ADVERTISEMENT

ಪರಿಶಿಷ್ಟರ ಮೇಲೆ ದೌರ್ಜನ್ಯ: ಜಿಲ್ಲಾಡಳಿತ ವಿಫಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 16:31 IST
Last Updated 21 ಸೆಪ್ಟೆಂಬರ್ 2020, 16:31 IST

ಕೋಲಾರ: ‘ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಯುವಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಫಲವಾಗಿವೆ’ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಸ್ಥಾಪಕ ಅಧ್ಯಕ್ಷ ಆರ್.ಕೋದಂಡರಾಮ್ ಆರೋಪಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬಸವನಪಲ್ಲಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ನರಸಿಂಹಯ್ಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಸಂಗತಿ ಮಾಧ್ಯಮದಲ್ಲಿ ಬರುವವರೆಗೂ ಅಧಿಕಾರಿಗಳು ಪ್ರಕರಣದ ಬಗ್ಗೆ ಗಮನ ಹರಿಸಿರಲಿಲ್ಲ’ ಎಂದು ದೂರಿದರು.

‘ಗ್ರಾಮದ ರಾಜಾರೆಡ್ಡಿ, ಸುರೇಂದ್ರರೆಡ್ಡಿ ಮತ್ತು ಇತರರು ನರಸಿಂಹಯ್ಯ ಕುಟುಂಬದ ಮೇಲೆ ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದರು. ಆದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಇದು ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ಹಾಗೂ ಪೊಲೀಸರ ವೈಫಲ್ಯಕ್ಕೆ ಸಾಕ್ಷಿ’ ಎಂದು ಕಿಡಿಕಾರಿದರು.

ADVERTISEMENT

‘ಪರಿಶಿಷ್ಟರ ರಕ್ಷಣೆಗೆ ಇರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಜಿಲ್ಲಾಧಿಕಾರಿ ಲೋಪ ಎಸಗಿದ್ದಾರೆ. ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಮೇಲ್ವಿಚಾರಣಾ ಮತ್ತು ಬಲವರ್ಧನಾ ಸಮಿತಿ ನಿಷ್ಕ್ರಿಯವಾಗಿದೆ. ಆದ ಕಾರಣ ಈ ಸಮಿತಿ ರದ್ದುಪಡಿಸಿ ನೂತನವಾಗಿ ಜಿಲ್ಲೆ ಮತ್ತು ತಾಲ್ಲೂಕುವಾರು ಸಮಿತಿಗಳನ್ನು ರಚಿಸಬೇಕು’ ಎಂದು ಒತ್ತಾಯಿಸಿದರು.

ಮೀಸಲಾತಿ ಅನ್ಯಾಯ: ‘ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿರುವ ಅನುದಾನ ದುರುಪಯೋಗವಾಗುತ್ತಿದೆ. ಈ ಅಕ್ರಮ ತಡೆಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಮೀಸಲಾತಿ ಪಟ್ಟಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆ. ಆದ ಕಾರಣ ಈ ಹಿಂದೆ ಇದ್ದ ಮೀಸಲಾತಿ ಪಟ್ಟಿಯನ್ನೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಸಂಘಟನೆಯ ಉಪಾಧ್ಯಕ್ಷ ಆನಂದ್‌ಕುಮಾರ್, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ವಿಜಯ್‌ಕುಮಾರ್, ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.