ADVERTISEMENT

ಬಂಗಾರಪೇಟೆ|ತುಕ್ಕು ಹಿಡಿದ ಅನಿಲ ಚಿತಾಗಾರ:ಕಾಮಗಾರಿ ಅಪೂರ್ಣವಾಗಿದ್ದರೂ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:45 IST
Last Updated 1 ಫೆಬ್ರುವರಿ 2026, 7:45 IST
ಬಂಗಾರಪೇಟೆ ನಗರದ ಸ್ಮಶಾನದಲ್ಲಿ ನಿರ್ಮಿಸಲಾದ ಅನಿಲ ಚಿತಾಗಾರಕ್ಕೆ ಬೀಗ
ಬಂಗಾರಪೇಟೆ ನಗರದ ಸ್ಮಶಾನದಲ್ಲಿ ನಿರ್ಮಿಸಲಾದ ಅನಿಲ ಚಿತಾಗಾರಕ್ಕೆ ಬೀಗ   

ಬಂಗಾರಪೇಟೆ: ನಗರದಲ್ಲಿ ಸ್ಮಶಾನಗಳಲ್ಲಿ ಜಾಗದ ಕೊರತೆ ನೀಗಿಸಲು ಮತ್ತು ಪರಿಸರದ ಮಾಲಿನ್ಯ ತಡೆಗಾಗಿ ಬಂಗಾರಪೇಟೆ ಪುರಸಭೆಯಿಂದ ಅನಿಲ ಚಿತಾಗಾರವನ್ನು ನಿರ್ಮಿಸಲಾಗಿದೆ. ಆದರೆ, ಈ ಅನಿಲ ಚಿತಾಗಾರದ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಎರಡು ವರ್ಷಗಳ ಹಿಂದೆಯೇ ಲೋಕಾರ್ಪಣೆಗೊಂಡಿತ್ತು. 

ಸೌದೆಯ ಬಳಕೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲು ಅನುಕೂಲವಾಗುವಂತೆ ಸುಮಾರು ₹1.13 ಕೋಟಿ ವೆಚ್ಚದಲ್ಲಿ ಈ ಅನಿಲ ಚಿತಾಗಾರ ನಿರ್ಮಿಸಲು ಮುಂದಾಗಿತ್ತು. ಎರಡು ವರ್ಷಗಳ ಹಿಂದೆ ಜಿಲ್ಲೆಯ ಮಹತ್ವಾಕಾಂಕ್ಷೆ ಯೋಜನೆಯಾದ ಯರಗೋಳ್ ಡ್ಯಾಂ ಉದ್ಘಾಟನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು.

ಅದೇ ಸಂದರ್ಭದಲ್ಲಿ ಬಂಗಾರಪೇಟೆ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನಡೆಯಿತು. ಈ ವೇಳೆ ನಗರದ ಅನಿಲ ಚಿತಾಗಾರ ಸಂಪೂರ್ಣ ಸಿದ್ಧವಾಗಿದೆ ಎಂದು ಬಿಂಬಿಸಿದ ಸ್ಥಳೀಯ ಆಡಳಿತ, ಯರಗೋಳ್ ಜಲಾಶಯದ ಪ್ರದೇಶದಲ್ಲಿ ಕುಳಿತಲ್ಲಿಂದಲೇ ರಿಮೋಟ್ ಮೂಲಕ ನಾಮಫಲಕ ಅನಾವರಣಗೊಳಿಸಿ, ಲೋಕಾರ್ಪಣೆ ಮಾಡಲಾಗಿತ್ತು. 

ADVERTISEMENT

ಮುಖ್ಯಮಂತ್ರಿ ಕೇವಲ ನಾಮಫಲಕ ಉದ್ಘಾಟಿಸಿದರೆ ಹೊರತು, ಚಿತಾಗಾರದ ಸ್ಥಳಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಲಿಲ್ಲ. ಕಾಮಗಾರಿ ಅಪೂರ್ಣವಾಗಿದ್ದರೂ, ಮುಖ್ಯಮಂತ್ರಿಗಳ ಕಾರ್ಯಕ್ರಮದ ಪಟ್ಟಿಯಲ್ಲಿ ಇದನ್ನು ‘ಪೂರ್ಣಗೊಂಡ ಯೋಜನೆ’ ಎಂದು ಸೇರಿಸಿರುವುದು ಈಗ ಗೊತ್ತಾಗಿದೆ. ಕೋಲಾರ ಜಿಲ್ಲೆಯಲ್ಲಿ ಅನಿಲ ಚಿತಾಗಾರ ಹೊಂದಿದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬಂಗಾರಪೇಟೆ ಪಾತ್ರವಾಗಿತ್ತು. ಆದರೆ ಈ ಹೆಗ್ಗಳಿಕೆ ಕೇವಲ ಕಾಗದಕ್ಕೆ ಸೀಮಿತವಾಗಿದೆ.

