
ಕೋಲಾರ: ಕಮ್ಮಸಂದ್ರದ ಸಂತೋಷ್ ಎಂಬುವರ ಕುಟುಂಬ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಸಂಬಂಧಿಯನ್ನು ಮಾತನಾಡಿಸಿಕೊಂಡು ಬೆಂಗಳೂರಿನಿಂದ ಕಾರಿನಲ್ಲಿ ವಾಪಸ್ ಗ್ರಾಮಕ್ಕೆ ಮರಳುತ್ತಿತ್ತು. ಈ ವೇಳೆ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಮಹಿಳೆ, ಆಕೆ ಗರ್ಭದಲ್ಲಿದ್ದ ಎಂಟು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟರು...
ಬಾಣಂತಿ ಪತ್ನಿ ಹಾಗೂ ಮಗುವನ್ನು ನೋಡಿಕೊಂಡು 33 ವಯಸ್ಸಿನ ಮುರಳಿ ಬಂಗಾರಪೇಟೆಯಿಂದ ಮಾಲೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬಂಗಾರಪೇಟೆ ಬಳಿ ಸಂಭವಿಸಿದ ಅಪಘಾತದಲ್ಲಿ ತಲೆಗೆ ಏಟು ಬಿದ್ದು ಮೃತಪಟ್ಟರು...
ಬೆಂಗಳೂರಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೋಗಬೇಕೆಂದು ಗೆಳೆಯರು ಚೆನ್ನೈನಿಂದ ಕಾರಿನಲ್ಲಿ ಹೊರಟಿದ್ದರು. ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಬಳಿ ಮಧ್ಯರಾತ್ರಿ ಕಾರು ಮೇಲ್ಸೇತುಯಿಂದ ಬಿದ್ದು ಅಯ್ಯಪ್ಪಸ್ವಾಮಿ ಮಾಲಾಧಾರಿ ಸೇರಿ ನಾಲ್ವರು ಮೃತಪಟ್ಟರು...
ಖಾಸಗಿ ಸಂಸ್ಥೆಯ ಕಾರ್ಯಕ್ರಮದಲ್ಲಿ ಅಡುಗೆ ಕೆಲಸ ಮುಗಿಸಿ ಹೊರಟಿದ್ದ ಬಾಣಸಿಗರಿದ್ದ ಟೆಂಪೊ ಟ್ರಾವೆಲರ್ ಸ್ಕಿಡ್ ಆಗಿದೆ. ಆ ವೇಳೆ ಸಾಗುತ್ತಿದ್ದ ಈಚರ್ ಗಾಡಿಯು ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಆ್ಯಂಬುಲೆನ್ಸ್‌ಗೂ ಗುದ್ದಿತ್ತು. ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಬಳಿ ಬಳಿ ಸಂಭವಿಸಿದ ಈ ಸರಣಿ ಅಪಘಾತದಲ್ಲಿ ಮೂವರು ಮೃತಪಟ್ಟು, 22 ಮಂದಿ ಗಾಯಗೊಂಡಿದ್ದರು…
ಕೆಲಸಕ್ಕೆಂದು ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಈಶ್ವರ್ ಹಾಗೂ ಜನನಿ ಎಂಬುವರು ಮಾಲೂರು ಬಳಿ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು…
ಬಂಗಾರಪೇಟೆ ತಾಲ್ಲೂಕಿನ ಸಿದ್ದನಹಳ್ಳಿ ಸಮೀಪ ಆಂಧ್ರಪ್ರದೇಶದ ಅನಂತಪುರದ ಕೃಷ್ಣ ಜಗನ್ ಎಂಬ ವೈದ್ಯರಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ವೈದ್ಯ ಮೃತಪಟ್ಟಿದ್ದರು...
ಈ ಹೃದಯ ವಿದ್ರಾವಕ ಸಾವುಗಳು ಸಂಭವಿಸಿದ್ದು ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಲ್ಲಿ.
