ADVERTISEMENT

ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಿ: ಮಹೇಶ್‌ ಜೋಶಿ ಆಗ್ರಹ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:16 IST
Last Updated 22 ಡಿಸೆಂಬರ್ 2021, 16:16 IST
ಕೋಲಾರದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಮಾತನಾಡಿದರು
ಕೋಲಾರದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಮಾತನಾಡಿದರು   

ಕೋಲಾರ: ‘ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸಬೇಕು. ಕನ್ನಡ ಬಾವುಟ ಸುಟ್ಟು ಅವಮಾನಿಸಿರುವವರನ್ನು ರಾಜ್ಯದ್ರೋಹಿಗಳೆಂದು ಪರಿಗಣಿಸಿ ಗಡಿಪಾರು ಮಾಡಬೇಕು’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಆಗ್ರಹಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಕನ್ನಡದ ಬಾವುಟ ಸುಟ್ಟಿರುವುದು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿರುವುದು ಹೇಯಕೃತ್ಯ’ ಎಂದು ಗುಡುಗಿದರು.

‘ನಾಡದ್ರೋಹಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಜೈಲಿಗೆ ಅಟ್ಟಬೇಕು. ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಅವಮಾನ ಮಾಡಿರುವುದು ರಾಷ್ಟ್ರ ಭಕ್ತರಿಗೆ ಮಾಡಿದ ಅವಮಾನವೆಂದು ಪರಿಗಣಿಸಿ ಅವರನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕನ್ನಡ ನಾಡು ನುಡಿಗೆ ಧಕ್ಕೆ ಬಾರದಂತೆ ಎಚ್ಚರ ವಹಿಸುತ್ತೇವೆ. ಪರಭಾಷಿಕರಿಂದ ಧಕ್ಕೆಯಾದರೆ ಸಾಹಿತ್ಯ ಪರಿಷತ್ತ ಮುಂದೆ ನಿಂತು ಹೋರಾಟ ನಡೆಸುತ್ತದೆ. ಕನ್ನಡವು ಅನ್ನದ ಭಾಷೆಯಾಗಬೇಕು. ಪರಿಷತ್ತನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ. ಸಾಹಿತ್ಯ ಪರಿಷತ್ ಜನಪರ ಪರಿಷತ್‌ ಆಗಿ ಪರಿವರ್ತನೆಯಾಗಬೇಕು’ ಎಂದು ಹೇಳಿದರು.

‘ಕೋಲಾರ ಜಿಲ್ಲೆಯು ರಾಜ್ಯದ ಆಕರ್ಷಣೀಯ ಪಂಥಿಯಲ್ಲಿ ಅಗ್ರಸ್ಥಾನದಲ್ಲಿದೆ. ಮುಂದಿನ 5 ವರ್ಷದೊಳಗೆ ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ. ಇದಕ್ಕೆ ಜಿಲ್ಲಾ ಪರಿಷತ್ ಸಿದ್ಧತೆ ಮಾಡಿಕೊಳ್ಳಬೇಕು. ಯಾರ ಓಲೈಕೆಗಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿಲ್ಲ. ಗಂಗರ ರಾಜಧಾನಿಯಾಗಿದ್ದ ಕೋಲಾರ ಜಿಲ್ಲೆಯು ರಾಜ್ಯದಲ್ಲಿ ಮಹತ್ವದ ಸ್ಥಾನ ಗಳಿಸಿರುವ ಪುಣ್ಯ ಭೂಮಿ’ ಎಂದರು.

ಪ್ರಾಚೀನ ಭಾಷೆ: ‘ಕನ್ನಡವು ಪ್ರಾಚೀನ ಭಾಷೆಯಾಗಿದೆ. ಜಾಗತಿಕವಾಗಿ ಗ್ರೀಕ್, ಸಂಸ್ಕೃತ ಹಾಗೂ ಕನ್ನಡವನ್ನು ಮಾತ್ರ ಪರಿಪೂರ್ಣ ಭಾಷೆಯೆಂದು ಪರಿಗಣಿಸಲಾಗಿದೆ. ಮಾತೃ ಭಾಷೆ ಯಾವುದೇ ಇರಲಿ, ಮಕ್ಕಳಿಗೆ ಕನ್ನಡ ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಭಾಷೆ ಬಳಸಿ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

‘ಪರಿಷತ್‌ ಮುಂದೆ ಜನಪರವಾಗಿರುತ್ತದೆ. ಅಧಿಕಾರ ಎನ್ನುವುದಕ್ಕಿಂತ ಜವಾಬ್ದಾರಿ ಎನ್ನುವುದು ಸೂಕ್ತ. ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಪೇಟಾ ಮುಂತಾದ ಆಡಂಬರಕ್ಕೆ ಕಡಿವಾಣ ಹಾಕುತ್ತೇವೆ. ಪುಸ್ತಕ ನೀಡುವ ಮೂಲಕ ಗೌರವಿಸುವ ಪರಿಪಾಠ ಜಾರಿಗೆ ತರುತ್ತೇವೆ’ ಎಂದು ವಿವರಿಸಿದರು.

‘ಪರಿಷತ್ತಿನ ಅಜೀವ ಸದಸ್ಯರ ಶುಲ್ಕವನ್ನು ₹ 250ಕ್ಕೆ ಇಳಿಸುತ್ತೇವೆ. ನಿವೃತ್ತ ಸೈನಿಕರು, ಅಂಗವಿಕಲರಿಗೆ ಉಚಿತ ಸದಸ್ಯತ್ವ ನೀಡಿ 1 ಕೋಟಿ ಸದಸ್ಯತ್ವ ಮಾಡಿರುವ ಗುರಿಯಿದೆ. ಆಧುನಿಕ ತಂತ್ರಜ್ಞಾನ ಆಧರಿಸಿ ಮೊಬೈಲ್‌ ಆ್ಯಪ್‌ ಮೂಲಕ ಪರಿಷತ್ತಿನ ಚುನಾವಣೆ ನಡೆಸುತ್ತೇವೆ. ಒಂದೇ ಬಾರಿಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಅಧ್ಯಕ್ಷರು ಸೇರಿದಂತೆ 4 ಮಂದಿಯ ಆಯ್ಕೆಗೆ ಮತ ಚಲಾಯಿಸುವ ಅವಕಾಶ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಕನ್ನಡ ಭವನ: ‘ಕೋಲಾರದಲ್ಲಿ ಕನ್ನಡ ಭವನ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾ ಕೇಂದ್ರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಒತ್ತು ನೀಡುತ್ತೇವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಜಿ.ಗೋಪಾಲಗೌಡ ಹೇಳಿದರು.

ಲೇಖಕರಾದ ನಾರಾಯಣಸ್ವಾಮಿ ರಚನೆಯ ‘ಹಣತೆಗಳ ಜೋಗುಳ’ ಮತ್ತು ಶ್ರೀನಿವಾಸಪ್ರಸಾದ್ ರಚನೆಯೆ ‘ಸ್ಫೂರ್ತಿಯ ಶಿಖರಗಳು’ ಕೃತಿ ಬಿಡುಗಡೆಗೊಳಿಸಲಾಯಿತು. ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ನರೇಂದ್ರ ಬಾಬು, ನಿರ್ಗಮಿತ ಸಹಾಯಕ ನಿರ್ದೇಶಕ ರವಿಕುಮಾರ್, ಲೇಖಕರಾದ ಶ್ರೀನಿವಾಸಪ್ರಸಾದ್, ನಾರಾಯಣಸ್ವಾಮಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.