ಚಿತಾಗಾರದಲ್ಲಿ ಅಳವಡಿಸಲಾದ ಆಧುನಿಕ ಯಂತ್ರೋಪಕರಣಗಳು ಬಳಕೆಯಾಗದ ಕಾರಣ ಈಗ ತುಕ್ಕು ಹಿಡಿಯುತ್ತಿವೆ. ಮೃತದೇಹ ದಹಿಸಲು ಬೇಕಾದ ತಾಂತ್ರಿಕ ಸಿದ್ಧತೆ, ಅನಿಲ ಪೂರೈಕೆ ಮತ್ತು ತರಬೇತಿ ಪಡೆದ ಸಿಬ್ಬಂದಿ ನೇಮಕ ಮಾಡುವಲ್ಲಿ ಪುರಸಭೆ ಸಂಪೂರ್ಣವಾಗಿ ವಿಫಲವಾಗಿದೆ. ಯಂತ್ರಗಳು ಹಾಳಾಗುವ ಮುನ್ನ ಪುರಸಭೆ ಎಚ್ಚೆತ್ತುಕೊಂಡು ಇದನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು ಎಂಬುದು ಸಾರ್ವಜನಿಕ ಒತ್ತಾಯ. 

ಹಿಂದೂ ಸ್ಮಶಾನವು ಅತ್ಯಂತ ಕಿರಿದಾಗಿದ್ದು, ಮೃತದೇಹಗಳನ್ನು ಹೂಳಲು ಜಾಗವಿಲ್ಲದಂತಾಗಿದೆ. ಸೌದೆಯ ಕೊರತೆ ಮತ್ತು ಸ್ಥಳದ ಅಭಾವದಿಂದ ಜನಸಾಮಾನ್ಯರು ಅಂತ್ಯಸಂಸ್ಕಾರಕ್ಕಾಗಿ ಪರದಾಡುತ್ತಿದ್ದಾರೆ. ಮೃತದೇಹಗಳನ್ನು ಸಾಗಿಸಲು ‘ಶಾಂತಿ ವಾಹನ’ ನೀಡುತ್ತೇವೆ ಎಂಬ ಭರವಸೆಯನ್ನು ಪುರಸಭೆ ಮರೆತಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಂಗಾರಪೇಟೆ ನಗರದ ಸ್ಮಶಾನದಲ್ಲಿ ನಿರ್ಮಿಸಲಾದ ಅನಿಲ ಚಿತಾಗಾರಕ್ಕೆ ಬೀಗ
ಸಾವಿನಲ್ಲೂ ನೆಮ್ಮದಿ ಸಿಗದಂತಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ ಚಿತಾಗಾರ ಉದ್ಘಾಟನೆಯಾಗಿದೆ. ಆದರೆ ವಾಸ್ತವದಲ್ಲಿ ಜನರು ಹಳೆಯ ಪದ್ಧತಿಯಲ್ಲೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಇದೆ
ಅಮರೇಶ್ ಸ್ಥಳೀಯ ನಿವಾಸಿ
ಮುಖ್ಯಮಂತ್ರಿಗಳು ಬಂದು ರಿಬ್ಬನ್ ಕತ್ತರಿಸಿ ಹೋದ ಮೇಲೆ ಈ ಕಡೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಳಿದಿಲ್ಲ. ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಕಪಾಲಿ ಶಂಕರ್ ಪುರಸಭೆ ಮಾಜಿ ಸದಸ್ಯ 
ಅನಿಲ ಚಿತಾಗಾರವೂ ಸಿದ್ಧವಾಗಿದ್ದು ನುರಿತ ತರಬೇತುದಾರರಿಂದ ತರಬೇತಿ ನೀಡಿ ಶೀಘ್ರವೇ ಪ್ರಾರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು
ಸತ್ಯ ನಾರಾಯಣ ಮುಖ್ಯಾಧಿಕಾರಿ ಬಂಗಾರಪೇಟೆ

ನಿರುಪಯುಕ್ತವಾದ ಚಿತಾಗಾರ

ತಾಲ್ಲೂಕಿನ ಜನತೆಗೆ ಸುಸಜ್ಜಿತ ಅಂತ್ಯಸಂಸ್ಕಾರದ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಅನಿಲ ಚಿತಾಗಾರವು ಇಂದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯಿಂದ ನಿರುಪಯುಕ್ತವಾದ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಎರಡು ವರ್ಷ ಕಳೆದರೂ ಈ ಚಿತಾಗಾರದಲ್ಲಿ ಈವರೆಗೆ ಒಂದು ಶವದ ಅಂತ್ಯಸಂಸ್ಕಾರವೂ ನಡೆದಿಲ್ಲ. ಪ್ರವೀಣ್ ಸಿದ್ದಾರ್ಥ್ ಸಾಮಾಜಿಕ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.