ADVERTISEMENT

ಇನ್ನೂ ಮುಗಿಯದ ವಾಕಿಂಗ್ ಟ್ರ್ಯಾಕ್: ಪುರಸಭೆ ವಿರುದ್ಧ ಜನಸಾಮಾನ್ಯರ ಆಕ್ರೋಶ

10 ವರ್ಷಗಳ ಹಿಂದೆ ಕೈಗೊಳ್ಳಲಾಗಿದ್ದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2024, 6:47 IST
Last Updated 16 ಡಿಸೆಂಬರ್ 2024, 6:47 IST
ಬಂಗಾರಪೇಟೆ ಪಟ್ಟಣದ ದೊಡ್ಡ ಕೆರೆಯಲ್ಲಿ ನಿರ್ಮಾಣ ಮಾಡಿರುವ ಕಾಮಗಾರಿಯು ಸ್ಥಗಿತಗೊಂಡಿರುವುದು
ಬಂಗಾರಪೇಟೆ ಪಟ್ಟಣದ ದೊಡ್ಡ ಕೆರೆಯಲ್ಲಿ ನಿರ್ಮಾಣ ಮಾಡಿರುವ ಕಾಮಗಾರಿಯು ಸ್ಥಗಿತಗೊಂಡಿರುವುದು   

ಬಂಗಾರಪೇಟೆ: ಪಟ್ಟಣದ ನಾಗರಿಕರು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ ವಾಯುವಿಹಾರ ಪಥ ನಿರ್ಮಾಣ ಕಾಮಗಾರಿ ಕೈಗೊಂಡು ಹತ್ತು ವರ್ಷಗಳೇ ಕಳೆದರೂ, ಕಾಮಗಾರಿ ಮಾತ್ರ ಇನ್ನೂ ಮುಗಿದೇ ಇಲ್ಲ. ತ್ವರಿತ ಕಾಮಗಾರಿ ಕೈಗೊಳ್ಳುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಿದ್ದ ಪುರಸಭೆ ಮಾತ್ರ ಈ ವಿಚಾರದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ. 

ಪಟ್ಟಣದ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಜನಸಂಖ್ಯೆಗೆ ಅಣುಗುಣವಾಗಿ ಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳನ್ನೂ ಕಲ್ಪಿಸಬೇಕು. ಆದರೆ, ಪಟ್ಟಣದಲ್ಲಿ ಜನಸಾಮಾನ್ಯರಿಗೆ ವಾಯು ವಿಹಾರಕ್ಕೆ ಹೋಗಲು ಸ್ಥಳಾವಕಾಶವಿಲ್ಲದೆ ಪರದಾಡುವಂತಾಗಿದೆ. ಉದ್ಯಾನಗಳು ಇಲ್ಲದ ಕಾರಣ ಮಕ್ಕಳು ಆಟವಾಡಲು ಸ್ಥಳವಾಕಾಶವೇ ಇಲ್ಲವಾಗಿದೆ. ಇದ್ದ ಏಕೈಕ ಪಟ್ಟಾಭಿಶೇಕೋದ್ಯನವನವನ್ನು ನವೀಕರಿಸಿ ಜನಸಾಮಾನ್ಯರ ಉಪಯೋಗಕ್ಕೆ ಬಿಡಲಾಗಿದೆ. ಆದರೆ, ಅದು ತುಂಬಾ ಚಿಕ್ಕದಾಗಿರುವ ಕಾರಣ ಹೆಚ್ಚಿನ ಸಂಖ್ಯೆ ಮಕ್ಕಳು ಬಂದರೆ ಮಕ್ಕಳಿಗೆ ಆಟವಾಡಲು ಸ್ಥಳವಾಕಾಶ ಇಲ್ಲದಂತಾಗುತ್ತದೆ. 

ಪಟ್ಟಣದ ಹೊರವಲಯದ ರೈಲ್ವೆ ಗೇಟ್ ಬಳಿ ಇಂದಿರಾ ಟ್ರೀ ಪಾರ್ಕ್ ನಿರ್ಮಾಣವಾಗಿದೆ. ಅಲ್ಲಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆದರೆ, ಅದು ಪಟ್ಟಣದಿಂದ ಮೂರು ಕಿ.ಮೀ ಇರುವ ಕಾರಣ ಅಲ್ಲಿಗೆ ಹೋಗಲು ಮಕ್ಕಳಿಗೆ ತೊಂದರೆಯಾಗಿದೆ. 

ADVERTISEMENT

ಮುಂಜಾನೆ ಮತ್ತು ಸಂಜೆ ವೇಳೆ ಜನರಿಗೆ ವಾಯುವಿಹಾರ ಮಾಡಲು ಸ್ಥಳವಿಲ್ಲದೆ ರಸ್ತೆಗಳಲ್ಲೇ ವಾಯುವಿಹಾರ ಮಾಡುವ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಪುರಸಭೆಯು ಪಟ್ಟಣದ ದೊಡ್ಡಕೆರೆ ಸುತ್ತಲೂ ಫೆನ್ಸಿಂಗ್ ಅಳವಿಡಿಸಿ, ವಾಯುವಿಹಾರಕ್ಕೆ ಟ್ರ್ಯಾಕ್ ನಿರ್ಮಾಣ ಮಾಡಲು 10 ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಿಸಿತ್ತು. ಆದರೆ, ಈ ಯೋಜನೆ ಸಂಪೂರ್ಣ ಹಳ್ಳಹಿಡಿದಿದ್ದು, ಈಗಲೂ ಉದ್ಯಾನವನದ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರುತ್ತಾರೆ ಜನಸಾಮಾನ್ಯರು. 

