ADVERTISEMENT

ಅರಾಭಿಕೊತ್ತನೂರು: ವೈಭವದ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:36 IST
Last Updated 26 ಜನವರಿ 2026, 5:36 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು    

ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀಪ್ರಸನ್ನ ಪಾರ್ವತಿ ಹಾಗೂ ಶ್ರೀಸೋಮನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಭಾರಿ ಗಾತ್ರದ ಹೂವಿನ ಹಾರಗಳಿಂದ ರಥವನ್ನು ಅಲಂಕರಿಸಲಾಗಿತ್ತು. ರಥ ಹೊರಡುತ್ತಿದ್ದಂತೆ ಸಾವಿರಾರು ಭಕ್ತರು ಹಣ್ಣುದವಳದ ಎಲೆ ರಥಕ್ಕೆ ಅರ್ಪಿಸಿದರು.

ದಶಕಗಳ ಹಿಂದೆ ಗ್ರಾಮದ ಜನತೆ ರಥಸಪ್ತಮಿಗೆ ಮೊದಲು ಬೋನು ಇಟ್ಟು ಚಿರತೆ ಹಿಡಿದು ಅದನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸುವ ಪದ್ಧತಿ ಇತ್ತು. ಆದರೆ, ಅರಣ್ಯ ಇಲಾಖೆ ನಿಬಂಧನೆಗಳ ನಂತರ ಅದನ್ನು ಕೈಬಿಡಲಾಗಿದೆ.

ADVERTISEMENT

ರಥೋತ್ಸವದ ಅಂಗವಾಗಿ ಗ್ರಾಮದ ಸಮುದಾಯ ಭವನದಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ದಾರಿಯುದ್ದಕ್ಕೂ ಹಲವರು ಪಾನಕ, ಮಜ್ಜಿಗೆ, ಹೆಸರುಬೇಳೆ ವಿನಿಯೋಗದಲ್ಲಿ ನಿರತರಾಗಿದ್ದರು.

ತಾಲ್ಲೂಕು ಹಾಗೂ ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ದೇವಾಲಯಗಳ ಊರು ಎಂದೇ ಖ್ಯಾತವಾದ ಅರಾಭಿಕೊತ್ತನೂರಿನ ಎಲ್ಲಾ ದೇಗುಲಗಳಲ್ಲೂ ವಿಶೇಷ ಅಲಂಕಾರ, ಪೂಜೆ ನಡೆಯಿತು.

ಸಂಕ್ರಾಂತಿಯನ್ನೇ ಆಚರಿಸದ ಈ ಗ್ರಾಮದ ಜನತೆ ರಥಸಪ್ತಮಿಯ ಈ ರಥೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ. ‌ಸೋಮನಾಥೇಶ್ವರ ಸ್ವಾಮಿಯ ರಥೋತ್ಸವವನ್ನೇ ವೈಭವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.

ಗ್ರಾಮದ ಸೋಮನಾಥೇಶ್ವರ ಸ್ವಾಮಿ, ಲಕ್ಷ್ಮಿವೆಂಕಟೇಶ್ವರ ಸ್ವಾಮಿ, ವೀರಭದ್ರಸ್ವಾಮಿ, ಆಂಜನೇಯಸ್ವಾಮಿ, ವಿದ್ಯಾಗಣಪತಿ, ಕರಗದಮ್ಮ, ರೇಣುಕಾ ಯಲ್ಲಮ್ಮ, ಶನೇಶ್ವರಸ್ವಾಮಿ, ಪಟಾಲಮ್ಮ ದೇವಿ, ಕುಂಟಗಂಗಮ್ಮ, ಸಿದ್ದೇಶ್ವರ ಸ್ವಾಮಿ, ಸತ್ಯಮ್ಮದೇವಿ, ಭೀಮೇಶ್ವರಸ್ವಾಮಿ, ಅಯ್ಯಪ್ಪಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಗೌಡ ಮುಂದಾಳತ್ವ ವಹಿಸಿದ್ದು, ಅಧ್ಯಕ್ಷರು, ಇತರ ಸದಸ್ಯರು, ಸಿಬ್ಬಂದಿ, ಗ್ರಾಮದ ಮುಖಂಡರು ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಯುವಕ ಸಂಘಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಅನೇಕರು ಹಾಜರಿದ್ದು, ರಥೋತ್ಸವಕ್ಕೆ ಚಾಲನೆ ನೀಡಿದರು.

ಪ್ರಧಾನ ಅರ್ಚಕರಾದ ವೇದಬ್ರಹ್ಮ ಸತ್ಯಸೋಮಶೇಖರ್ ದೀಕ್ಷಿತ್, ಎಸ್.ಶ್ರೀಧರಮೂರ್ತಿ, ಕೆ.ಎಸ್.ಸುಬ್ರಮಣ್ಯಶಾಸ್ತ್ರಿ, ಶಿಳ್ಳಂಗೆರೆ ನಾರಾಯಣಾಚಾರ್, ವಿ.ಸುಬ್ರಹ್ಮಣ್ಯಂ ಸೇರಿದಂತೆ ಸೋಮನಾಥೇಶ್ವರ ಅಭಿವೃದ್ದಿ ಸಮಿತಿ ಸದಸ್ಯರು, ಅರಾಭಿಕೊತ್ತನೂರು ಚಾರಿಟಬಲ್ ಟ್ರಸ್ಟ್‌ ಪದಾಧಿಕಾರಿಗಳು, ಗ್ರಾಮಸ್ಥರು ರಥೋತ್ಸವದ ಉಸ್ತುವಾರಿ ವಹಿಸಿದ್ದರು.

ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಡಿಐಜಿಪಿ ಡಿ.ದೇವರಾಜ್, ಕೋಚಿಮುಲ್ ನಿರ್ದೇಶಕ ನಾಗರಾಜಪ್ಪ, ತಹಶೀಲ್ದಾರ್ ಡಾ.ನಯನಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.