ADVERTISEMENT

ಗುಂಡಿ ಮುಚ್ಚಲು ‘ಎ’ ಖಾತಾ ಹೆಸರಲ್ಲಿ ಸುಲಿಗೆ: ನಿಖಿಲ್ ಕುಮಾರಸ್ವಾಮಿ ಆರೋಪ

ರಾಜ್ಯ ಸರ್ಕಾರದ ದೀಪಾವಳಿ ಕೊಡುಗೆ ಕುರಿತು ಜೆಡಿಎಸ್‌ನಿಂದ ಸದ್ಯದಲ್ಲೇ ವಾಸ್ತವ ಬಹಿರಂಗ..

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 4:53 IST
Last Updated 20 ಅಕ್ಟೋಬರ್ 2025, 4:53 IST
ಕೋಲಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು
ಕೋಲಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು   

ಕೋಲಾರ: ದೀಪಾವಳಿ ಕೊಡುಗೆ ಕೊಡುವುದಾಗಿ ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ‘ಎ’ ಖಾತಾ ನೆಪದಲ್ಲಿ ಸಾವಿರಾರು ಕೋಟಿ ಸುಲಿಗೆ ಮಾಡಿ ಬೆಂಗಳೂರು ಗುಂಡಿಗಳನ್ನು ಮುಚ್ಚಲು ಮುಂದಾಗಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಭಾನುವಾರ ಮುಳಬಾಗಿಲಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಾರ್ಗ ಮಧ್ಯೆ ನಗರದ ಬೈಪಾಸ್‌ ರಸ್ತೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರದ ದೀಪಾವಳಿ ಬಂಪರ್ ಕೊಡುಗೆ ವಿಚಾರವನ್ನು ಸದ್ಯದಲ್ಲೇ ಜೆಡಿಎಸ್ ಪಕ್ಷದಿಂದ ರಾಜ್ಯದ ಜನತೆ ಮುಂದೆ ಬಿಡುಗಡೆ ಮಾಡಲಿದ್ದೇವೆ. ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆ ಮಾಡಲು ಉಪಮುಖ್ಯಮಂತ್ರಿ ಹೊರಟಿದ್ದಾರೆ. ಗುಂಡಿ ಮುಚ್ಚಲು ಸಾವಿರ ಕೋಟಿ ರೂಪಾಯಿ ಬೇಕಿದ್ದು, ಹಣ ಹೊಂದಿಸಿಕೊಳ್ಳಬೇಕಲ್ಲವೇ? ಅರ್ಜಿ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ ಎಂದು ದೂರಿದರು.

ADVERTISEMENT

30x40 ನಿವೇಶನಕ್ಕೆ ಲಕ್ಷಗಟ್ಟಲೇ ಹಣ ಕಿತ್ತುಕೊಳ್ಳುತ್ತಿದ್ದಾರೆ. ‘ಎ’ ಖಾತಾ ಮೂಲಕ ₹ 15 ಸಾವಿರ ಕೋಟಿ ವಸೂಲಿ ಮಾಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಅನುದಾನ ಸಂಬಂಧ ನ್ಯಾಯಾಲಯ ಮೊರೆ ಹೋಗಿರುವ ಜೆಡಿಎಸ್‌ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿ, ‘ಇದು ಅವರೊಬ್ಬರ ಪರಿಸ್ಥಿತಿ ಅಲ್ಲ. ಜೆಡಿಎಸ್, ಬಿಜೆಪಿ ಶಾಸಕರೆಲ್ಲರದ್ದೂ ಇದೇ ಪರಿಸ್ಥಿತಿ. ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಹೋರಾಟ ಮಾಡುತ್ತಿದ್ದೇವೆ’ ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ಇದರಿಂದೇನು ರಾಜ್ಯದ ಅಭಿವೃದ್ಧಿ ಆಗಲ್ಲ. ಈಗಿರುವ ಸಚಿವ ಸಂಪುಟದಲ್ಲಿ ಇರುವವರನ್ನು ಕೈಬಿಟ್ಟು ಹೊಸ ಮುಖಗಳಿಗೆ ನೀಡಿದರೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಎಂದು ಹರಿಹಾಯ್ದರು.

