ಬಂಗಾರಪೇಟೆ: ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಕೆ.ಎಂ. ಮಂಜುನಾಥ್ ತಮ್ಮ ಜಮೀನಿನಲ್ಲಿ ನಿಂಬೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
ನಿಂಬೆಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿರುವ ಕಾರಣ ನಿಂಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇದ್ದೇ ಇರುತ್ತದೆ. ಈ ಕಾರಣಕ್ಕಾಗಿ ಸತತ 70 ವರ್ಷಗಳಿಂದ ನಿಂಬೆ ಕೃಷಿಯನ್ನೇ ಪಾಲಿಸುತ್ತಿದ್ದೇನೆ. ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಒಂದು ಗಿಡಕ್ಕೆ ₹250ರಂತೆ ಒಂದು ಸಾವಿರ ಗಿಡಗಳನ್ನು ತಂದು ನಾಟಿ ಮಾಡಿದ್ದೇನೆ ಎನ್ನುತ್ತಾರೆ ರೈತ ಮಂಜುನಾಥ್.
ನಿಂಬೆಯನ್ನು ಹೆಚ್ಚು ಲಾಭದಾಯಕ ಕೃಷಿಯಾಗಿ ಪರಿಗಣಿಸಲಾಗುತ್ತದೆ. ಇದರ ಸಸ್ಯಗಳು ಒಮ್ಮೆ ಸಂಪೂರ್ಣವಾಗಿ ಬೆಳೆದು ನಿಂತರೆ, ಹಲವು ವರ್ಷಗಳವರೆಗೆ ಇಳುವರಿ ನೀಡುತ್ತದೆ. ವಿವಿಧ ರಾಜ್ಯಗಳಲ್ಲಿ ರೈತರು ವಿವಿಧ ತಳಿಯ ನಿಂಬೆ ಬೆಳೆಯುತ್ತಾರೆ. ನಿಂಬೆ ಗಿಡವನ್ನು ಒಮ್ಮೆ ನೆಟ್ಟರೆ 10 ವರ್ಷಗಳವರೆಗೆ ಇಳುವರಿ ನೀಡುತ್ತದೆ. ನಿಂಬೆ ಗಿಡವು ಸುಮಾರು 3 ವರ್ಷಗಳ ನಂತರ ಚೆನ್ನಾಗಿ ಬೆಳೆಯುತ್ತದೆ. ಇದರ ಸಸ್ಯಗಳು ವರ್ಷವಿಡೀ ಇಳುವರಿ ನೀಡುತ್ತವೆ ಎಂದು ಮಂಜುನಾಥ್ ತಿಳಿಸುತ್ತಾರೆ.
ಆದರೆ, ನಿಂಬೆ ಸಸಿ ನಾಟಿ ಮಾಡಿದ ಬಳಿಕ ಅವುಗಳ ಆರೈಕೆ ಮಾತ್ರ ಕಟ್ಟುನಿಟ್ಟಾಗಿ ಮಾಡಲೇಬೇಕು. ಇಲ್ಲದಿದ್ದರೆ, ಗಿಡ ಬೆಳೆಯದೆ ಇರುವ ಸಾಧ್ಯತೆ ಇದೆ. ಒಮ್ಮೆ ಇಳುವರಿ ನೀಡಲು ಆರಂಭಿಸಿದರೆ, ಒಂದು ಗಿಡದಲ್ಲಿ ಸರಾಸರಿ 20–30 ಕೆ.ಜಿಯಷ್ಟು ನಿಂಬೆಗಳನ್ನು ಕಾಣಬಹುದು.
ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿದ್ದು, ಬೇಸಿಗೆ ಕಾಲದಲ್ಲಿ ನಿಂಬೆಹಣ್ಣುಗಳು ಷರಬತ್ತು ಸೇರಿದಂತೆ ಇನ್ನಿತರ ಪಾನೀಯದೊಂದಿಗೆ ಜನರ ದಣಿವನ್ನು ನಿವಾರಿಸುತ್ತದೆ. ತರಕಾರಿ ಮಾರಾಟಗಾರರು ಒಂದು ನಿಂಬೆಯನ್ನು ₹5ಕ್ಕೆ ಮಾರುತ್ತಾರೆ. ಮಾರುಕಟ್ಟೆಯಲ್ಲಿ ನಿಂಬೆಹಣ್ಣಿನ ಬೆಲೆ ಕೆ.ಜಿಗೆ ₹40ರಿಂದ ₹70 ಇದೆ. ಈ ಪ್ರಕಾರ ರೈತ ತನ್ನ ಒಂದು ಎಕರೆಯಲ್ಲಿ ನಿಂಬೆ ಬೆಳೆದರೆ ವಾರ್ಷಿಕ ₹4–5 ಲಕ್ಷ ಆದಾಯವನ್ನು ಸುಲಭವಾಗಿ ಗಳಿಸಬಹುದು ಎಂದು ಕೆ.ಎಂ. ಮಂಜುನಾಥ್ ಮಾಹಿತಿ ನೀಡುವರು.
ನರೇಗಾ ಯೋಜನೆಯಲ್ಲಿ ಒಂದು ಘಟಕಕ್ಕೆ ₹48 ಸಾವಿರ ರೂಪಾಯಿಗಳ ಧನಸಹಾಯ ಮತ್ತು ಹನಿ ನೀರಾವರಿ ಅಳವಡಿಸಿಕೊಳ್ಳುಲು ಶೇ 90 ಸಹಾಯ ಧನ ದೊರೆಯುತ್ತದೆ. ಈ ಯೋಜನೆಯ ಸದುಪಯೋಗಪಡೆದುಕೊಂಡು ರೈತರು ನಿಂಬೆ ಬೆಳೆಯಬಹುದು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ನವೀನ ಕುಮಾರಿ ತಿಳಿಸುತ್ತಾರೆ.
ಕಡಿಮೆ ವೆಚ್ಚದಲ್ಲಿ ನಿಂಬೆ ತೋಟ ಮಾಡಬಹುದು. ನಿಂಬೆಹಣ್ಣಿಗೆ ವರ್ಷವಿಡೀ ಬೇಡಿಕೆ ಇರುವುದರಿಂದ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸದು. ಉತ್ತಮ ಆದಾಯ ಗಳಿಸಬಹುದು.ಕೆ.ಎಂ. ಮಂಜುನಾಥ್, ನಿಂಬೆ ಬೆಳೆಗಾರ
ತೋಟಗಾರಿಕೆ ಇತರೆ ಬೆಳೆಗಿಂತ ನಿಂಬೆ ಬೆಳೆಯು ಉತ್ತಮವಾದ ಆಯ್ಕೆ. ನಿಂಬೆ ಹಣ್ಣಿಗೆ ವರ್ಷ ಪೂರ್ತಿ ಉತ್ತಮ ಬೆಲೆ ಮತ್ತು ಬೇಡಿಕೆ ಇದ್ದೇ ಇರುತ್ತದೆ .ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಮಂಜುನಾಥ ತಮ್ಮ ತೋಟದಲ್ಲಿ ಬೆಳೆದ ನಿಂಬೆ ಗಿಡಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.