ADVERTISEMENT

ಕಾಂಗ್ರೆಸ್‌ ’ಗ್ಯಾರಂಟಿ’ ಪೂರ್ಣವಾಗಿ ಜಾರಿಯಾಗುವುದು ಅಸಾಧ್ಯ: ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಮೇ 2023, 6:07 IST
Last Updated 22 ಮೇ 2023, 6:07 IST
ಸಂಸದ ಮುನಿಸ್ವಾಮಿ
ಸಂಸದ ಮುನಿಸ್ವಾಮಿ    

ಕೋಲಾರ: ‘ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೀಡಿದ ಯೋಜನೆ ಬಿಟ್ಟು ಸುಳ್ಳು ಗ್ಯಾರಂಟಿ ಕಾರ್ಡ್‌ ನಂಬಿ ಮತ ಹಾಕಿರುವ ಜನರಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನವರ ಆಟ ಗೊತ್ತಾಗಲಿದೆ’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‍ಗೆ ಮತ ನೀಡುವಾಗ ಪ್ರಧಾನಿ ನರೇಂದ್ರ ಮೋದಿ ಉಚಿತವಾಗಿ ನೀಡಿದ ಕೊರೊನಾ ಲಸಿಕೆ, ಆಯುಷ್ಮಾನ್ ಆರೋಗ್ಯ ಕಾರ್ಡ್, ಕಿಸಾನ್ ಸಮ್ಮಾನ್ ಯೋಜನೆ‌, ಜಲ ಜೀವನ್ ಮಿಷನ್ ಯೋಜನೆ‌ ಜನರಿಗೆ ನೆನಪಿಗೆ ಬರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಗ್ಯಾರಂಟಿಗಳಿಗೆ ₹ 50 ಸಾವಿರ ಕೋಟಿ ಆಗುತ್ತದೆ,‌ ದಾರಿಯಲ್ಲಿ ಹೋಗೋರಿಗೆಲ್ಲಾ ಕೊಡಲು ಸಾಧ್ಯವಿಲ್ಲವೆಂದು ಮೊದಲ ದಿನವೇ ಹೇಳಿದ್ದಾರೆ. ಈ ಮಾತನ್ನು ಮೇ 10ರ ಮೊದಲೇ ಹೇಳಿದ್ದರೆ ಸುಮಾರು 40 ರಿಂದ 50 ಕ್ಷೇತ್ರಗಳಲ್ಲಿ ಸೋಲುತ್ತಿದ್ದರು. ಗ್ಯಾರಂಟಿ ಪೂರ್ಣವಾಗಿ ಜಾರಿ ಅಸಾಧ್ಯ. ಜಾರಿಗೊಳಿಸಿದರೂ ಕರ್ನಾಟಕದಲ್ಲಿ ಹುಟ್ಟುವ ಮಗುವಿನ ಮೇಲೆಯೂ ಸಾಲದ ಹೊರೆ ಹಾಕಲಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‌‘ಕೋಲಾರ ಕ್ಷೇತ್ರದಲ್ಲಿ ಹಣ ಬಲ, ತೋಳ್ಬಲದ ನಡುವೆಯೂ ವರ್ತೂರು ಪ್ರಕಾಶ್‍ ಅವರಿಗೆ 50 ಸಾವಿರ ಮತಗಳು ಬಂದಿವೆ. 4 ತಲೆಮಾರಿಗೆ ಆಗುವಷ್ಟು ಹಣ ಮಾಡಿಕೊಂಡಿರುವುದಾಗಿ ಕಾಂಗ್ರೆಸ್ಸಿನವರು ಈಗಾಗಲೇ ಹೇಳಿದ್ದು, ಆ ಹಣವನ್ನು ಸುರಿದು ಚುನಾವಣೆ ಮಾಡಿದ್ದಾರೆ’ ಎಂದು ದೂರಿದರು.

‘‌ಬಂಗಾರಪೇಟೆಯಲ್ಲಿ ಗೆದ್ದಿರುವ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಸಂಬಂಧಿಸಿದಂತೆ ಮನೆ, ಕಾರಿನಲ್ಲಿ ಹಣ ಸಿಕ್ಕಿದ್ದು, ಚಿಹ್ನೆ, ಲೇಬಲ್, ಊರಿನ ಹೆಸರು ಬರೆದಿದ್ದ ಮಾಹಿತಿ ಲಭ್ಯವಾಗಿದೆ. ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದ್ದು, ಅವರೂ ಅನರ್ಹರಾಗುತ್ತಾರೆ. ಮಾಲೂರಿನ ನಂಜೇಗೌಡರು ಕಳೆದ ಬಾರಿಗಿಂತ ಈ ಸಲ ಕಡಿಮೆ ಮತ ತೆಗೆದುಕೊಂಡಿದ್ದಾರೆ. ಅವರ ಮೇಲಿರುವ ಪ್ರಕರಣಗಳು ಸಾಬೀತಾದರೆ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.