ಗೂಗಲ್ ಸಂಬಂಧಿಸಿದ ಎಐ ಹಬ್ ಬೆಂಗಳೂರಿನಿಂದ ಆಂಧ್ರಕ್ಕೆ ಹೋಗಿದೆ. ಬೆಂಗಳೂರು ನಗರದಲ್ಲಿ ಏನು ಕಡಿಮೆ ಆಗಿತ್ತು? ಇದರಿಂದ ರಾಜ್ಯಕ್ಕೆ ನಷ್ಟವಾಗಿದೆ. ಐ.ಟಿ., ಬಿ.ಟಿ ವಲಯವನ್ನು ಬೆಂಗಳೂರಿಗೆ ತಂದವರು ದೇವೇಗೌಡರು. ರಾಜ್ಯಕ್ಕೆ ಆಗಿರುವ ನಷ್ಟದ ಬಗ್ಗೆ ಚರ್ಚೆ ಮಾಡದೆ ಆರ್‌ಎಸ್‌ಎಸ್‌ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದು ಕಿಡಿಕಾರಿದರು.

ಕುಮಾರಣ್ಣ ಸಚಿವರಾಗಿ ಕೇಂದ್ರಕ್ಕೆ ಹೋಗಿದ್ದರೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವೇನೂ ಮಂಕಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಕುಮಾರಣ್ಣ ಸ್ಪಂದಿಸುತ್ತಾ, ಪ್ರತಿ ವಿಚಾರದ ಬಗ್ಗೆಯೂ ಚರ್ಚೆ ಮಾಡುತ್ತಿರುತ್ತಾರೆ. ಆದರೆ, ಸದನದಲ್ಲಿ ಕುಮಾರಣ್ಣ ಅವರಂಥ ನಾಯಕರ ಕೊರತೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಅವರು ರಾಜ್ಯಕ್ಕೆ ಬರಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ತೂಪಲ್ಲಿ ಚೌಡರೆಡ್ಡಿ, ಜೆ.ಕೆ ಕೃಷ್ಣಾರೆಡ್ಡಿ ಇದ್ದರು.

ಮೈತ್ರಿ ಗಟ್ಟಿಯಾಗಿ ಮುಂದುವರಿಯಲಿದೆ

ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಗಟ್ಟಿಯಾಗಿದ್ದು ಮುಂದುವರಿಯಲಿದೆ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಈಗಾಗಲೇ ದೇವೇಗೌಡರು ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಅವರು ಗಟ್ಟಿ ನಿಲುವಿಂದಲೇ ಮೈತ್ರಿಗೆ ಒಪ್ಪಿಗೆ ನೀಡಿದ್ದಾರೆ. ಮೈತ್ರಿಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ವಾತಾವರಣ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಆರ್‌ಎಸ್‌ಎಸ್‌ನಿಂದ ದೇಶ ಕಟ್ಟುವ ಕೆಲಸ

ಆರ್‌ಎಸ್‌ಎಸ್‌ ಸಂಘಟನೆ ದೇಶ ಕಟ್ಟುವ ಕೆಲಸ ಮಾಡಿಕೊಂಡು ಬಂದಿದೆ. ನೂರು ವರ್ಷ ಪೂರೈಸಿರುವ ಸಂಘ ಕೂಡ. ಆರ್‌ಎಸ್‌ಎಸ್‌ನಿಂದ ದೇಶಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಶಿಸ್ತು ಬದ್ಧವಾಗಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ನ ಕೆಲ ವ್ಯಕ್ತಿಗಳು ವಿಚಾರಗಳ ದಾರಿ ತಪ್ಪಿಸಲು ಮುಂದಾಗಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.