ADVERTISEMENT

ಕೋಲಾರ | ಕೆಪಿಸಿಸಿ ಅಧ್ಯಕ್ಷರ ಪದಗ್ರಹಣದ ನೇರ ಪ್ರಸಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 12:59 IST
Last Updated 1 ಜೂನ್ 2020, 12:59 IST

ಕೋಲಾರ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರ ಅಧಿಕಾರ ಸ್ವೀಕಾರ ಸಮಾರಂಭ ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆ ಬಳಿಕ ನಡೆಯಲಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾರಂಭ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು’ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿ.ವೆಂಕಟಮುನಿಯಪ್ಪ ತಿಳಿಸಿದರು.

ಕೆಪಿಸಿಸಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಂಬಂಧ ತಾಲ್ಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಸೋಮವಾರ ನಡೆದ ಸುಗಟೂರು ಹೋಬಳಿಯ 5 ಗ್ರಾ.ಪಂ ವ್ಯಾಪ್ತಿಯ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಕಾರ್ಯಕರ್ತರು ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡೋಣ’ ಎಂದರು.

‘ಜೂನ್‌ 7ರಂದು ನಡೆಯಬೇಕಿದ್ದು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಮುಂದೂಡಲಾಗಿದೆ. ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆಯಾದ ನಂತರ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ. ಈ ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕಾರ್ಯಕ್ರಮ ನಿಗದಿಯಾದ ದಿನ ನಗರ ಪ್ರದೇಶದಲ್ಲಿ 3 ವಾರ್ಡ್‌ಗಳಿಂದ ಒಂದರಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾ.ಪಂಗೆ ಒಂದು ಕಡೆ ಸಮಾರಂಭದ ನೇರಪ್ರಸಾರ ವೀಕ್ಷಣೆಗೆ ಜಾಗ ಗುರುತಿಸಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪ್ರತಿ ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಹೆಗಲು ಕೊಟ್ಟು ಮುನ್ನಡೆದರೆ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ’ ಎಂದು ಸಲಹೆ ನೀಡಿದರು.

‘ನೇರ ಪ್ರಸಾರ ವೀಕ್ಷಣೆ ಜತೆಗೆ ಪ್ರತಿ ಗ್ರಾಪಂ ಕಾರ್ಯಕ್ರಮವನ್ನು ಇಡೀ ರಾಜ್ಯ ನೋಡುವಂತಾಗಲಿದೆ. ಇಲ್ಲಿಂದ ಕಾರ್ಯಕರ್ತರು ಮೊಬೈಲ್‌ಗೆ ಕರೆ ಮಾಡಿದರೆ ಕೃತಜ್ಞತೆಯ ಸಂದೇಶ ಬರುವಂತೆ ಮಾಡಿ ಅಭಿಯಾನ ನಡೆಸಲಾಗುತ್ತಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಅನಿಲ್‌ಕುಮಾರ್ ವಿವರಿಸಿದರು.

‘ನೂತನ ಅಧ್ಯಕ್ಷರ ಜತೆಗೆ ಮೂವರು ಕಾರ್ಯಾಧ್ಯಕ್ಷರು ಸಂವಿಧಾನದ ಪೀಠಿಕೆ ಹಾಗೂ ಪಕ್ಷದ ತತ್ವ ಪಾಲಿಸುವ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡುತ್ತಾರೆ. ಇದೇ ವೇಳೆ ನೇರ ಪ್ರಸಾರ ವೀಕ್ಷಿಸುವ ಪ್ರತಿ ಕಾರ್ಯಕರ್ತನೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮದನಹಳ್ಳಿ ಗ್ರಾ.ಪಂ ಅಧ್ಯಕ್ಷ ಆನಂದ್, ಸುಗಟೂರು ಎಸ್‍ಎಫ್‌ಸಿಎಸ್‌ ಅಧ್ಯಕ್ಷ ತಿಮ್ಮರಾಯಪ್ಪ, ಎಪಿಎಂಸಿ ನಿರ್ದೇಶಕ ವೆಂಕಟೇಶ್, ಸುಗಟೂರು, ಮದನಹಳ್ಳಿ, ತೊಟ್ಲಿ, ಜನ್ನಘಟ್ಟ, ಉರಿಗಿಲಿ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.