ADVERTISEMENT

ಕೋಲಾರದಲ್ಲಿ ಸಂಪೂರ್ಣ ಲಾಕ್‌ಡೌನ್‌; ಖರೀದಿಗೆ ಮುಗಿಬಿದ್ದ ಜನ

ಮಾರುಕಟ್ಟೆಯಲ್ಲಿ ಜನಜಂಗುಳಿ: ಕೋವಿಡ್‌ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 21 ಮೇ 2021, 13:29 IST
Last Updated 21 ಮೇ 2021, 13:29 IST
ಕೋಲಾರದ ಪ್ರಮುಖ ವಾಣಿಜ್ಯ ಸ್ಥಳ ಕಾಳಮ್ಮ ಗುಡಿ ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ವಾಹನ ದಟ್ಟಣೆ.
ಕೋಲಾರದ ಪ್ರಮುಖ ವಾಣಿಜ್ಯ ಸ್ಥಳ ಕಾಳಮ್ಮ ಗುಡಿ ರಸ್ತೆಯಲ್ಲಿ ಶುಕ್ರವಾರ ಕಂಡುಬಂದ ವಾಹನ ದಟ್ಟಣೆ.   

ಕೋಲಾರ: ಜಿಲ್ಲಾಡಳಿತದ ಆದೇಶದಂತೆ ಜಿಲ್ಲೆಯಲ್ಲಿ ಶುಕ್ರವಾರ (ಮೇ 21) ಸಂಜೆಯಿಂದ ಸಂಪೂರ್ಣ ಲಾಕ್‌ಡೌನ್‌ ಜಾರಿಯಾಗಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಬೆಳಿಗ್ಗೆ ಮುಗಿಬಿದ್ದರು.

ಜಿಲ್ಲೆಯಾದ್ಯಂತ ಮೇ 25ರ ಬೆಳಿಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಪೆಟ್ರೋಲ್‌ ಬಂಕ್‌, ಹಾಲಿನ ಮಳಿಗೆಗಳು ಮತ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ತರಕಾರಿ, ಹೂವು, ಹಣ್ಣು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೂ ಸಹ ಅವಕಾಶವಿಲ್ಲ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಗೆ 3 ದಿನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಶುಕ್ರವಾರವೇ ಖರೀದಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಹೀಗಾಗಿ ಜನರು ಕೋವಿಡ್‌ ಆತಂಕದ ನಡುವೆಯೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಮನೆಯಿಂದ ಹೊರಬಂದು ಮಾರುಕಟ್ಟೆ, ವಾಣಿಜ್ಯ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಓಡಾಡಿದರು.

ADVERTISEMENT

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಮಾರುಕಟ್ಟೆಗಳಲ್ಲಿ ಮತ್ತು ಅಂಗಡಿಗಳ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂತರ ಪಾಲಿಸದೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಮಾಸ್ಕ್‌ ಧರಿಸದೆ ಅನಗತ್ಯವಾಗಿ ಕಾರು, ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಹಲವೆಡೆ ಬಟ್ಟೆ, ಪಾದರಕ್ಷೆ, ಪಾತ್ರೆ ಅಂಗಡಿ ಮಾಲೀಕರು ಮಳಿಗೆಯ ಬಾಗಿಲು ತೆರೆದು ವಹಿವಾಟು ನಡೆಸಿದರು. ಸಾಮಾನ್ಯ ದಿನಕ್ಕೆ ಹೋಲಿಸಿದರೆ ಎಪಿಎಂಸಿ, ಮಾರುಕಟ್ಟೆಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಮತ್ತು ವಾಹನ ದಟ್ಟಣೆ ಹೆಚ್ಚಿತ್ತು. ವಾಣಿಜ್ಯ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಕಿಲೋಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ಆಟಕ್ಕುಂಟು ಲೆಕ್ಕಕ್ಕಿಲ್ಲ: ಎಲ್ಲೆಡೆ ಕೋವಿಡ್‌ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತರ ಕಾಯ್ದುಕೊಳ್ಳದ ಜನರನ್ನು ನಿಯಂತ್ರಿಸುವುದು ವರ್ತಕರಿಗೆ ದೊಡ್ಡ ತಲೆ ನೋವಾಯಿತು. ಪೊಲೀಸರು ಸಹ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ.

ಎಪಿಎಂಸಿಗಳಲ್ಲಿ ಭರ್ಜರಿ ವಹಿವಾಟು ನಡೆಯಿತು. ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಲೋಡ್‌ಗಟ್ಟಲೇ ತರಕಾರಿ ಸರಕು ಎಪಿಎಂಸಿಗೆ ಬಂದಿತು. ವರ್ತಕರು ಮಂಡಿ ಬಾಗಿಲು ತೆರೆದು ಎಂದಿನಂತೆ ವಹಿವಾಟು ನಡೆಸಿದರು.

ಕಾರ್ಮಿಕರ ವಲಸೆ: ಸಂಪೂರ್ಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯ, ಜಿಲ್ಲೆ, ಊರುಗಳತ್ತ ಪ್ರಯಾಣ ಬೆಳೆಸಿದರು. ಲಾಕ್‌ಡೌನ್‌ ಕಾರಣಕ್ಕೆ ಕೆಲಸ ಇಲ್ಲದ ಸನ್ನಿವೇಶ ಸೃಷ್ಟಿಯಾಗುವ ಆತಂಕದಿಂದ ವಲಸೆ ಕಾರ್ಮಿಕರು ತಂಡೋಪತಂಡವಾಗಿ ತಮ್ಮ ಊರುಗಳಿಗೆ ಹಿಂದಿರುಗಿದರು. ರೈಲು ಹಾಗೂ ಖಾಸಗಿ ವಾಹನಗಳು ಕಾರ್ಮಿಕರಿಂದ ತುಂಬಿ ಹೋಗಿದ್ದವು.

ಮದ್ಯ ಖರೀದಿ: ಹೋಟೆಲ್‌, ಇಂದಿರಾ ಕ್ಯಾಂಟೀನ್‌ ಮತ್ತು ಮದ್ಯದಂಗಡಿಗಳಲ್ಲಿ ಸರ್ಕಾರದ ಆದೇಶದಂತೆ ಪಾರ್ಸಲ್‌ ಸೇವೆಗೆ ಮಾತ್ರ ಅವಕಾಶ ನೀಡಲಾಯಿತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್‌ ಆಗುತ್ತವೆ ಎಂಬ ಕಾರಣಕ್ಕೆ ಮದ್ಯಪ್ರಿಯರು ಮದ್ಯ ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದರು. ಮದ್ಯದಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.