ADVERTISEMENT

ಚೆಂಡುಮಲ್ಲಿಗೆಗೆ ಬಂಪರ್‌ ಬೆಲೆ: ಸಂಕ್ರಾಂತಿಗೆ ಮತ್ತಷ್ಟು ದರ ಏರಿಕೆ ನಿರೀಕ್ಷೆ

ಒಂದು ಕೆ.ಜಿ ಹೂವಿಗೆ ₹ 50 ನಿಗದಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 4:13 IST
Last Updated 13 ಜನವರಿ 2021, 4:13 IST
ಸಂಕ್ರಾಂತಿ ಹಬ್ಬಕ್ಕೆಂದು ನಂಗಲಿ ಗ್ರಾಮದ ರೈತರೊಬ್ಬರು ಬೆಳೆದಿರುವ ಚೆಂಡು ಹೂ
ಸಂಕ್ರಾಂತಿ ಹಬ್ಬಕ್ಕೆಂದು ನಂಗಲಿ ಗ್ರಾಮದ ರೈತರೊಬ್ಬರು ಬೆಳೆದಿರುವ ಚೆಂಡು ಹೂ   

ನಂಗಲಿ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಚೆಂಡುಮಲ್ಲಿಗೆ ಹೂವಿಗೆ ಬೇಡಿಕೆ ಹೆಚ್ಚಾಗಿದೆ. ಬೆಲೆ ಏರಿಕೆ ಕಂಡಿರುವುದರಿಂದ ಬೆಳೆಗಾರರು ಸಂತಸಪಡುವಂತಾಗಿದೆ.

ಈಚೆಗೆ ಕೆಲವು ದಿನಗಳ ಹಿಂದೆ ಒಂದು ಕೆ.ಜಿ ಚೆಂಡು ಹೂ ಬೆಲೆ ಕೇವಲ ₹ 10ರಿಂದ ₹ 15 ಇತ್ತು. ಆದರೆ, ಸಂಕ್ರಾಂತಿ ಹಬ್ಬ ಶುರುವಾಗುತ್ತಿದ್ದು, ತಾಲ್ಲೂಕಿನ ಗಡಿ ಭಾಗದಲ್ಲಿ ಹಬ್ಬವನ್ನು ತಿಂಗಳ ಪೂರ್ತಿ ಆಚರಣೆ ಮಾಡುತ್ತಾರೆ. ಆದ್ದರಿಂದ ಒಂದು ಕೆ.ಜಿ ಚೆಂಡು ಹೂವಿನ ಬೆಲೆ ₹ 50ರಿಂದ ₹ 60ಗೆ ಏರಿದೆ. ಇದರಿಂದ ಹೂವನ್ನು ಬೆಳೆದಿರುವ ರೈತರು ಖುಷಿಪಡುವಂತಾಗಿದೆ.

ಲಾಕ್‌ಡೌನ್‌ ಕಾರಣದಿಂದಾಗಿ ಬೆಲೆ ಕುಸಿತ ಕಂಡಿದ್ದ ಚೆಂಡು ಮಲ್ಲಿಗೆಯನ್ನು ಸುಮಾರು 5-6 ತಿಂಗಳ ಕಾಲ ಕೇಳುವವರೇ ಇರಲಿಲ್ಲ. ಹಾಗಾಗಿ ಲಾಕ್‌ಡೌನ್ ಸಮಯದಲ್ಲಿ ಚೆಂಡುಮಲ್ಲಿಗೆ ಹೂಗಳ ತೋಟಗಳನ್ನು ಕೆಲವರು ಉಳುಮೆ ಮಾಡಿದ್ದರೆ, ಮತ್ತೆ ಕೆಲವರು ಜಾನುವಾರುಗಳನ್ನು ತೋಟಗಳಿಗೆ ಬಿಟ್ಟು ಮೇಯಿಸಿ ನಾಶಪಡಿಸಿದ್ದರು. ಇದರಿಂದ ಚೆಂಡು ಹೂವನ್ನು ಬೆಳೆಯಲು ರೈತರು ನಿರಾಸಕ್ತಿ ತೋರಿಸಿದ್ದರು.

ADVERTISEMENT

ಸಂಕ್ರಾಂತಿ ಹಬ್ಬವನ್ನು ರಾಜ್ಯದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಗಳ ಅಂಚಿನಲ್ಲಿರುವ ಮುಳಬಾಗಿಲು ತಾಲ್ಲೂಕಿನಲ್ಲಿ ಜ. 14ರಿಂದ ಫೆಬ್ರುವರಿಯ 1-2ನೆಯ ತಾರೀಖಿನವರೆಗೂ ಆಚರಿಸುತ್ತಾರೆ. ಈ ಹಬ್ಬದಲ್ಲಿ ವಿಶೇಷವಾಗಿ ಹಸುಗಳು, ಎತ್ತುಗಳು, ಎಮ್ಮೆಗಳು ಹಾಗೂ ಇತರೆ ಜಾನುವಾರುಗಳಿಗೆ ಹೂಗಳು ಮತ್ತು ರಬ್ಬರ್ ಬುಡ್ಡೆಗಳಿಂದ ಅಲಂಕಾರ ಮಾಡುತ್ತಾರೆ.

ಕೆಲವು ಕಡೆ ಎತ್ತುಗಳನ್ನು ಬೆಂಕಿಯ ಮೇಲೆ ಹಾಯಿಸುತ್ತಾರೆ. ಮತ್ತೆ ಕೆಲವು ಕಡೆ ಜಾನುವಾರನ್ನು ಅಲಂಕರಿಸಿ ಊರಿನ ಮುಖ್ಯದ್ವಾರದವರೆಗೂ ಮೆರವಣಿಗೆ ಕೊಂಡೊಯ್ಯುತ್ತಾರೆ. ಹೀಗಾಗಿ ಚೆಂಡುಮಲ್ಲಿಗೆ ಹೂಗಳನ್ನೇ ಸಂಕ್ರಾಂತಿ ಹಬ್ಬದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಚೆಂಡು ಹೂವಿನ ದರ ಮೇಲ್ಮುಖವಾಗುವುದು ಸಹಜ.

ಸತತ ಬರಗಾಲಕ್ಕೆ ತುತ್ತಾಗಿದ್ದ ತಾಲ್ಲೂಕಿನಲ್ಲಿ ಈಚೆಗೆ ನಾಲ್ಕೈದು ತಿಂಗಳಿನಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ಬೆಳೆಗಳಿಗೆ ನೀರಿನ ಕೊರತೆ ಇಲ್ಲ. ಆದರೂ ಸತತವಾಗಿ ಮಳೆ ಬಿಳುತ್ತಲೇ ಇದ್ದುದ್ದರಿಂದ ಉಳುಮೆ ಮಾಡಿ ಜಮೀನನ್ನು ಪಕ್ವತೆಗೆ ತರಲು ರೈತರಿಗೆ ಆಗಲಿಲ್ಲ. ಹಾಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿ ಚೆಂಡು ಹೂವನ್ನು ರೈತರು ಬೆಳೆಯಲು ಆಗಲಿಲ್ಲ. ಆದ್ದರಿಂದ ಸಹಜವಾಗಿಯೇ ಚೆಂಡು ಹೂಗೆ ಬೇಡಿಕೆ ಮತ್ತು ಬೆಲೆ ಹೆಚ್ಚಾಗುತ್ತಿದೆ ಎಂದು ಚೆಂಡು ಹೂವಿನ ವ್ಯಾಪಾರಿ ನಗವಾರ ರಾಜಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.