ADVERTISEMENT

ಎರಡು ವರ್ಷದಲ್ಲಿ ಎತ್ತಿನಹೊಳೆ ಪೂರ್ಣ: ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 5:25 IST
Last Updated 5 ಫೆಬ್ರುವರಿ 2021, 5:25 IST

ಕೋಲಾರ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ 2020ರ ಅಂತ್ಯಕ್ಕೆ ₹ 7,721.65 ಕೋಟಿ ಸಂಚಿತ ವೆಚ್ಚವಾಗಿದೆ. 2023ರ ಅಂತ್ಯಕ್ಕೆ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ವಿಧಾನ ಪರಿಷತ್‍ನಲ್ಲಿ ಸದಸ್ಯ ಡಾ.ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ, ಜಲಸಂಪನ್ಮೂಲ ಸಚಿವರ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ನೀಡಿದರು.

ಗುರುವಾರ ವಿಧಾನ ಪರಿಷತ್‍ನಲ್ಲಿ ಸದಸ್ಯ ಡಾ.ವೈ.ಎ.ಎನ್ ಅವರು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಮತ್ತಿತರ ಅಂಶಗಳ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಬೊಮ್ಮಾಯಿ ಉತ್ತರಿಸಿದರು.

ಈ ಯೋಜನೆಯಿಂದ ರಾಜ್ಯದ ಪೂರ್ವಭಾಗದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯ 29 ತಾಲ್ಲೂಕಿನ 6,657 ಗ್ರಾಮಗಳಿಗೆ ಹಾಗೂ 68.35 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. 527 ಕೆರೆಗಳಿಗೆ ಅದರ ಸಾಮರ್ಥ್ಯದ ಶೇಕಡ 50ರಷ್ಟು ನೀರು ತುಂಬಿಸಿ ಅಂತರ್ಜಲ ವೃದ್ಧಿಗೆ ನೀರೊದಗಿಸಲು ಅವಕಾಶವಿದೆ ಎಂದು ತಿಳಿಸಿದರು.

ADVERTISEMENT

ಕುಡಿಯುವ ನೀರಿಗಾಗಿ 15.029 ಟಿಎಂಸಿ ಅಡಿ ನೀರು, ಕೆರೆಗಳನ್ನು ತುಂಬಿಸಲು 8.967 ಟಿಎಂಸಿ ಅಡಿ ನೀರು ಸೇರಿ ಒಟ್ಟು 24.01 ಟಿಎಂಸಿ ಅಡಿ ನೀರು ಹರಿಸಲಾಗುತ್ತದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಎತ್ತಿಹೊಳೆ, ಕಾಡುಮನೆಹೊಳೆ, ಕೇರಿಹೊಳೆ, ಹೊಂಗದಹಳ್ಳಗಳಿಗೆ 8 ಸ್ಥಳಗಳಲ್ಲಿ ಅಡ್ಡಲಾಗಿ ವಿಯರ್‌ಗಳನ್ನು ನಿರ್ಮಿಸಿ 4 ಹಂತಗಳಲ್ಲಿ 24 ಟಿಎಂಸಿ ಅಡಿ ನೀರನ್ನು ವಿತರಣಾ ತೊಟ್ಟಿಗೆ ಹರಿಸಲಾಗುವುದು. 2ನೇ ಹಂತದಲ್ಲಿ 260 ಮೀ. ಉದ್ದದ ಗುರುತ್ವ ಕಾಲುವೆ, ಟಿ.ಜಿ. ಹಳ್ಳಿ, ರಾಮನಗರ, ಗೌರಿಬಿದನೂರು, ಮಧುಗಿರಿ ಫೀಡರ್ ಕಾಲುವೆ, ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿ, ಕುಂದಾಣ ಲಿಫ್ಟ್‌ ಕಾಮಗಾರಿ, ಕೋಲಾರ, ಚಿಕ್ಕಬಳ್ಳಾಪುರ ಫೀಡರ್ ಕಾಲುವೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಈಗಾಗಲೇ 8 ಪಂಪ್‌ಹೌಸ್ ಕಾಮಗಾರಿ ಪೂರ್ಣಗೊಂಡಿದೆ. 112 ಕಿ.ಮೀ. ಉದ್ದದ ಏರುಕೊಳವೆ ಕಾಮಗಾರಿ ಪೂರ್ಣಗೊಂಡಿದೆ. ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ಶೇಕಡ 85ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

2ನೇ ಹಂತದಲ್ಲಿ 260 ಕಿ.ಮೀ. ಉದ್ದದ ಗುರುತ್ವ ಕಾಲುವೆಯ ಮಾರ್ಗದ ಮಧ್ಯದಲ್ಲಿ ಸುಮಾರು 10.47 ಕಿ.ಮೀ. ಉದ್ದದ ಮೇಲ್ಗಾಲುವೆ ನಿರ್ಮಿಸುವುದು ಸೇರಿದಂತೆ ಇತರೇ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಏತ ಕಾಮಗಾರಿಗಳು, ವಿದ್ಯುತ್ ಪೂರೈಕೆ ಕಾಮಗಾರಿಗಳು, ಗುರುತ್ವ ಕಾಲುವೆ ಸರಪಳಿ, 0.00 ಕಿ.ಮೀ.ನಿಂದ 33.00 ಕಿ.ಮೀ.ವರೆಗಿನ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂಗಾರು ಹಂಗಾಮಿನಲ್ಲಿ ವೇದಾವತಿ ನದಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ಯೋಜಿಸಲಾಗಿದೆ ಎಂದು ವಿವರಿಸಿದರು.

ಭೂಸ್ವಾಧೀನ ಪ್ರಕ್ರಿಯೆ ವಿಳಂಬದ ಕುರಿತು ಡಾ.ವೈ.ಎ.ಎನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೈತರು, ನಿಗಮ ಮತ್ತು ಗುತ್ತಿಗೆದಾರರು ನಡುವೆ ತ್ರಿಪಕ್ಷೀಯ ಕರಾರು ಒಪ್ಪಂದ ಮಾಡಿಕೊಂಡು ರೈತರ ಸಹಮತ ಪಡೆದು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಭೂಸ್ವಾಧೀನ ಕಾಯ್ದೆಅನ್ವಯ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.