ADVERTISEMENT

ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ: ಜಿಲ್ಲಾಧಿಕಾರಿ ಮಂಜುನಾಥ್‌ ಬಣ್ಣನೆ

ಬಸವ ಜಯಂತಿ

​ಪ್ರಜಾವಾಣಿ ವಾರ್ತೆ
Published 7 ಮೇ 2019, 13:55 IST
Last Updated 7 ಮೇ 2019, 13:55 IST
ಜಿಲ್ಲಾಡಳಿತವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.
ಜಿಲ್ಲಾಡಳಿತವು ಕೋಲಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿದರು.   

ಕೋಲಾರ: ‘ಸಮಾಜದಲ್ಲಿ ಅಸಮಾನತೆ ತೊಡೆದು ಹಾಕಿ ಸಮ ಸಮಾಜ ನಿರ್ಮಿಸುವಲ್ಲಿ ಬಸವಣ್ಣ ನಿರ್ಣಾಯಕ ಪಾತ್ರ ವಹಿಸಿದರು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಬಸವಣ್ಣನವರು ಇಡೀ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ಮಾನವತಾವಾದಿ. ಅವರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದು ಸ್ಮರಿಸಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಅವರ ತತ್ವ ಸಿದ್ಧಾಂತ ಸಾರ್ವಕಾಲಿಕ. ಅವರ ವಚನಗಳು ಇಂದಿಗೂ ಪ್ರಸ್ತುತ. ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣರ ವಚನಗಳ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಬಾಲ್ಯದಿಂದಲ್ಲೇ ಬಸವಣ್ಣ ಅವರು ಒಳ್ಳೆಯ ವಿಚಾರಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ಜಾತಿ ಮತ್ತು ಧರ್ಮ ಮೀರಿ ಎಲ್ಲರೂ ಸಮಾನರು ಎಂದು ಸಾರುವ ಮೂಲಕ ಹೋರಾಟದ ಹಾದಿ ಹಿಡಿದರು. ಸಮ ಸಮಾಜದ ನಿರ್ಮಾಣದ ಕನಸ್ಸು ಕಂಡಿದ್ದರು. ಅಂಬಿಗರ ಚೌಡಯ್ಯ, ದೂಳಯ್ಯ, ಮಾರಯ್ಯ, ಅರಳಯ್ಯ ಸೇರಿದಂತೆ ಮುಂತಾದವರು ಇದೇ ಕನಸ್ಸು ಕಂಡಿದ್ದವರಾಗಿದ್ದಾರೆ’ ಎಂದರು.

‘ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಅದು ಈಗಿನ ಸಂಸತ್ ಇದ್ದಂತೆ. ಅನುಭವ ಮಂಟಪದಲ್ಲಿ ಸಮ ಸಮಾಜದ ನಿರ್ಮಾಣ ಕುರಿತು ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬಗ್ಗೆ ಚರ್ಚೆ ನಡೆಯುತ್ತಿತ್ತು’ ಎಂದು ವಿವರಿಸಿದರು.

‘ಬಸವಣ್ಣ ಎಲ್ಲಾ ಧರ್ಮ, ಸಮುದಾಯಗಳ ಬಗ್ಗೆ ಚರ್ಚಿಸಿಲು ವೇದಿಕೆ ಕಲ್ಪಿಸಿಕೊಟ್ಟಿದ್ದರು. ಆ ಮೂಲಕ ಎಲ್ಲರನ್ನು ಸಮನಾಗಿ ಕಂಡರು. ಮನುಷ್ಯನ ಹುಟ್ಟಿನ ಮೂಲ ಪ್ರಶ್ನಿಸುವುದರ ಜತೆಗೆ ಜಾತಿ ಧರ್ಮ ಬಿಟ್ಟು ಎಲ್ಲರೂ ಒಂದೇ ಎನ್ನುವ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು’ ಎಂದು ಸಲಹೆ ನೀಡಿದರು.

ಚಳವಳಿಗೆ ದಾರಿದೀಪ: ‘ಜಾಗತೀಕರಣದ ಸನ್ನಿವೇಶದಲ್ಲಿ ಬಸವಣ್ಣರ ತತ್ವಾದರ್ಶವು ಪ್ರಸ್ತುತ ಚಳವಳಿಗಳಿಗೆ ದಾರಿದೀಪ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

‘ಆ ಕಾಲಘಟ್ಟದಲ್ಲಿ ಜಾತಿ, ಲಿಂಗ ಸೂತಕವಿಲ್ಲದ ಆದರ್ಶವಿತ್ತು. ಆದರೆ, ಈಗಿನ ಕಾಲಘಟ್ಟದಲ್ಲಿ ಅಸಮಾನತೆ, ಲಿಂಗ ತಾರತಮ್ಯವಿದೆ. ಈ ಸಾಮಾಜಿಕ ಪಿಡುಗು ನಿರ್ಮೂಲನೆಯಾಗಬೇಕು. ದುಡಿಮೆಯೇ ನಿಜವಾದ ಪೂಜೆಯೆಂದು ಭಾವಿಸಿ ಅದರಲ್ಲಿ ದೇವರನ್ನು ಕಾಣಬೇಕು’ ಎಂದರು.

ಜಗತ್ತಿಗೆ ಸಾರಬೇಕು: ‘ಬಸವಣ್ಣನವರ ಹಾದಿಯಲ್ಲಿ ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಗಾಂಧೀಜಿ ಎಲ್ಲಾ ಜಾತಿ ಮತ್ತು ಸಮುದಾಯಗಳನ್ನು ಒಂದೆಡೆಗೆ ತಂದರು. ಇದರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಬಸವಣ್ಣರ ಚಿಂತನೆಯನ್ನು ಜಗತ್ತಿಗೆ ಸಾರಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಹೇಳಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಾಹ್ನವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.