ಕೆಸಿ ವ್ಯಾಲಿ ನೀರನ್ನು ಕೆರೆಗೆ ತುಂಬಿಸಿ ದೋಣಿ ವಿಹಾರ ವ್ಯವಸ್ಥೆ ಸಹ ಕಲ್ಪಿಸಿ ಮಕ್ಕಳನ್ನು ಆಕರ್ಷಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅಂದುಕೊಂಡಂತೆ ಯಾವುದೂ ನಡೆದಿಲ್ಲ. ಕೆರೆ ಸುತ್ತಲೂ ಅಳವಡಿಸಿರುವ ಫೆನ್ಸಿಂಗ್ ನಿರ್ವಹಣೆ ಮಾಡಿಲ್ಲ. ಹೀಗಾಗಿ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ವಹಿಸಿ ವಾಕಿಂಗ್ ಟ್ರ್ಯಾಕ್‌ಗೆ ಮರುಜೀವ ತುಂಬಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ. 

ಪಟ್ಟಣದ ನಾಗರಿಕರ ವಾಯುವಿಹಾರಕ್ಕೆ ಅನುಕೂಲವಾಗುವಂತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿಬೇಕು ಎಂದು ಅಮರಾವತಿ ಬಡಾವಣೆ ನಿವಾಸಿ ಶಂಕರ್ ಆಗ್ರಹಿಸಿದರು.

ಮಕ್ಕಳು ಹಾಗೂ ವೃದ್ಧರ ಸಮಯ ಕಳೆಯಲು ದೊಡ್ಡ ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ವಾಕಿಂಗ್ ಟ್ರ್ಯಾಕ್ ತುಂಬಾ ಅನುಕೂಲಕರ. ಆದ್ದರಿಂದ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು. ಈ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ಒತ್ತಾಯಿಸಿದರು.

ವಾಕಿಂಗ್ ಟ್ರ್ಯಾಕ್ ಅನ್ನು ನಿರ್ಮಾಣ ಮಾಡುವ ಮೂಲಕ ಕೆರೆ ಒತ್ತುವರಿ ತಡೆಯಬಹುದು. ನಾಗರಿಕರ ಉತ್ತಮ ಆರೋಗ್ಯಕ್ಕೂ ಇದು ಸಹಕಾರಿ. 
ಮಂಜುನಾಥ ಮುನಿಯಮ್ಮ ಬಡಾವಣೆ ನಿವಾಸಿ
ಪಟ್ಟಣದ ಹೃದಯ ಭಾಗದಲ್ಲಿರುವ ದೊಡ್ಡ ಕೆರೆಯಲ್ಲಿ ಸ್ಥಗಿತಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸುವ ಮೂಲಕ ಜನರ ಉಪಯೋಗಕ್ಕೆ ಕಲ್ಪಿಸಬೇಕು
ಸುಬ್ರಮಣಿ ಸ್ಥಳೀಯ ನಿವಾಸಿ
ದೊಡ್ಡಕೆರೆಯಲ್ಲಿ ವಾಕಿಂಗ್ ಟ್ರ್ಯಾಕ್ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಈ ಮೂಲಕ ಜನಸಾಮಾನ್ಯರ ವಾಯುವಿಹಾರಕ್ಕೆ ಅನುಕೂಲ ಕಲ್ಪಿಸಲಾಗುವುದು
ಸತ್ಯನಾರಾಯಣ ಪುರಸಭೆ ಮುಖ್ಯಧಿಕಾರಿ 
₹3 ಕೋಟಿ ವೆಚ್ಚದ ಕಾಮಗಾರಿ
15 ವರ್ಷಗಳ ಹಿಂದೆಯೇ ಈ ಯೋಜನೆಗೆ ನಿರ್ಧರಿಸಲಾಗಿತ್ತು. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗಿ ಆಯ್ಕೆಯಾದ ಬಳಿಕ ಈ ಯೋಜನೆಗೆ ಮತ್ತೆ ಮರುಜೀವ ಬಂದಿತು. ₹3 ಕೋಟಿ ವೆಚ್ಚದಲ್ಲಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದೆ. ದೊಡ್ಡಕೆರೆ ಸುತ್ತಲೂ 3 ಕಿಮೀ ಉದ್ದದ ಟ್ರ್ಯಾಕ್ ತಲೆ ಎತ್ತಿದೆ. ಈ ಯೋಜನೆಯಿಂದ ಕೆರೆ ಒತ್ತುವರಿ ತಡೆದಂತಾಗಿದೆ. ಕೆರೆಗೆ ಹೊಸ ಕಳೆಯೂ ಬಂದಿದೆ. ಟ್ರ್ಯಾಕ್ ಸುತ್ತಲೂ ಕಣ್ಣಿಗೆ ಮುದ ನೀಡುವ ವಿವಿಧ ಬಣ್ಣಗಳ ಅಲಂಕೃತ ಹೂವಿನ ಗಿಡಗಳು ಹಾಗೂ ವಿಶ್ರಾಂತಿ ಪಡೆಯಲು ಕುರ್ಚಿಗಳನ್ನು ಅಳವಡಿಸಿದರೆ ಯೋಜನೆ ಪೂರ್ಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.  ಆದರೆ ಪುರಸಭೆ ಮಾತ್ರ ಈ ಯೋಜನೆಯನ್ನು ಪೂರ್ಣಗೊಳಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಈಗಾಗಲೇ ವೆಚ್ಚ ಮಾಡಿರುವ ಹಣ ಕೆರೆಯಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಜನಸಾಮಾನ್ಯರ ಆಕ್ರೋಶ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.