ADVERTISEMENT

ಪಟ್ಟಭದ್ರ ಹಿತಾಸಕ್ತಿಗಳಿಂದ ಕೃಷ್ಣಬೈರೇಗೌಡರ ವಿರುದ್ಧ ಹುನ್ನಾರ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:49 IST
Last Updated 25 ಡಿಸೆಂಬರ್ 2025, 7:49 IST
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಸೈಯದ್‌ ಅಪ್ಸರ್‌, ಅಬ್ದುಲ್‌ ಕಯ್ಯಾಮ್, ಚಂದ್ರಮೌಳಿ ಭಾಗವಹಿಸಿದ್ದರು
ಕೋಲಾರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಮೈಲಾಂಡಹಳ್ಳಿ ಮುರಳಿ, ಸೈಯದ್‌ ಅಪ್ಸರ್‌, ಅಬ್ದುಲ್‌ ಕಯ್ಯಾಮ್, ಚಂದ್ರಮೌಳಿ ಭಾಗವಹಿಸಿದ್ದರು   

ಕೋಲಾರ: ಕಂದಾಯ ಸಚಿವ ಕೃಷ್ಣಬೈರೇಗೌಡರ ಮೇಲೆ‌ ಸುಳ್ಳು ಆರೋಪ‌ ಮಾಡಿ ಅವರ ವ್ಯಕ್ತಿತ್ವಕ್ಕೆ ಕಪ್ಪ ಚುಕ್ಕೆ ತರುವ ಕೆಲಸವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡರು, ‘ಸಚಿವರು ಆ ಪ್ರದೇಶದಲ್ಲಿ ಒಂದೇ ಒಂದು ಇಂಚು ಜಾಗ ಕೂಡ ಒತ್ತುವರಿ ಮಾಡಿಕೊಂಡಿಲ್ಲ, ಭ್ರಷ್ಟಾಚಾರ ಎಸಗಿಲ್ಲ. ಅವರು ರಾಜಕರಾಣಕ್ಕೆ ಹಣ, ಆಸ್ತಿ ಮಾಡಲು ಬಂದವರಲ್ಲ’ ಎಂದು ಸಮರ್ಥಿಸಿಕೊಂಡರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನರಸಾಪುರ ಹೋಬಳಿಯ ಗರುಡನಪಾಳ್ಯದಲ್ಲಿರುವ ಸರ್ವೆ ನಂಬರ್‌ 46 ಹಾಗೂ 47ರಲ್ಲಿನ ಜಮೀನು ತಮ್ಮ ಪೂರ್ವಜರಿಂದ ಬಂದಿರುವಂಥದ್ದು, ಅದಕ್ಕೆ ದಾಖಲೆಗಳಿವೆ ಎಂದು ಈಗಾಗಲೇ ಕೃಷ್ಣಬೈರೇಗೌಡರು ಸ್ಪಷ್ಟನೆ ನೀಡಿದ್ದಾರೆ. ಆದರೂ ವಿರೋಧ ಪಕ್ಷದವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು ಮಾತನಾಡಿ, ‘ಕೃಷ್ಣಬೈರೇಗೌಡರ ಊರಿನ ಜೊತೆ ನಮಗೆ ದಶಕಗಳ ಸಂಬಂಧವಿದೆ. ಅವರ ತಾತ ಚೌಡೇಗೌಡರ ಕಾಲದಿಂದ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಹಾಗೆಯೇ‌ ಇವೆ. ಆ ಜಮೀನನ್ನು ಮೂರು ಭಾಗ ಮಾಡಿದ ‌ಮೇಲೆ ಪಾಳುಬಿದ್ದಿತ್ತು. ನಂತರ ಸಿ.ಬೈರೇಗೌಡರು ತೋಟ‌ ಮಾಡಿ ಅಭಿವೃದ್ಧಿಪಡಿಸಿದರು. ಅಲ್ಲಿ ಎರಡು ಕೆರೆ ಇವೆ‌. ಅವುಗಳನ್ನು ಕೃಷ್ಣಬೈರೇಗೌಡರು ಹೂಳು ತೆಗೆಸಿ ಅಭಿವೃದ್ಧಿಗೊಳಿಸಿದ್ದಾರೆ’ ಎಂದರು.

