ADVERTISEMENT

ದ್ವಿಭಾಷಾ ಸೂತ್ರ ಜಾರಿಯಾಗಲಿ: ಸಮ್ಮೇಳನಾಧ್ಯಕ್ಷ ಎಂ.ಎಸ್. ರಾಮಪ್ರಸಾದ್ ಒತ್ತಾಯ

ಬಂಗಾರಪೇಟೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 3:50 IST
Last Updated 6 ಜನವರಿ 2021, 3:50 IST
ಬಂಗಾರಪೇಟೆಯಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ 9ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಪಾಲ್ಗೊಂಡಿದ್ದ ಕನ್ನಡಾಭಿಮಾನಿಗಳು
ಬಂಗಾರಪೇಟೆಯಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ 9ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಪಾಲ್ಗೊಂಡಿದ್ದ ಕನ್ನಡಾಭಿಮಾನಿಗಳು   

ಬಂಗಾರಪೇಟೆ: ‘ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಸಮಂಜಸವಲ್ಲ. ತ್ರಿಭಾಷಾ ಸೂತ್ರ ಒಪ್ಪಲು ಸಾಧ್ಯವಿಲ್ಲ. ದ್ವಿಭಾಷಾ ಸೂತ್ರವೇ ಜಾರಿಯಾಗಬೇಕು’ ಎಂದು ಸಮ್ಮೇಳನಾಧ್ಯಕ್ಷ ಎಂ.ಎಸ್.ರಾಮಪ್ರಸಾದ್ ಒತ್ತಾಯಿಸಿದರು.

ಪಟ್ಟಣದ ಆರ್.ಆರ್.ಕಲ್ಯಾಣ ಮಂಟಪದಲ್ಲಿ ಕಸಾಪ ತಾಲ್ಲೂಕು ಘಟಕ ರವಿ ಬೆಳಗೆರೆ ವೇದಿಕೆ, ಕನ್ನಡಾಭಿಮಾನಿ ಪಿ.ನಾರಾಯಣಪ್ಪ ಮಹಾದ್ವಾರ, ನಿಸಾರ್ ಅಹ್ಮದ್ ಮಹಾಮಂಟಪದಡಿ ಆಯೋಜಿಸಿದ್ದ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕರ್ನಾಟಕದಲ್ಲಿರುವ ಕೇಂದ್ರ ಕಚೇರಿಗಳು ಸೇರಿದಂತೆ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಅರ್ಜಿ ಮತ್ತಿತರ ಪತ್ರಗಳಲ್ಲಿ ಸಂಪರ್ಕ ಭಾಷೆ ಜತೆ ಕನ್ನಡವೂ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಕರ್ನಾಟಕ ಏಕೀಕರಣಗೊಂಡು 65 ವರ್ಷ ಕಳೆದಿದೆ. ಆದರೆ ಇದುವರೆಗೂ ಕನ್ನಡ ಶಿಕ್ಷಣ ಮಾಧ್ಯಮವಾಗಿಲ್ಲ. ಕನ್ನಡ ಆಡಳಿತ ಭಾಷೆಯಾಗಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಕರುನಾಡಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡವೇ ಅಗ್ರಗಣ್ಯ ಭಾಷೆಯಾಗಬೇಕು. ಕನ್ನಡ ಮತ್ತು ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು. ಸರ್ಕಾರ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಗಡಿಭಾಗದಜಿಲ್ಲೆಯಲ್ಲಿ ಎರಡು ಮೂರು ಭಾಷೆಗಳ ಪ್ರಭಾವವಿದೆ. ತೆಲುಗು, ತಮಿಳು ಭಾಷೆಗಳ ಮಧ್ಯೆ ಕನ್ನಡ ಮೆಟ್ಟಿನಿಲ್ಲಬೇಕಿದೆ. ಮಾತೃ ಭಾಷೆ ಅಭಿವೃದ್ಧಿಗೆ ನಾವೆಲ್ಲರೂ ಹೆಗಲು ಕೊಡಬೇಕಾದ ಅನಿವಾರ್ಯ ಉಂಟಾಗಿದೆ ಎಂದರು.

