ADVERTISEMENT

ಬಂಗಾರಪೇಟೆ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ: ಎಸ್.ಎನ್. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:13 IST
Last Updated 20 ಸೆಪ್ಟೆಂಬರ್ 2025, 6:13 IST
ಬಂಗಾರಪೇಟೆ ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕರನ್ನು ಗೌರವಿಸಿದರು
ಬಂಗಾರಪೇಟೆ ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕರನ್ನು ಗೌರವಿಸಿದರು   

ಬಂಗಾರಪೇಟೆ: ಪಟ್ಟಣದ ಜನರ ಆಶಯದಂತೆ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ 25 ವರ್ಷಗಳ ಕನಸು ಇಂದು ನನಸಾಗಿದೆ. ಇದು ಬಂಗಾರಪೇಟೆ ಸಮಗ್ರ ಅಭಿವೃದ್ಧಿಗೆ ಪೂರಕ ಎಂದರು. 

ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರತ್ಯೇಕಿಸಿ, ಬಂಗಾರಪೇಟೆ ನಗರಾಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ. ಇದರಿಂದ  ಸಾರ್ವಜನಿಕರ ಕೆಲಸಗಳು ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. 

ADVERTISEMENT

ಪಟ್ಟಣವು ವಿಸ್ತರಣೆಯಾಗುತ್ತಿದ್ದು, ಅಗತ್ಯ ದಾಖಲೆಗಳ ಕೊರತೆಯಿಂದಾಗಿ ನಗರಸಭೆ ಮಾಡಲು ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿ  ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಹಾಗೂ ಎಲ್ಲಾ ಅಧಿಕಾರಿಗಳ ಸಹಕಾರದೊಂದಿಗೆ ಇಂದು ಪುರಸಭೆಯನ್ನು ನಗರಸಭೆಯನ್ನಾಗಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದರು.

ನಗರಸಭೆ ವ್ಯಾಪ್ತಿಗೆ ನೂತನವಾಗಿ ದೇಶಿಹಳ್ಳಿ, ಕಾರಹಳ್ಳಿ, ಬೆಂಗನೂರು ಗ್ರಾಮದ ಕೆಲವು ಸರ್ವೆ ನಂಬರ್‌ಗಳು ಸೇರ್ಪಡೆಯಾಗಿವೆ. ಯಾವುದೇ ಕಾರಣಕ್ಕೂ ಬೆಂಗನೂರು, ಹುಣಸನಹಳ್ಳಿ , ಕಾರಹಳ್ಳಿ, ಐನೋರಾ ಹೊಸಹಳ್ಳಿ ಗ್ರಾಮಗಳನ್ನು ಪಂಚಾಯಿತಿಗಳಿಂದ ಬೇರ್ಪಡಿಸಿ ನಗರಕ್ಕೆ ಸೇರ್ಪಡೆ ಮಾಡಿಲ್ಲ ಎಂದು ಸ್ವಷ್ಟನೆ ನೀಡಿದರು.

ಬಂಗಾರಪೇಟೆ ನಗರ ಸಮಗ್ರ ಅಭಿವೃದ್ಧಿಗೆ ಸುಮಾರು ₹257 ಕೋಟಿ ಡಿಪಿಆರ್ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಹಣ ಮಂಜೂರು ಮಾಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮುಖ್ಯಮಂತ್ರಿಗಳ ವಿಶೇಷ ₹8 ಕೋಟಿ ಅನುದಾನದಿಂದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಹಳೆ ಪುರಸಭೆ ಕಚೇರಿ ನವೀಕರಣ, ರಂಗ ಮಂದಿರ ಕಾಮಗಾರಿ, ಒಳ ಕ್ರೀಡಾಂಗಣ, ಬಸ್ ನಿಲ್ದಾಣ, ಕನ್ನಡ ಭವನ, ಸಂಸ್ಕೃತಿ ಭವನ, ಅಂಬೇಡ್ಕರ್ ಭವನ ಹಾಗೂ ಕೋಲಾರ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದರು.

ಈ ವೇಳೆ ಪುರಸಭೆಯ ಅಧ್ಯಕ್ಷ ಗೋವಿಂದ, ಉಪಾಧ್ಯಕ್ಷ ಚಂದ್ರವೇಣಿ ಮಂಜುನಾಥ್, ವೆಂಕಟೇಶ್, ಶಫಿ, ರಾಕೇಶ್ ಗೌಡ, ಪ್ರಶಾಂತ್, ಅರುಣಾಚಲಂಮಣಿ, ರಫೀಕ್, ಸಾದಿಕ್, ಬಾಬುಲಾಲ್, ಸತ್ಯನಾರಾಯಣ, ರವಿ, ಮಂಜುನಾಥ್, ಹರೀಶ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.