2025ನೇ ವರ್ಷದಲ್ಲಿ ಈ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ 20ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ‘ಮೃತ್ಯುಕೂಪ’ ಎನಿಸಿಕೊಳ್ಳುತ್ತಿರುವ ಈ ಕಾರಿಡಾರ್‌ನಲ್ಲಿ ವೇಗಕ್ಕೆ ನಿಯಂತ್ರಣ ಸಿಗುವುದೇ, ಅಪಘಾತಗಳನ್ನು ತಗ್ಗಿಸಲು ಕ್ರಮ ನಡೆಯುವುದೇ ಎಂದು ಸಾರ್ವಜನಿಕರು, ಸಂಘ ಸಂಸ್ಥೆಗಳ ಮುಖಂಡರು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಕಾರುಗಳ ಅತಿ ವೇಗದ ಚಾಲನೆ, ತೂಕಡಿಕೆ ಸೇರಿದಂತೆ ಕೆಲ ಅಪಘಾತಗಳು ಸ್ವಯಂಕೃತ ಅಪರಾಧದಿಂದ ಸಂಭವಿಸಿರಬಹುದು, ನಿರ್ಬಂಧವಿದ್ದರೂ ದ್ವಿಚಕ್ರ ವಾಹನ ಸವಾರರು ಅನಧಿಕೃತವಾಗಿ ಹೆದ್ದಾರಿಗೆ ಪ್ರವೇಶಿಸಿ ಅಪಘಾತಕ್ಕೆ ಒಳಗಾಗಿರಬಹುದು. ಆದರೆ, ಕೆಲವೊಂದು ಅವೈಜ್ಞಾನಿಕ ಕಾಮಗಾರಿಗಳು, ಸರಿಯಾಗಿ ನಿಗಾ ಇಡದಿರುವುದು ಎಕ್ಸ್‌ಪ್ರೆಸ್ ವೇಯನ್ನು ‘ಮೃತ್ಯುಕೂಪ’ ಎನ್ನುವಂತೆ ಮಾಡುತ್ತಿವೆ ಎಂದು ಚಾಲಕರು ದೂರುತ್ತಾರೆ.
ಹೊಸಕೋಟೆಯಿಂದ ಕೆಜಿಎಫ್‌ವರೆಗೆ 71 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್ ವೇ ಕಾರಿಡಾರ್ ಈಗಾಗಲೇ ಸಂಚಾರಕ್ಕೆ ತೆರೆದುಕೊಂಡಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ತಮಿಳುನಾಡು, ಆಂಧ್ರದ ಮಾರ್ಗ ಇನ್ನೂ ತೆರೆದಿಲ್ಲ.
ಕೆಜಿಎಫ್ ಜಿಲ್ಲಾ ಪೊಲೀಸ್ ಹಾಗೂ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಸಂಬಂಧ ಕೆಡಿಎಫ್ ಸಭೆಯಲ್ಲಿ ಪ್ರಸ್ತಾಪವಾಗಿ ಚರ್ಚೆ ಆಗಿತ್ತು. ಪೊಲೀಸರನ್ನು ನಿಯೋಜಿಸಲು ಸಂಸದ ಎಂ.ಮಲ್ಲೇಶ್ ಬಾಬು ಆಗ ಸೂಚನೆ ನೀಡಿದ್ದರು. ಗಂಟೆಗೆ ಗರಿಷ್ಠ 120 ಕಿ.ಮೀ ವೇಗ ಮಿತಿ ವಿಧಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾರು ಚಾಲಕರು ಅತಿ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆಯುತ್ತಿದ್ದಾರೆ, ಕಂದಕಕ್ಕೆ ಬೀಳುತ್ತಿದ್ದಾರೆ. ಇನ್ನು ಕೆಲ ಸಂದರ್ಭದಲ್ಲಿ ದ್ವಿಚಕ್ರ ಸವಾರರು ದಿಢೀರನೇ ವಿರುದ್ಧ ದಿಕ್ಕಿನಲ್ಲಿ ಬಂದು ಕಾರಿಗೆ ಡಿಕ್ಕಿಯಾಗುತ್ತಿರುವ ಅಥವಾ ಅಪಘಾತ ತಪ್ಪಿಸಲು ಕಾರು ಚಾಲಕರು ಪ್ರಯತ್ನಿಸಿ ನಿಯಂತ್ರಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.
