ಮುಳಬಾಗಿಲು: ತಾಲ್ಲೂಕಿನಲ್ಲಿ ಇತ್ತೀಚೆಗೆ ಸತತವಾಗಿ ಸುರಿಯುತ್ತಿರುವ ಚಿತ್ತ ಮಳೆಗೆ ತಾಲ್ಲೂಕಿನ ವಿವಿಧೆಡೆ ರಾಶಿರಾಶಿಯಾಗಿ ಅಣಬೆ ಬೆಳೆದಿದೆ.
ಸುಮಾರು ಹತ್ತು ದಿನಗಳಿಂದ ಸುರಿಯುತ್ತಿರುವ ಚಿತ್ತ ಮಳೆಯಿಂದ ಗ್ರಾಮೀಣ ಭಾಗದಲ್ಲಿನ ಹುತ್ತಗಳ ಮೇಲೆ, ಪೊದೆ, ಏಟಿ ಹಾಗೂ ರಾಜ ಕಾಲುವೆಗಳು ಸೇರಿದಂತೆ ಇನ್ನಿತರ ಮಣ್ಣಿನ ತೇವಾಂಶ ಇರುವ ಸ್ಥಳಗಳಲ್ಲಿ ರಾಶಿ ರಾಶಿ ಅಣಬೆ ಬೆಳೆದಿದೆ. ಅವುಗಳನ್ನು ಕಿತ್ತುಕೊಳ್ಳಲು ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.
ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ವೆಂಕಟಾಪುರ ಗ್ರಾಮದ ನರೇಶ್ ರೆಡ್ಡಿ ಎಂಬುವರು ತಮ್ಮ ತೋಟದ ಬಳಿಯ ಲಾಂಟಾನ ಗಿಡಗಳ ಪೊದೆಗಳಲ್ಲಿ ಅಣಬೆಗಳು ಹುಟ್ಟಿಕೊಂಡಿದ್ದು, ಅವುಗಳನ್ನು ಕಂಡು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ನರೇಶ್ ರೆಡ್ಡಿ ಸುಮಾರು 100ಕ್ಕೂ ಹೆಚ್ಚಿನ ಅಣಬೆಗಳನ್ನು ಕಿತ್ತು ಮನೆಗೆ ಸಾಗಿಸಿ ಪಕ್ಕದ ಮನೆಯವರೆಗೂ ಹಂಚಿದ್ದಾರೆ.
ರಾಸಾಯನಿಕ ಗೊಬ್ಬರಗಳು ಸಿಂಪಡಣೆ ಮಾಡದೆ ಇರುವ ಭೂಮಿಯಲ್ಲಿ ಅಣಬೆ ಹುಟ್ಟುಕೊಳ್ಳುತ್ತದೆ. ಆದರೆ, ಇತ್ತೀಚೆಗೆ ಎಲ್ಲ ಕಡೆಗಳಲ್ಲಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಔಷಧ ಸಿಂಪಡಣೆ ಮಾಡುತ್ತಿರುವುದರಿಂದ ಅಣಬೆಗಳು ಹುಟ್ಟುವುದು ಕ್ಷೀಣಿಸುತ್ತಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.