ADVERTISEMENT

ಸುಮಾರು 256 ಎಕರೆ ಜಾಗವಿದ್ದು, ಅವರು ಒತ್ತುವರಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಬೈರೇಗೌಡ ರೀತಿ ಕೃಷ್ಣಬೈರೇಗೌಡ ಕೂಡ ದಕ್ಷ ಆಡಳಿತಗಾರ. ಕಂದಾಯ ಇಲಾಖೆಯನ್ನು ಸುಧಾರಣೆ ಮಾಡಿದ್ದಾರೆ. ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಏಳಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ಸೇರಿ ಆರೋಪ ‌ಮಾಡುತ್ತಿವೆ. ಸಚಿವರ ಏಳಿಗೆಗೆ ಯಾರೂ ಅಡ್ಡಹಾಕಲು ಆಗಲ್ಲ. ಆರೋಪ‌ಗಳು ಎಲ್ಲವೂ ಸುಳ್ಳು. ಅವರ ವಿರುದ್ಧ ಷಡ್ಯಂತ್ರದಲ್ಲಿ ಕೆಲವು ಕಾಂಗ್ರೆಸ್‌ನವರೂ ಇರಬಹುದು. ಮುಂದೆ‌ ಸತ್ಯ ಹೊರ ಬರಲಿದೆ ಎಂದು ಹೇಳಿದರು.

ಕಾಂಗ್ರೆಸ್ ಎಸ್‌ಸಿ ಘಟಕದ ರಾಜ್ಯ ಕಾರ್ಯದರ್ಶಿ ಬೆಳಗಾನಹಳ್ಳಿ ಮುನಿವೆಂಕಟಪ್ಪ ‌ಮಾತನಾಡಿ, ‘ಸಚಿವ ಕೃಷ್ಣಬೈರೇಗೌಡರ ವರ್ಚಸ್ಸನ್ನು ಸಹಿಸದ ಕೆಲವರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಹುನ್ನಾರ ಎಂಬುದು ಸ್ಪಷ್ಟ. ಅವರಿಗೆ ನಮ್ಮ ಬೆಂಬಲವಿದೆ’ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಮಾತನಾಡಿ, ‘ರಾಜ್ಯದಾದ್ಯಂತ ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ಮಾಡಿ ಸುಧಾರಣೆ ‌ಮಾಡಿದ್ದಾರೆ. ಈ ಜಮೀನು ಪಿತ್ರಾರ್ಜಿತ ಆಸ್ತಿ ಎಂದು ಕೃಷ್ಣಬೈರೇಗೌಡರು ಸ್ಪಷ್ಟನೆ ನೀಡಿದ್ದರೂ ವಿರೋಧ ಪಕ್ಷದವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಒಂದೇ ಒಂದು ಇಂಚು ಜಾಗ ಕೂಡ ದುರುಪಯೋಗ ಮಾಡಿಕೊಂಡಿಲ್ಲ’ ಎಂದರು.

ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ‘ಒಂದು ವರ್ಷದ ಕೈಬರಹದಲ್ಲಿ ನ್ಯೂನತೆ ಉಂಟಾದ ಕಾರಣ ಈ ಗೊಂದಲ ನಿರ್ಮಾಣವಾಗಿದೆ. ಕೈಬರಹದಲ್ಲಿರುವ 1971–72ರ ಪಹಣಿಯಲ್ಲಿ ಖಾರಬ್‌, ಕೆರೆ ಎಂದಿದೆ. ಏಕೆಂದರೆ ಸರ್ವೆ ನಂಬರ್‌ 48 ಆಗ 46 ಎಂದು ನಮೂದಾಗಿತ್ತು. 48ರಲ್ಲಿ ಕೆರೆ ಇದ್ದ ಕಾರಣ ಗೊಂದಲ ಉಂಟಾಗಿತ್ತು. ನಂತರದ ವರ್ಷಗಳ ಪಹಣಿಯಲ್ಲಿ ಸರಿ ಹೋಗಿದೆ. ಸರ್ವೆ ನಂಬರ್‌ 46ರಲ್ಲಿ ಯಾವುದೇ ಕೆರೆ ಇಲ್ಲ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್, ಗ್ರಾಮಾಂತರ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಎಸ್‌ಟಿ ಘಟಕದ ಜಿಲ್ಲಾ ಅಧ್ಯಕ್ಷ ಎನ್.ಅಂಬರೀಷ್, ಮುಖಂಡರಾದ ಅಬ್ದುಲ್‌ ಕಯ್ಯಾಮ್, ಶ್ರೀರಾಮ್, ಖಾದ್ರಿಪುರ ಬಾಬು ಇದ್ದರು.

