ADVERTISEMENT

ಕಾಂಗ್ರೆಸ್‌ ಮತ ಬ್ಯಾಂಕ್‌ಗೆ ಪೆಟ್ಟು ನೀಡಲು ಜೆಡಿಎಸ್‌ನಿಂದ ಸಮಾವೇಶ

ಕೆ.ಓಂಕಾರ ಮೂರ್ತಿ
Published 16 ಸೆಪ್ಟೆಂಬರ್ 2022, 4:44 IST
Last Updated 16 ಸೆಪ್ಟೆಂಬರ್ 2022, 4:44 IST
ವಿ.ಆರ್. ಸುದರ್ಶನ್
ವಿ.ಆರ್. ಸುದರ್ಶನ್   

ಕೋಲಾರ: ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ತಯಾರಿ ಆರಂಭಿಸಿರುವ ಜೆಡಿಎಸ್‌ನವರು ಅಲ್ಪಸಂಖ್ಯಾತರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದ್ದು, ಕಾಂಗ್ರೆಸ್‌ ಮತ ಬ್ಯಾಂಕ್‌ಗೆಪೆಟ್ಟುನೀಡಲು ಮುಸ್ಲಿಮರ ಸಮಾವೇಶ ಆಯೋಜಿಸಿದ್ದಾರೆ.

ಕೋಲಾರ ಸೇರಿದಂತೆ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಪ್ರಭಾವ ಹೆಚ್ಚಿರುವುದರಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಸೂಚನೆ ಮೇರೆಗೆ ಈಗಿನಿಂದಲೇ ಕಸರತ್ತು ಆರಂಭಿಸಿದ್ದಾರೆ.

ಜೆಡಿಎಸ್‌ ಪಕ್ಷವು ಜಿಲ್ಲೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಳೆದು ಚುನಾವಣೆಯಲ್ಲಿ ಗೆದ್ದಿತ್ತು. ಆದರೆ, ಆ ಪಕ್ಷದ ಶಾಸಕ ಕೆ. ಶ್ರೀನಿವಾಸಗೌಡ ಈಗ ಕಾಂಗ್ರೆಸ್‌ಪಡಸಾಲೆ ಯಲ್ಲಿಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನವರು 4 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಮುಳಬಾಗಿಲಿನಲ್ಲಿ ಪಕ್ಷೇತರ ಶಾಸಕ ಎಚ್‌. ನಾಗೇಶ್‌ ಜಯ ಗಳಿಸಿದ್ದರು. ಬಿಜೆಪಿಗೆ ಒಂದೂ ಸ್ಥಾನ ಒಲಿದಿರಲಿಲ್ಲ.

ADVERTISEMENT

ಕೋಲಾರ, ಮುಳಬಾಗಿಲಿನಲ್ಲಿ ಮುಸ್ಲಿಂ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಕ್ಷೇತ್ರದಲ್ಲೂ ಪ್ರಭಾವ ಇದೆ.

ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಮುಸ್ಲಿಮರ ಮತ ಸೆಳೆಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ ಆರಂಭವಾಗಿದೆ.

‘ಮುಸ್ಲಿಂ ಸಮುದಾಯ ಅಥವಾ ಇನ್ನಿತರ ಸಮುದಾಯಗಳ ವಿಶ್ವಾಸ ಗಿಟ್ಟಿಸಲು ಆರೋಗ್ಯಕರ ಸ್ಪರ್ಧೆ ಒಳ್ಳೆಯದೇ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಕೂಡ ಪ್ರಯತ್ನ ನಡೆಸಲಿದೆ. ಜೆಡಿಎಸ್‌ ಹಾಗೂ ಬಿಜೆಪಿಯವರೂ ಪ್ರಯತ್ನ ಹಾಕಲಿ’ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬದಲಾವಣೆ, ಸುಧಾರಣೆಯನ್ನು ಜನ ಬಯಸಿದ್ದಾರೆ. ಕಾಂಗ್ರೆಸ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ’ ಎಂದರು.

ಈ ಮಧ್ಯೆ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಮುಖಂಡರಿಗೆ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

‘ಸೆ. 18ರಂದು ನಡೆಯಲಿರುವ ಅಲ್ಪಸಂಖ್ಯಾತರ ಸಮಾವೇಶದ ಮೂಲಕವೇ ಚುನಾವಣೆ ಕಹಳೆ ಮೊಳಗಿಸಲಿದ್ದೇವೆ. ಸಮಾವೇಶದಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ ಪಾಲ್ಗೊಳ್ಳಲಿದ್ದು, ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ’ ಎಂದು ಜೆಡಿಎಸ್‌ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿ‌ದರು.

‘25 ಸಾವಿರ ಮುಸ್ಲಿಮರೇ ಸೇರಿಕೊಂಡು ಸಮಾವೇಶ ನಡೆಸುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಖಾಲಿಯಾಗಲಿದೆ’ ಎಂಬುದಾಗಿ ಈಚೆಗೆ ಸಿ.ಎಂ. ಇಬ್ರಾಹಿಂ ಹೇಳಿದ್ದರು.

ಈ ನಡುವೆ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಮುಸ್ಲಿಂ ಸಮುದಾಯದ ವೋಟುಗಳು ವಿಭಜನೆಯಾದರೆ ತನಗೆ ಸಹಾಯ ಆಗಬಹುದು ಎಂಬ ಹಂಬಲದಲ್ಲಿ ಬಿಜೆಪಿ ಇದೆ. ಆ ನಿಟ್ಟಿನಲ್ಲಿ ಇತರ ಸಮುದಾಯಗಳ ಮತಗಳನ್ನು ಕ್ರೋಡೀಕರಿಸಲು ತಂತ್ರಗಾರಿಕೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.