ADVERTISEMENT

ಮುಳಬಾಗಿಲು: ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:41 IST
Last Updated 8 ಜುಲೈ 2025, 6:41 IST
ಮುಳಬಾಗಿಲು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು
ಮುಳಬಾಗಿಲು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಗಲಾಟೆ ನಡೆಯಿತು   

ಮುಳಬಾಗಿಲು: ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಆಗಿ ಕೋಲದೇವಿ ಗ್ರಾಮದ ಕೆ.ಎನ್. ಉಮಾಶಂಕರ್ ನೇಮಕವಾಗಿದ್ದಾರೆ. ಅವರ ನೇಮಕಾತಿಯನ್ನು ವಿರೋಧಿಸಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ಒಂದು ಗುಂಪು ಅಸಮಾಧಾನ ವ್ಯಕ್ತಪಡಿಸಿದೆ. 

ಈ ಸಂಬಂಧ ಕಾಂಗ್ರೆಸ್‌ನ ಎರಡು ಬಣಗಳ ಮಧ್ಯೆ ಭಾನುವಾರ ಸಂಜೆ ಮುಳಬಾಗಿಲು ಕಾಂಗ್ರೆಸ್ ಕಚೇರಿಯಲ್ಲಿ ವಾಗ್ವಾದ ಮತ್ತು ಜಗಳ ನಡೆದಿದೆ. 

ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ವಿ. ಆದಿನಾರಾಯಣ ಭಾನುವಾರ ಸಂಜೆ ಪಕ್ಷದ ಕಾರ್ಯಕರ್ತರ ಸಭೆ ಕರೆದಿದ್ದರು. ಆದರೆ ಸಭೆಗೆ ಬಂದ ಪಕ್ಷದ ಒಂದು ಬಣವು, ಕೆ.ಎನ್. ಉಮಾಶಂಕರ್ ಅವರನ್ನು ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಅವರ ಬದಲಿಗೆ ಉತ್ತನೂರು ಶ್ರೀನಿವಾಸ್ ಅವರಿಗೆ ಕೊಡಬೇಕಿತ್ತು ಎಂದು ಒತ್ತಾಯಿಸಿದೆ. 

ADVERTISEMENT

ಉತ್ತನೂರು ಶ್ರೀನಿವಾಸ್, ವಿ.ಎಸ್. ಅರವಿಂದ್, ನವೀನ್, ವಿನೋದ್, ಹೆಬ್ಬಣಿ ರಾಮಚಂದ್ರ ಅವರ ಗುಂಪು ವಿ.ಆದಿನಾರಾಯಣ ಅವರು ಕೆಲವರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದು, ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಾದಕ್ಕೆ ವಿ. ಆದಿನಾರಾಯಣ ಅವರ ಪರವಾಗಿರುವ ಗುಂಪು ಪ್ರತಿರೋಧ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ಎರಡು ಗುಂಪಿನ ಮಧ್ಯೆ ವಾಕ್ಸಮರ ಏರ್ಪಟ್ಟು, ಗದ್ದಲ ಉಂಟಾಯಿತು. ಒಂದು ಹಂತದಲ್ಲಿ ಎರಡೂ ಬಣದ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. 

ಕೋಮುಲ್ ನಿರ್ದೇಶಕ ಚುನಾವಣೆಯಲ್ಲಿ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೇಣುಕಾ ಅವರ ಪರ ವಿ. ಆದಿನಾರಾಯಣ ಪ್ರಚಾರಕ್ಕೆ ಬಂದಿಲ್ಲ ಒಂದು ಬಣ ಅಸಮಾಧಾನ ವ್ಯಕ್ತಪಡಿಸಿತು. 

ಈ ಸಂದರ್ಭದಲ್ಲಿ ಜಮ್ಮನಹಳ್ಳಿ ಕೃಷ್ಣಪ್ಪ, ವಿ.ಕೆ. ರಾಜು ಸೇರಿದಂತೆ ಇತರರು ಎರಡೂ ಗುಂಪುಗಳ ಕಾರ್ಯಕರ್ತರನ್ನು ಸಮಾಧಾನಗೊಳಿಸಿದರು. ಆಗ ವಿ. ಆದಿನಾರಾಯಣ ಅವರ ಗುಂಪು ಸಭೆಯಿಂದ ಹೊರನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.