
ಕೋಲಾರ: ಕೋಮುವಾದಿಗಳು ವಿಜೃಂಭಿಸುತ್ತಾ ಕೇಂದ್ರದಲ್ಲಿ ಆಡಳಿತ ನಡೆಸುವ ಸ್ಥಿತಿಗೆ ಬಂದಿರುವುದು ದೇಶದ ಜನರ ತಪ್ಪಲ್ಲ; ನಮ್ಮಗಳ ರಾಜಕೀಯ ಪಕ್ಷಗಳ ತಪ್ಪಾಗಿದೆ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಓದುಗ ಕೇಳುಗ-ನಮ್ಮ ನಡೆ ಬಳಗ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಿರಿಗನ್ನಡ ಪುಸ್ತಕ ಮಳಿಗೆ ಸಹಯೋಗದಲ್ಲಿ ಓದುಗ ಕೇಳುಗ-ನಮ್ಮ ನಡೆ 55ನೇ ತಿಂಗಳ ಕಾರ್ಯಕ್ರಮದಲ್ಲಿ ‘ವಿಮೋಚನೆಯ ಸಮರದಲ್ಲಿ (ಮೇಜರ್ ಜಯಪಾಲ್ ಸಿಂಗ್ ನೆನಪುಗಳು)’ ಅನುವಾದಿತ ಕೃತಿ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಜನರೆಂದೂ ಕೋಮುವಾದಿಗಳಾಗಿರಲಿಲ್ಲ. ದೇಶ ವಿಭಜನೆಯಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಜರುಗಿದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಪರ್ಯಾಯವಾಗಿ ಸಿಪಿಎಂ ಪಕ್ಷವನ್ನು ಜನರು ವಿರೋಧ ಪಕ್ಷವಾಗಿ ಆಯ್ಕೆ ಮಾಡಿಕೊಂಡಿದ್ದರು. ಮತೀಯವಾದಿಗಳಿಗೆ ಮೊದಲ ಚುನಾವಣೆಯಲ್ಲಿ ಕೇವಲ ಶೇ 5.1 ರಷ್ಟು ಮತಗಳನ್ನಷ್ಟೇ ನೀಡಿದ್ದರು ಎಂದರು.
ಜಗತ್ತು ಇರುವವರೆಗೆ ಎಡ ಮತ್ತು ಬಲ ಪಂಥೀಯವಾದ ಇದ್ದೇ ಇರುತ್ತವೆ. ಬದುಕನ್ನು ಎಲ್ಲರೂ ಸಮಾನವಾಗಿ ಹಂಚುವುದೇ ಎಡಪಂಥೀಯವಾದವಾಗಿದ್ದು, ಇಂತಹ ಎಡಪಂಥದತ್ತಲೇ ನಾವೆಲ್ಲರೂ ವಾಲುತ್ತೇವೆ ಎಂದು ಸಮರ್ಥಿಸಿಕೊಂಡರು.
ದೇಶದ ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಪಕ್ಷವನ್ನು ಸರಾಸಗಟಾಗಿ ದೂರುವುದು ಸರಿಯಲ್ಲ. ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್‍ಗೆ ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸುವ ಅಜೆಂಡಾ ಮಾತ್ರವೇ ಇತ್ತು. ಆದ್ದರಿಂದ ಈಗಿನ ರಾಜಕೀಯ ಪಕ್ಷ ಕಾಂಗ್ರೆಸ್ ಆಗಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಒಂದೇ ಎಂದು ಭಾವಿಸಬೇಕಾಗಿಲ್ಲ ಎಂದು ವಿವರಿಸಿದರು.
ಬ್ರಿಟಿಷ್ ಸೇನೆಯಲ್ಲಿಯೇ ಅಧಿಕಾರಿಯಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮೇಜರ್ ಜಯಪಾಲ್ ಸಿಂಗ್ ಅವರನ್ನು ಸ್ವಾತಂತ್ರ್ಯ ನಂತರ ಬಂದ ಸರ್ಕಾರ ಜೈಲಿಗಟ್ಟಿ, ಅವರನ್ನು ನಡೆಸಿಕೊಂಡ ರೀತಿ ಅಕ್ಷಮ್ಯ ಅಪರಾಧವಾಗಿದೆ ಎಂದರು.
ಈಗಲಾದರೂ ಮೇಜರ್ ಜಯಪಾಲ್ ಸಿಂಗ್ ಅವರ ಹೋರಾಟವನ್ನು ಅರ್ಥ ಮಾಡಿಕೊಂಡು ಅವರಿಗೆ ಸೇನೆಯ ಅಧಿಕಾರಿಗಳ ಮೂಲಕ ಗೌರವ ಸಮರ್ಪಿಸಿ, ದೇಶದ ಜನರಿಗೆ ಹೆಮ್ಮೆಯಿಂದ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದು ಪ್ರತಿಪಾದಿಸಿದರು.
ಕೃತಿ ಕುರಿತಂತೆ ಪತ್ರಕರ್ತ ಎಸ್.ವೈ.ಗುರುಶಾಂತ್ ಮಾತನಾಡಿ, ‘ಮೇಜರ್ ಜಯಪಾಲ್ ಸಿಂಗ್‍ರ ನೆನಪುಗಳು ಕೃತಿಯು ಬ್ರಿಟಿಷ್ ಸೇನೆಯಲ್ಲಿಯೇ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪೂರಕವಾಗಿ ಕೆಲಸ ಮಾಡಿದವರ ಹೋರಾಟವನ್ನು ಪರಿಚಯಿಸುತ್ತದೆ’ ಎಂದರು.
ದೇಶವು ಸ್ವಾತಂತ್ರ್ಯಗೊಳ್ಳುವ ಸಂದರ್ಭದಲ್ಲಿ ಬ್ರಿಟಿಷರು ದೇಶವನ್ನು ಕೋಮುವಾದದ ಮೇಲೆ ವಿಭಜಿಸುವ ಪ್ರಯತ್ನ ಮಾಡಿದ್ದರು, ಈಗಲೂ ಕೋಮುವಾದ ದೇಶವನ್ನು ವಿಭಜಿಸುತ್ತಾ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಸಾಧನವಾಗಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಅನುವಾದಿತ ಕೃತಿಕಾರ ವಿಶ್ವಕುಂದಾಪುರ ವೇದಿಕೆಯಲ್ಲಿ ಇದ್ದರು. ಆದಿಮ ರಂಗ ವಿದ್ಯಾರ್ಥಿ ದರ್ಶನ್ ಹಾಗೂ ಓದುಗ ಕೇಳುಗ ಬಳದ ಪ್ರಮುಖರಾದ ಎಚ್.ಎ.ಪುರುಷೋತ್ತಮ್ ಆಶಯ ಗೀತೆಗಳನ್ನು ಹಾಡಿದರು. ಜೆ.ಜಿ ನಾಗರಾಜ್ ನಿರೂಪಿಸಿ, ಹ.ಮಾ.ರಾಮಚಂದ್ರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.