ಗಡಿ ಭಾಗದಲ್ಲಿ ಕನ್ನಡ ಡಿಂಡಿಮ ಬಾರಿಸುವ ಸತತ ಪ್ರಯತ್ನವನ್ನು ಕಸಾಪ ನಡೆಸುತ್ತಿದೆ ಎಂದು ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅವರು ಹೇಳಿದರು.

ವೈಶಿಷ್ಟ್ಯತೆಯ ತೊಟ್ಟಿಲು: ಚಿನ್ನಕ್ಕೆ ಹೆಸರಾಗಿದ್ದ ಈ ಪ್ರದೇಶ ಜಗತ್ಪ್ರಸಿದ್ಧ. 1934ರಲ್ಲಿ ಗಾಂಧೀಜಿ ಅವರು ಇಲ್ಲಿಗೆ ಭೇಟಿ ನೀಡಿ, ಹರಿಜನ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಮಾಡಿದ್ದರು ಎಂದು ಸಮ್ಮೇಳನಾಧ್ಯಕ್ಷ ಎಂ.ಎಸ್.ರಾಮಪ್ರಸಾದ್ ಸ್ಮರಿಸಿದರು.

ಬಂಗಾರಪೇಟೆಯಲ್ಲಿ ಅತ್ಯಂತ ಹಳೆ ರೈಲ್ವೆ ಜಂಕ್ಷನ್ ಇದೆ. ಹಲ ರಾಜವಂಶಸ್ಥರು ಇಲ್ಲಿ ಆಳ್ವಿಕೆ ನಡೆಸಿರುವ ಬಗ್ಗೆ ಶಾಸನಗಳು ಪತ್ತೆಯಾಗಿವೆ. ಬೂದಿಕೋಟೆ ಅಲ್ಲದೆ ರಾಮನಾಯಕನ ಕೋಟೆ ಕೂಡ ಇಲ್ಲಿದೆ. ಕವಿ, ಸಾಹಿತಿಗಳ ನೆಲೆಬೀಡಾಗಿದೆ ಎಂದು ವಿವರಿಸಿದರು.

ಡ್ಯಾಂ ಉದ್ಘಾಟನೆಯಾಗಲಿ: ಜಿಲ್ಲೆಯಲ್ಲಿ ನೀರಿಗೆ ಆಹಾಕಾರ ಎದ್ದಿದೆ. ನದಿ, ನಾಲೆಗಳಿಲ್ಲದ ಜಿಲ್ಲೆಯಲ್ಲಿ ಕೆರೆ, ಕುಂಟೆಗಳೇ ಜೀವಾಳ. ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸುತ್ತಿರುವ ಯರಗೋಳು ಡ್ಯಾಂ ಶೀಘ್ರವಾಗಿ ಉದ್ಘಾಟನೆಯಾಗಬೇಕು. ಈ ಡ್ಯಾಂಗೆ ಮಳೆ ನೀರೇ ಆಶ್ರಯ. ಯಾವುದಾದರು ಒಂದು ನದಿ ನೀರನ್ನು ಹರಿಸಲು ಯೋಜನೆ ರೂಪಿಸಿದರೆ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯಪಟ್ಟರು.

ಇತಿಹಾಸ ಪ್ರಸಿದ್ದ ಹೈದರ್ ಆಲಿ ಹುಟ್ಟಿದ ಸ್ಥಳ ಬೂದಿಕೋಟೆಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಪರಿಗಣಿಸಬೇಕು ಎಂದರು.

ಸುಸಜ್ಜಿತ ಮಂಟಪದಲ್ಲಿ ಸಮ್ಮೇಳನ: ಇದುವರೆಗೂ ಹೊರಾಂಗಣದಲ್ಲಿ ಆಯೋಜಿಸುತ್ತಿದ್ದ ಸಾಹಿತ್ಯ ಸಮ್ಮೇಳನ ಈ ಬಾರಿ ಒಳಾಂಗಣದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಗಮನ ಸೆಳೆಯಿತು. ವಿಸ್ತಾರವಾದ ಹಾಗೂ ಸುಸಜ್ಜಿತ ಮಂಟಪ, ಕೋವಿಡ್-19 ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನುಅನುಸರಿಸಲಾಗಿತ್ತು.