ಕೃಷ್ಣಬೈರೇಗೌಡರಿಗೆ ಕೆಟ್ಟ ಹೆಸರು ತರಲು ಪ್ರತಿಪಕ್ಷಗಳು ಸೇರಿದಂತೆ ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ. ಷಡ್ಯಂತ್ರದಲ್ಲಿ ಕಾಂಗ್ರೆಸ್‌ನವರೂ ಇರಬಹುದು. ಮುಂದೆ‌ ಸತ್ಯ ಹೊರ ಬರಲಿದೆ ಖಾಜಿಕಲ್ಲಹಳ್ಳಿ
ಮುನಿರಾಜು ಡಿಸಿಸಿ ಬ್ಯಾಂಕ್ ನಿರ್ದೇಶಕ

‘ಛಲವಾದಿ ಅಲ್ಲ; ಮನುವಾದಿ’

‘ಕೃಷ್ಣಬೈರೇಗೌಡರ ವಿರುದ್ಧ ಆರೋಪ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಮೂಲಕ ಹಲವಾರು ರೀತಿ ಲಾಭ ಪಡೆದು ನಂತರ ಅಧಿಕಾರದ ಆಸೆಗಾಗಿ ಬಿಜೆಪಿ‌ ಸೇರಿದರು. ಈಗ ಕೀಳುಮಟ್ಟದ ರಾಜಕಾರಣ‌ ಮಾಡುತ್ತಿದ್ದಾರೆ‌. ಅವರು ಛಲವಾದಿ‌ ಅಲ್ಲ; ಮನುವಾದಿ‌ ನಾರಾಯಣಸ್ವಾಮಿ. ಬಿಜೆಪಿಯ ಕೊಳೆತ ನಿಕ್ಕರ್‌ ತಲೆ ಮೇಲೆ ಇಟ್ಟುಕೊಂಡು ಬಂದಾಗಲೇ ಅವರು ಮನುವಾದ ಅಪ್ಪಿಕೊಂಡರು. ಅವರು ಖರ್ಗೆ‌ ಕಾಲಿನ ದೂಳಿಗೂ ಸಮ ಇಲ್ಲ’ ಎಂದು ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಟೀಕಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಇತರರು ತಹಶೀಲ್ದಾರ್ ಕಚೇರಿ ಮುಂದೆ ಕಾವಲು ಕಾಯುವುದಾಗಿ ಹೇಳಿ ನೀಚ ರಾಜಕಾರಣ‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಾಖಲೆ ಕೊಡುತ್ತೇವೆ

ಕಾಯಿರಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲು ಬಂದ ಕಾಂಗ್ರೆಸ್‌ ಮುಖಂಡರಿಗೆ ತಮ್ಮ ಮಾತಿಗೆ ಸಮರ್ಥನೆಯಾಗಿ ದಾಖಲೆ ಕೇಳಲಾಯಿತು. ಅದಕ್ಕೆ ಅವರು ‘ದಾಖಲೆ ತಮ್ಮ ಬಳಿ ಇದ್ದು ಇಂದು ತಂದಿಲ್ಲ. ಖಂಡಿ ಕೊಡುತ್ತೇವೆ ಕಾಯಿರಿ. ಮುಂದೆ ದಾಖಲೆ ಸಮೇತ ಬಂದು ಮಾತನಾಡುತ್ತೇವೆ’ ಎಂದು ಕೋಲಾರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಹಾಗೂ ಇತರರ ಮುಖಂಡರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.