ADVERTISEMENT

ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ: ಸಚಿವ ಡಾ.ಎಂ.ಸಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 8:00 IST
Last Updated 30 ಅಕ್ಟೋಬರ್ 2025, 8:00 IST
<div class="paragraphs"><p>ಡಾ.ಎಂ.ಸಿ.‌ ಸುಧಾಕರ್</p></div>

ಡಾ.ಎಂ.ಸಿ.‌ ಸುಧಾಕರ್

   

ಕೋಲಾರ: ನವೆಂಬರ್ ತಿಂಗಳಲ್ಲಿ ಕ್ರಾಂತಿಯೋ, ಬ್ರಾಂತಿಯೋ ನನಗೆ ಗೊತ್ತಿಲ್ಲ. ಇವೆಲ್ಲಾ ಮಾದ್ಯಮ ಮತ್ತು ಕೆಲವರ ಸೃಷ್ಟಿ. ಪಕ್ಷದಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಪರಮೋಚ್ಛ ಎಂಬುದನ್ನು ಅರಿತುಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನನಗೆ ಸೂಚಿಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದರು.

ADVERTISEMENT

ಸರ್ಕಾರದಲ್ಲಿ ಏನೇ ತೀರ್ಮಾನವಾಗಬೇಕಾದರೂ ಮುಖ್ಯಮಂತ್ರಿಗೆ ಪರಮೋಚ್ಛ ಅಧಿಕಾರ ಇದೆ. ಜತೆಗೆ ಮುಖ್ಯಮಂತ್ರಿಗೆ ಪಕ್ಷದ ಹೈಕಮಾಂಡ್ ಸೂಚನೆ ನೀಡುತ್ತದೆ. ಇದಕ್ಕೆಲ್ಲ ನಾವು ಬದ್ಧವಾಗಿರುತ್ತೇವೆ ಎಂದು ಹೇಳಿದರು.

136 ಶಾಸಕರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಾದವರಿಗೆ ಮಂತ್ರಿಯಾಗಬೇಕು ಎಂಬ ಬಯಕೆ ಇರುತ್ತದೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳು ಎಂದು ನುಡಿದರು.

ಪಕ್ಷ ನಮ್ಮನ್ನು ಗುರುತಿಸಿ ಅವಕಾಶ ಮಾಡಿಕೊಟ್ಟಿದೆ. ಆಡಳಿತಾತ್ಮಕವಾಗಿ ಹಾಗೂ ಪಕ್ಷದ ದೃಷ್ಟಿಯಿಂದ ಹೈಕಮಾಂಡ್ ಬದಲಾವಣೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ಶಿಸ್ತಿಗೆ ಬದ್ಧರಾಗಿ ನಾವು ಸಹ ಸ್ಪಂದಿಸುತ್ತೇವೆ ಎಂದು ತಿಳಿಸಿದರು.  

ಸಿದ್ದರಾಮಯ್ಯ ಅವರು 2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿ,‌ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುವ ಅಧಿಕಾರ ನಮಗಿಲ್ಲ. ಇದೆಲ್ಲ ಅವರ ವೈಯಕ್ತಿಕ ಹಾಗೂ ಪಕ್ಷದ ತೀರ್ಮಾನದ ಒಂದು ಭಾಗವಾಗಿರುತ್ತದೆ ಎಂದರು.

ಅನುದಾನದ ತಾರತಮ್ಯ ವಿಚಾರಕ್ಕಾಗಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ, 'ವೆಂಕಟಶಿವಾರೆಡ್ಡಿ ಹಿರಿಯ ಶಾಸಕರು. ಅವರು ಸಹ ಆಡಳಿತ ಮತ್ತು ವಿರೋಧ ಪಕ್ಷದಲ್ಲಿ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಅನುದಾನಕ್ಕಾಗಿ ಎಸ್ಟೆಲ್ಲಾ ಕಷ್ಟ ಅನುಭವಿಸಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಅನುದಾನದ ತಾರತಮ್ಯದ ಧೋರಣೆ ಕೇಂದ್ರ ಸರ್ಕಾರದಲ್ಲೂ ಇವೆ. ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ. ಇದು ನಿನ್ನೆ ಮೊನ್ನೆಯ ವಿಚಾರವಲ್ಲ. ಹಿಂದೆ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ.  ಕಾಂಗ್ರೆಸ್ ಶಾಸಕರಾಗಿದ್ದಾಗ ಶಕ್ತಿ ಮೀರಿ ಅನುದಾನ ತಂದು ಕೆಲಸ ಮಾಡಿಸಿದ್ದೇವೆ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ ಸಂಸ್ಥೆಗಳು ಕಾರ್ಯಕ್ರಮ ಮಾಡಬಾರದೆಂದು ಎಂದು ಆದೇಶ ಮಾಡಲಾಗಿದೆ. ಈ ಆದೇಶವನ್ನು 2013ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಆದೇಶ ಹೊರಡಿಸಿದ್ದರು. ಇದನ್ನು ಪಾಲನೆ ಮಾಡಲು ಸೂಚಿಸಿದ್ದೇವೆಯೇ ಹೊರತು ಯಾವುದೇ ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ ಎಂದು ತಿಳಿಸಿದರು.

ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಪರಸ್ಪರ ನಿಂದನೆ‌ ಮಾಡುತ್ತಿರುವ ಕುರಿತು ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ಇರುವವರು ಭಾಷೆ ಬಳಕೆ ಮಾಡುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಯಾರಿಗೂ ನಾವು ಬುದ್ಧಿವಾದ ಹೇಳುವವರಲ್ಲ. ಅವರೇ ಪ್ರಬುದ್ಧರಿದ್ದು ಅರ್ಥ ಮಾಡಿಕೊಳ್ಳಬೇಕು. ಇತಿಮಿತಿ ಯೊಳಗೆ ಮಾತನಾಡಿದರೆ ಗೌರವ ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.