ADVERTISEMENT

ನಲ್ಲಗುಟ್ಟಲ್ಲಹಳ್ಳಿ ಬಸ್‌ ತಂಗುದಾಣ ನೆಲಸಮ: ಅಧಿಕಾರಿಗಳ ವಿರುದ್ಧ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 8:10 IST
Last Updated 24 ಜನವರಿ 2026, 8:10 IST
ಬಂಗಾರಪೇಟೆ ತಾಲ್ಲೂಕಿನ ನಲ್ಲಗುಟ್ಟಲ್ಲಹಳ್ಳಿ ಗ್ರಾಮದ ಬಸ್ ತಂಗುದಾಣವನ್ನು ಬೃಹತ್ ಯಂತ್ರದ ಮೂಲಕ ನೆಲಸಮ ಮಾಡಿರುವುದು 
ಬಂಗಾರಪೇಟೆ ತಾಲ್ಲೂಕಿನ ನಲ್ಲಗುಟ್ಟಲ್ಲಹಳ್ಳಿ ಗ್ರಾಮದ ಬಸ್ ತಂಗುದಾಣವನ್ನು ಬೃಹತ್ ಯಂತ್ರದ ಮೂಲಕ ನೆಲಸಮ ಮಾಡಿರುವುದು    

ಬಂಗಾರಪೇಟೆ: ತಾಲ್ಲೂಕಿನ ನಲ್ಲಗುಟ್ಟಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಮುಖ್ಯ ರಸ್ತೆಯಲ್ಲಿ ದಶಕಗಳಿಂದ ಇದ್ದ ಬಸ್‌ ತಂಗುದಾಣವನ್ನು ವಾಣಿಜ್ಯ ಮಳಿಗೆಯೊಂದರ ಲಾಭಕ್ಕಾಗಿ ಅಧಿಕಾರಿಗಳ ಕುಮ್ಮಕ್ಕಿನಿಂದ ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಂಗಾರಪೇಟೆ - ಕಾಮಸಮುದ್ರ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ವಾಣಿಜ್ಯ ಮಳಿಗೆಗೆ ದಾರಿ ಮಾಡಿಕೊಡಲು  ಕೇತಗಾನಹಳ್ಳಿ ಪಂಚಾಯಿತಿ ಅಧಿಕಾರಿಗಳು ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಾಮೀಲಾಗಿ ಯಾವುದೇ ಸೂಚನೆ ನೀಡದೆ ಜನ ಸಂಚಾರವಿಲ್ಲದ ವೇಳೆ ಬೃಹತ್ ಯಂತ್ರದ ಮೂಲಕ ತಂಗುದಾಣ ಧ್ವಂಸಗೊಳಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಂಗುದಾಣವು ಶಿಥಿಲಗೊಂಡಿದ್ದು, ತೆರವು ಕಾರ್ಯಾಚರಣೆ ಮಾಡಲಾಗಿದೆ ಎಂದು ಪಂಚಾಯಿತಿ ಅಧಿಕಾರಿಗಳು ಸಬೂಬು ಹೇಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ADVERTISEMENT

ತಂಗುದಾಣ ತೆರವಿಗೆ ಅನುಮತಿ ನೀಡಿದ ಅಧಿಕಾರಿಗಳು ಮತ್ತು ಇದಕ್ಕೆ ಕಾರಣರಾದ ವಾಣಿಜ್ಯ ಮಳಿಗೆ ಮಾಲೀಕರ ವಿರುದ್ಧ ತಕ್ಷಣ ತನಿಖೆಯಾಗಬೇಕು. ಸಾರ್ವಜನಿಕ ಆಸ್ತಿ ನಾಶಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ನಲ್ಲಗುಟ್ಟಲ್ಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿದ್ದ ಕಾರಣ ಬಸ್ ತಂಗುದಾಣವನ್ನು ನೆಲ ಸಮ ಮಾಡಲಾಗಿದೆ. ಆ ಸ್ಥಳದಲ್ಲೇ ಹೊಸ ತಂಗುದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಯಶ್ವಂತ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇತಗಾನಹಳ್ಳಿ ಗ್ರಾ.ಪಂ.
ಮಳಿಗೆಗಳು ರಸ್ತೆಗೆ ಕಾಣಲಿ ಹಾಗೂ ಗ್ರಾಹಕರ ವಾಹನ ನಿಲುಗಡೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಳಿಗೆ ಮಾಲೀಕರು ಪ್ರಭಾವ ಬಳಸಿ ಈ ಕೃತ್ಯ ಎಸಗಿದ್ದಾರೆ.
ಹುಣಸನಹಳ್ಳಿ ಎನ್.ವೆಂಕಟೇಶ್ ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ 
ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಂಗುದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈಗ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಅವರಿಗೆ ಜಾಗವಿಲ್ಲದಂತಾಗಿದೆ.
ಸರ್ವಜ್ಞ ಆಚಾರಿ ಕಾಮಸಮುದ್ರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.