000 ದಿಂದ 5,000 ದವರೆಗೆ ಇದೆ. ಪಂದ್ಯಗಾರರು ಇಚ್ಚಿಸುವ ಬಣ್ಣದ ಹುಂಜವಾದರೆ ಅದರ ಬೆಲೆ ಇನ್ನೂ ಹೆಚ್ಚು. ನಾಟಿ ಮೊಟ್ಟೆಯ ಬೆಲೆಯೂ ಗಗನಕ್ಕೇರಿದೆ. ಮೊಟ್ಟೆಯೊಂದು ₹ 20 ರಿಂದ 25ರ ವರೆಗೆ ಮಾರಾಟ ವಾಗುತ್ತಿದೆ. ಬಾಯ್ಲರ್‌ ಕೋಳಿಗಳಿಗೆ ನೀಡುವಂತೆ ನಾಟಿ ಕೋಳಿಗೆ ಯಾವುದೇ ಔಷಧಿ ಅಥವಾ ಲಸಿಕೆ ನೀಡುವುದಿಲ್ಲ. ಇದೂ ಸಹ ಇದರ ಬೇಡಿಕೆಗೆ ಕಾರಣವಾಗಿದೆ.

ಮಾಂಸದ ಹೋಟೆಲ್‌, ಡಾಬಾ ಅಥವಾ ಮೆಸ್‌ಗಳಲ್ಲಿ ಈಗ ನಾಟಿ ಕೋಳಿ ಸಾರು ಸಾಮಾನ್ಯವಾಗಿ ಸಿಗುತ್ತದೆ. ಈ ಹಿಂದೆ ಇದಕ್ಕೆ ಅಷ್ಟು ಮಾನ್ಯತೆ ಇರಲಿಲ್ಲ.

ಕಳೆದ ಸುಗ್ಗಿ ಕಾಲದಿಂದ ಈಚೆಗೆ ಗ್ರಾಮೀಣ ಪ್ರದೇಶದಲ್ಲಿ ಕೋಳಿಗಳು ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತಿದ್ದವು. ಆದರೆ ಈಗ ರೋಗ ಕಾಣಿಸಿಕೊಂಡಿದೆ. ರೋಗ ಕಾಣಿಸಿಕೊಂಡಿತೆಂದರೆ ಕೋಳಿ ಬೆಲೆ ಇಳಿಯುತ್ತವೆ. ಮಾರುಕಟ್ಟೆಯಲ್ಲಿ ರೋಗದ ಕೋಳಿ ಎಂದು ಚೌಕಾಸಿ ಮಾಡಿ ಕಡಮೆ ಬೆಲೆಗೆ ಖರೀದಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ರೈತರಿಗೆ ನಷ್ಟ ಉಂಟಾದರೆ, ಕೋಳಿ ಖರೀದಿಸುವ ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವಾಗುತ್ತದೆ.

ಕ್ರಮ ಕೈಗೊಳ್ಳಿ

ಕೊಕ್ಕರೆ ರೋಗ ನಿಯಂತ್ರಣಕ್ಕೆ ಪಶು ವೈದ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆ ಮನೆಗೆ ತೆರಳಿ ರೋಗ ನಿರೋಧಕ ಚುಚ್ಚುಮದ್ದು ನೀಡುವುದರ ಮೂಲಕ ಕೋಳಿಗಳು ಸಾಯುವುದನ್ನು ತಪ್ಪಿಸಬೇಕು ಎಂದು ರೈತ ಈರಪ್ಪರೆಡ್ಡಿ ಆಗ್ರಹಿಸಿದರು.

* * 

ಕೊಕ್ಕರೆ ರೋಗದಿಂದ ರೈತರಿಗೆ ನಷ್ಟವಾಗುತ್ತಿದೆ. ನಾಲ್ಕು ಕಾಸು ಗಳಿಸಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.
ರಾಜಣ್ಣ, ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.