ADVERTISEMENT

ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 12 ಮೇ 2023, 7:29 IST
Last Updated 12 ಮೇ 2023, 7:29 IST
ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ‌ ಮತದಾನ ಸನಿಹದಲ್ಲಿ ದೂರ ಉಳಿದು ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅವರ ಭಾವಚಿತ್ರಕ್ಕೆ ಪಕ್ಷದ ಕೆಲ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು
ಬಂಗಾರಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ‌ ಮತದಾನ ಸನಿಹದಲ್ಲಿ ದೂರ ಉಳಿದು ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅವರ ಭಾವಚಿತ್ರಕ್ಕೆ ಪಕ್ಷದ ಕೆಲ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು   

ಬಂಗಾರಪೇಟೆ: ಮೇ 9ರವರೆಗೆ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಂಗಾರಪೇಟೆ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತದಾನ ದಿನ ಪಕ್ಷ ಹಾಗೂ ಕಾರ್ಯಕರ್ತರಿಂದ ದೂರ ಉಳಿದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಅವರ ಭಾವಚಿತ್ರ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ನಾರಾಯಣಸ್ವಾಮಿ ಅವರ ನಡೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಮನಸ್ಸಿಗೆ ಘಾಸಿ ಉಂಟುಮಾಡಿದೆ. ರಾಷ್ಟ್ರೀಯ ಪಕ್ಷಕ್ಕೆ ಹಾಗೂ ವರಿಷ್ಠರಿಗೆ ಮಾಡಿರುವ ಅಪಮಾನ. ಇಂಥ ವ್ಯಕ್ತಿಯನ್ನು ಪಕ್ಷದಿಂದ ದೂರ ಇಡಬೇಕು’ ಎಂದು ಟೀಕಾ ಪ್ರಹಾರ ನಡೆಸಿದರು.

ADVERTISEMENT

‘ಯಾವುದೇ ಬೂತ್‍ನಲ್ಲಿ ಪಕ್ಷದ ಏಜೆಂಟರನ್ನು ನೇಮಿಸದಿರುವುದು ಪಕ್ಷಕ್ಕೆ ಆದ ದೊಡ್ಡ ಅನ್ಯಾಯ’ ಎಂದು ಪುರಸಭೆ ಮಾಜಿ ಸದಸ್ಯ ಬಿ.ಸಿ.ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು. ಬಜರಂಗದಳದ ಮಹೇಶ್, ಮಂಜು, ಪಾನಿಪುರಿ ಹರೀಶ್ ಇದ್ದರು.

‘ಪಕ್ಷದ ಕಾರ್ಯಕರ್ತರಿಗೆ ಸಿಗುತ್ತಿಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ.

ಕ್ಷೇತ್ರದಲ್ಲಿ ಮಂಗಳವಾರವರೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಆದರೆ, ಮಂಗಳವಾರ ಮಧ್ಯಾಹ್ನ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿತು. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಎಂ.ನಾರಾಯಣಸ್ವಾಮಿ, 'ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಕೆಲವರು ನಂಬಿಸಿ ಕೈಕೊಟ್ಟರು. ಬಿಜೆಪಿ ವರಿಷ್ಠರು ಹಾಗೂ ಕಾರ್ಯಕರ್ತರಲ್ಲಿ ಕ್ಷಮೆ ಕೋರುವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.