ADVERTISEMENT

ಎಪಿಎಂಸಿ: ಸಮಸ್ಯೆ ಪರಿಹಾರಕ್ಕೆ ಮನವಿ

ಮಾರುಕಟ್ಟೆ ಅಭಿವೃದ್ಧಿ ನಿರ್ಲಕ್ಷ್ಯ: ರೈತ ಸಂಘ ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 16:07 IST
Last Updated 21 ನವೆಂಬರ್ 2019, 16:07 IST
ಎಪಿಎಂಸಿ ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿ ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿನ ಮೂಲಸೌಕರ್ಯ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಗುರುವಾರ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

‘ಎಪಿಎಂಸಿ ಆಡಳಿತ ಮಂಡಳಿಗೆ ಸುಂಕದ ರೂಪದಲ್ಲಿ ಕೋಟಿಗಟ್ಟಲೆ ಆದಾಯ ಬರುತ್ತದೆ. ಆದರೆ, ಆಡಳಿತ ಮಂಡಳಿಯು ಮಾರುಕಟ್ಟೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾರುಕಟ್ಟೆ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.

‘ಎಪಿಎಂಸಿ ಆವರಣ ತುಂಬಾ ಕಿರಿದಾಗಿದೆ. ಈ ಸಂಬಂಧ ಎಪಿಎಂಸಿ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತಕ್ಕೆ ದೂರು ಕೊಟ್ಟು ಮಾರುಕಟ್ಟೆ ವಿಸ್ತರಣೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣಗೌಡ ದೂರಿದರು.

ADVERTISEMENT

‘ಮಾರುಕಟ್ಟೆಯಲ್ಲಿ ರೈತರ ವಿಶ್ರಾಂತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಮತ್ತೊಂದೆಡೆ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ರೈತರು ಹಾಗೂ ವರ್ತಕರು ಬವಣೆ ಪಡುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲ್ಲಾಳಿ ಹಾವಳಿ: ‘ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದ್ದು, ರೈತರಿಂದ ನಿಯಮಬಾಹಿರವಾಗಿ ಕಮಿಷನ್ ಪಡೆಯಲಾಗುತ್ತಿದೆ. ಕೃಷಿ ಉತ್ಪನ್ನಗಳ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ರೈತರು ಈ ಅಕ್ರಮ ಪ್ರಶ್ನಿಸಿದರೆ ಮಂಡಿ ಮಾಲೀಕರು ಹರಾಜು ನಡೆಸುವುದಿಲ್ಲ ಎಂದು ಬೆದರಿಸುತ್ತಾರೆ. ಅಧಿಕಾರಿಗಳು ದಲ್ಲಾಳಿಗಳು ಮತ್ತು ಮಂಡಿ ಮಾಲೀಕರ ಜತೆ ಕೈಜೋಡಿಸಿ ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ಸಂಘಟನೆ ಸದಸ್ಯರು ಆರೋಪಿಸಿದರು.

‘ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಸ್ಥಳೀಯ ಎಪಿಎಂಸಿಗೆ ಟೊಮೆಟೊ ತರಿಸುವುದನ್ನು ನಿಲ್ಲಿಸಬೇಕು. ದಲ್ಲಾಳಿ ಹಾವಳಿ ಹಾಗೂ ಕಮಿಷನ್‌ ದಂಧೆಗೆ ಕಡಿವಾಣ ಹಾಕಬೇಕು. ರೈತರು ಹಾಗೂ ವರ್ತಕರಿಗೆ ಅನುಕೂಲವಾಗುವ ಜಾಗಕ್ಕೆ ಮಾರುಕಟ್ಟೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌, ಸದಸ್ಯರಾದ ನಾಗೇಶ್, ತಿಮ್ಮಣ್ಣ, ಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.