ಮಂಟಪದ ಮುಂದೆ ಪುಸ್ತಕದ ಮಳಿಗೆಗಳು, ಅಷ್ಟಪಾಲ ಎಲೆಬತ್ತಿ, ಮಾರಾಟ ಮಳಿಗೆಗಳು ತೆರೆದಿದ್ದವು. ಆದರೆ ಜನರ ಸಂಖ್ಯೆ ವಿರಳವಾಗಿದ್ದ ಕಾರಣ ವ್ಯಾಪಾರ ನಿದಾನಗತಿಯಲ್ಲಿ ಸಾಗಿತ್ತು.

ವಿಚಾರಗೋಷ್ಠಿ: ಮಧ್ಯಾಹ್ನ ಕನ್ನಡಪರ ಹೋರಾಟಗಾರ ರಂಗರಾಮಯ್ಯ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು. ತಾಲ್ಲೂಕಿನಲ್ಲಿ ಕನ್ನಡಪರ ಹೋರಾಟ ಮತ್ತು ಸಂಘಟನೆಗಳು ವಿಷಯ ಕುರಿತು ಚರ್ಚೆ ನಡೆಯಿತು. ಬಳಿಕ ಉಪನ್ಯಾಸಕಿ ಡಾ.ಕೆ.ಪ್ರಸನ್ನಕುಮಾರಿ ಅವರು ತಾಲ್ಲೂಕಿನ ಜನಪದರ ಬಗ್ಗೆ ಹಾಗೂ ಮೈ.ಸತೀಶ್ ಕುಮಾರ್ ಅವರು ಸಮ್ಮೇಳನಾಧ್ಯಕ್ಷರ ಬದುಕು, ಸಂಘಟನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷೆ ಭಾರತಿ ನಂಜುಂಡಪ್ಪ ಅವರು ಸಂಜೆ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರವಿ, ಆದರ್ಶ, ಅಲೆಕ್ಸಾಂಡರ್, ಗೋವಿಂದರಾಜ್, ಮಂಜುನಾಥ್, ವಸಂತ್, ಚಿತ್ರಾ, ಮಾರುತಿಪ್ರಸಾದ್, ಬಹುದೂರ್, ರಾಣಿಯಮ್ಮ, ಫುಲ್ಪುರಿ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯಲಕ್ಷ್ಮಿ, ಲಯನ್ ನಂದ, ಕಾ.ಹು.ಚಾನ್ಪಾಷ, ಬಿ.ಎನ್.ಉಮೇಶ್ ಇದ್ದರು. ಮಾರುತಿ ಪ್ರಸಾದ್ ತಂಡದವರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.

ತಹಶೀಲ್ದಾರ್ ದಯಾನಂದ ಅವರುರಾಷ್ಟ್ರ ಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅವರು ಕನ್ನಡ ಧ್ವಜ, ತಾಲ್ಲೂಕು ಘಟಕ ಅಧ್ಯಕ್ಷ ತೇ.ಸಿ.ಬದರೀನಾಥ್ ಅವರು ಪರಿಷತ್ತಿನ ಧ್ವಜ ಉದ್ಘಾಟಿಸಿದರು.

ಮಲ್ಲಿಕಾರ್ಜುನ ವಿಜಯಪುರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸಂಪತ್ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮೈಸೂರಿನ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಡಾ.ಕುಪ್ನಳ್ಳಿ ಎಂ.ಬೈರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ.ಕೆಂಪಯ್ಯ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶಪ್ಪ, ಅಬಕಾರಿ ಇನ್‌ಸ್ಪೆಕ್ಟರ್ ಎಂ.ಆರ್.ಸುಮಾ, ಪುರಸಭೆ ಉಪಾಧ್ಯಕ್ಷೆ ಪೊನ್ನಿ, ಶಿಕ್ಷಕರ ಸಂಘದ ಎಂ.ಆರ್.ಆಂಜನೇಯಗೌಡ, ಕರವೇ ತಾಲ್ಲೂಕು ಅಧ್ಯಕ್ಷ ರಾಮಪ್ರಸಾದ್, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮದಿಅಳಗನ್, ಕಸಪಾ ಗೌರವ ಕಾರ್ಯದರ್ಶಿ ಆರ್.ಅಶ್ವತ್, ರಂಗರಾಮಯ್ಯ,ಪುರಸಭೆ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಕೆ.ಚಂದ್ರರೆಡ್ಡಿ, ಕೇರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ನ.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.