ADVERTISEMENT

ಸಾಮರಸ್ಯ ಕದಡಿದರೆ ಕ್ರಮ: ತಮಿಳು, ಕನ್ನಡ ಭಾಷಿಕರ ಸಭೆಯಲ್ಲಿ ಡಿವೈಎಸ್ಪಿ ಎಚ್ಚರಿಕೆ

ಕೆಜಿಎಫ್‌: ತಮಿಳು, ಕನ್ನಡ ಭಾಷಿಕರ ಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 3:47 IST
Last Updated 23 ಜುಲೈ 2021, 3:47 IST
ಕೆಜಿಎಫ್ ರಾಬರ್ಟಸನ್‌ ಪೇಟೆಯಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಮುರಳೀಧರನ್ ಮಾತನಾಡಿದರು. ತಹಶೀಲ್ದಾರ್ ಕೆ.ಎನ್. ಸುಜಾತಾ, ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜ್ ಹಾಜರಿದ್ದರು
ಕೆಜಿಎಫ್ ರಾಬರ್ಟಸನ್‌ ಪೇಟೆಯಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಮುರಳೀಧರನ್ ಮಾತನಾಡಿದರು. ತಹಶೀಲ್ದಾರ್ ಕೆ.ಎನ್. ಸುಜಾತಾ, ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜ್ ಹಾಜರಿದ್ದರು   

ಕೆಜಿಎಫ್: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡುವವರ ಮತ್ತು ಅದರ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರನ್ನು ಗೂಂಡಾ ಪಟ್ಟಿಗೆ ಸೇರಿಸಲಾಗುವುದು ಎಂದು ಡಿವೈಎಸ್ಪಿ ಮುರಳೀಧರ್ ಎಚ್ಚರಿಸಿದರು.

ರಾಬರ್ಟಸನ್ ಪೇಟೆಯ ಕಿಂಗ್ ಜಾರ್ಜ್ ಹಾಲ್‌ನಲ್ಲಿ ಗುರುವಾರ ಕನ್ನಡ ಮತ್ತು ತಮಿಳು ಭಾಷಿಕರ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದರು.

ಜಾತಿ, ಮತ, ಭಾಷೆಯ ಮೇಲೆ ಸಮಾಜದಲ್ಲಿ ವಿಷಬೀಜ ಬಿತ್ತುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಹ ಯೋಚಿಸಲಾಗುವುದು ಎಂದರು.

ADVERTISEMENT

ಸಾಮಾಜಿಕ ಜಾಲತಾಣಗಳನ್ನು ಸಮಾಜದ ಅಭಿವೃದ್ಧಿಗೆ ಉಪಯೋಗಿಸಬೇಕು. ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಬಳಸಬಾರದು. ಜುಲೈ 10ರಂದು ವಾಟಾಳ್ ನಾಗರಾಜ್ ಮಾಡಿದ ಕೃತ್ಯಕ್ಕೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದರು.

ವಾಟಾಳ್‌ ಘಟನೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಗಂಡಸುತನ ಪ್ರದರ್ಶನ ಎಂಬಿತ್ಯಾದಿ ಹೇಳಿಕೆ ನೀಡುವುದು ಖಂಡನೀಯ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ರಾಜಕುಮಾರ್ ಅಪಹರಣ, ಕಾವೇರಿ ಗಲಾಟೆ ಸಂದರ್ಭದಲ್ಲಿ ಕೂಡ ಕೆಜಿಎಫ್‌ನಲ್ಲಿ ಗಲಾಟೆಯಾಗಿಲ್ಲ. ತಾಲ್ಲೂಕಿನಲ್ಲಿ ಭಾಷಾ ಸಾಮರಸ್ಯ ಚೆನ್ನಾಗಿದೆ. ಅದನ್ನು ಇನ್ನು ಮುಂದೆಯೂ ಉಳಿಸಿ ಬೆಳೆಸಬೇಕು. ತಾಲ್ಲೂಕನ್ನು ಮಾದರಿಯಾಗಿ ಮಾಡಬೇಕು. ಅನಗತ್ಯ ಪ್ರಚಾರದ ಕಡೆಗೆ ಯುವಕರು ಗಮನ ನೀಡದೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದೇ 26ರಂದು ವಾಟಾಳ್ ನಾಗರಾಜ್ ನಗರಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಅದರ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುತ್ತದೆ. ಈ ವಿಷಯವಾಗಿ ಅಪಪ್ರಚಾರ ಮಾಡಬಾರದು ಎಂದು ಮನವಿ ಮಾಡಿದರು.

ಕೆಜಿಎಫ್‌ನಲ್ಲಿ ರೌಡಿ ಚಟುವಟಿಕೆ ಮತ್ತು ಗಾಂಜಾ ಪ್ರಕರಣಗಳು ಹೆಚ್ಚಾಗಿವೆ ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಈ ಕಪ್ಪುಚುಕ್ಕಿ ನಿವಾರಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳುತ್ತದೆ. ಅದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕೂಡ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

‘ನಗರದ ಜನತೆ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದಾರೆ. ಆದರೆ ಕೆಲವರು ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಕೊಟ್ಟು ಅಶಾಂತಿ ಸೃಷ್ಟಿಸುತ್ತಿದ್ದಾರೆ. ಒಳ್ಳೆಯ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿವೃದ್ಧಿಯತ್ತ ಗಮನ ಹರಿಸಬೇಕು’ ಎಂದು ತಹಶೀಲ್ದಾರ್ ಕೆ.ಎನ್. ಸುಜಾತಾ ಹೇಳಿದರು.

ಕನ್ನಡ ಸಂಘದ ಅಧ್ಯಕ್ಷ ಎನ್.ಆರ್. ವಿಜಯಶಂಕರ್, ಕನ್ನಡ ಶಕ್ತಿ ಕೇಂದ್ರದ ಬಾ.ಹಾ. ಶೇಖರಪ್ಪ, ತಮಿಳು ಸಂಘಟನೆಯ ಜಯಶೀಲನ್, ಸರ್ಕಲ್ ಇನ್‌ಸ್ಪೆಕ್ಟರ್‌ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.