ಕಾರಿನಲ್ಲಿರುವ ಏರ್ ಬ್ಯಾಗ್ ತೆರೆದುಕೊಂಡರೂ ಅಪಘಾತದ ತೀವ್ರತೆಗೆ ಭಾರಿ ಅನಾಹುತ ಸಂಭವಿಸುತ್ತಿವೆ. ವಾಹನಗಳಂತೂ ಸಂಪೂರ್ಣ ನಜ್ಜುಗುಜ್ಜಾಗಿರುವ ಉದಾಹರಣೆಗಳಿವೆ.
ವಾಹನಗಳ ವೇಗದ ಮೇಲೆ ನಿಗಾ ಇಡಲು ಸ್ಪೀಡ್ ರಾಡಾರ್ ಗನ್ ವಿತರಣೆ ಮಾಡಲಾಗಿದೆ. ವೇಗ ಮೀರಿದ ವಾಹನಗಳಿಗೆ ದಂಡ ವಿಧಿಸುವ ಎಚ್ಚರಿಕೆಯನ್ನು ಪೊಲೀಸರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿದ್ದಾರೆ. ಇಷ್ಟಾಗಿಯೂ ಅಪಘಾತಗಳು ಕಡಿಮೆ ಆಗುತ್ತಿಲ್ಲ.
2025ನೇ ವರ್ಷ ಮುಗಿಯುತ್ತಿದೆ. 2026ರ ಸಂವತ್ಸರದಲ್ಲಾದರೂ ಅಪಘಾತಗಳಿಗೆ ಕಡಿವಾಣ ಬೀಳುವುದೇ, ವಾಹನ ಚಾಲಕರು ಎಚ್ಚೆತ್ತುಕೊಳ್ಳುವವರೇ, ಪೊಲೀಸರು ಮತ್ತಷ್ಟು ನಿಗಾ ಇಡುವರೇ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಪಘಾತ ತಪ್ಪಿಸಲು ಮತ್ತಷ್ಟು ಹೆದ್ದಾರಿ ಸರಿಪಡಿಸುವ ಕೆಲಸ ಮಾಡುವವರೇ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.
ಟೋಲ್ ಶುಲ್ಕ ವಿಧಿಸುತ್ತಿರುವ ಪ್ರಾಧಿಕಾರ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ಗೆ ಇನ್ನೂ ಅಧಿಕೃತವಾಗಿ ಚಾಲನೆ ಸಿಕ್ಕಿಲ್ಲ. ತಮಿಳುನಾಡು ಆಂಧ್ರ ಭಾಗದ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೂ ಕೆಜಿಎಫ್‌ನಿಂದ ಬೆಂಗಳೂರಿನ ಹೊಸಕೋಟೆವರೆಗೆ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಅಷ್ಟರಲ್ಲಿ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಬೆಂಗಳೂರು ದಾಬಸ್‌ಪೇಟೆ ಬಳಿಯ ಸೋಂಪುರ ಕೈಗಾರಿಕೆ ಪ್ರಾಂಗಣದಿಂದ ನೇರವಾಗಿ ಚೆನ್ನೈ ಬಂದರನ್ನು ತಲುಪಲು ಮತ್ತು ಟ್ರಾಫಿಕ್ ಮುಕ್ತ ರಸ್ತೆಯನ್ನಾಗಿ ಮಾಡಿದ ಹೆಗ್ಗಳಿಕೆಯನ್ನು ಈ ರಸ್ತೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.