ಕೋಲಾರ: ಡಿಸಿಸಿ ಬ್ಯಾಂಕ್, ಕೋಮುಲ್ ಚುನಾವಣೆ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಆಯ್ಕೆಗೆ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂವರು ವೀಕ್ಷಕರನ್ನು ನೇಮಿಸಿದ್ದಾರೆ.
ಮಾಜಿ ಸಚಿವೆ ರಾಣಿ ಸತೀಶ್, ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಹಾಗೂ ಮಾಜಿ ಶಾಸಕ ವೆಂಕಟರವಣಪ್ಪ ಇದೇ ಶನಿವಾರ, ಭಾನುವಾರ (ಜುಲೈ 12 ಹಾಗೂ 13) ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಶಾಸಕರು, ಮಾಜಿ ಶಾಸಕರು, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಗಳು, ಜಿಲ್ಲೆಯ ಹಿರಿಯ ನಾಯಕರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಲಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ಎರಡೂವರೆ ವರ್ಷ ಪೂರೈಸಿದ್ದು, ಮತ್ತೊಮ್ಮೆ ಆ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ನಸೀರ್ ಅಹ್ಮದ್ ಹಾಗೂ ಕೆ.ಆರ್.ರಮೇಶ್ ಕುಮಾರ್ ಬೆಂಬಲದಿಂದಲೇ ಹಿಂದೆ ಅವರ ನೇಮಕ ನಡೆದಿತ್ತು. ಆಗ ಅವರ ಆಯ್ಕೆಗೆ ಕೆ.ಎಚ್.ಮುನಿಯಪ್ಪ ಬಣದಿಂದ ವಿರೋಧವೂ ವ್ಯಕ್ತವಾಗಿತ್ತು. ಈ ಬಣದವರು ಶೇಷಾಪುರ ಗೋಪಾಲಕೃಷ್ಣ ಹೆಸರು ಸೂಚಿಸಿತ್ತು. ಆದರೆ, ಜಿಲ್ಲೆಯಲ್ಲಿ ಬದಲಾದ ರಾಜಕಾರಣದಲ್ಲಿ ಲಕ್ಷ್ಮಿನಾರಾಯಣ ಹೆಚ್ಚಾಗಿ ಮುನಿಯಪ್ಪ ಬಣದವರ ಜೊತೆ ಗುರುತಿಸಿಕೊಂಡರು. ಹೀಗಾಗಿ, ಅವರ ಪುನರ್ ನೇಮಕಕ್ಕೆ ಕೆ.ಆರ್.ರಮೇಶ್ ಕುಮಾರ್ ನೇತೃತ್ವದ ಘಟಬಂಧನ್ ಅಡ್ಡಿಯಾಗುವ ಸಾಧ್ಯತೆ ಇದೆ.
ಈಚೆಗಷ್ಟೇ ‘ಏಳೆಂಟು ಜನರ ಗ್ಯಾಂಗ್’ ಎಂದು ಶಾಸಕ ಕೊತ್ತೂರು ಮಂಜುನಾಥ್ ಟೀಕಿಸಿದ್ದಾರೆ. ಅಲ್ಲದೇ, ಮುನಿಯಪ್ಪ ಬಣದ ಯಾವುದೇ ಕಾರ್ಯಕ್ರಮದಲ್ಲಾಗಲಿ, ಪ್ರತಿಭಟನೆಯಲ್ಲಾಗಲಿ, ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳು, ನಾಯಕರ ಜನ್ಮ ದಿನಾಚರಣೆ ಕಾರ್ಯಕ್ರಮಗಳಲ್ಲಿ ಕೊತ್ತೂರು ಮಂಜುನಾಥ್, ಕೆ.ವೈ.ನಂಜೇಗೌಡ, ಎಂ.ಎಲ್.ಅನಿಲ್ ಕುಮಾರ್ ಹಾಗೂ ಅವರ ಬೆಂಬಲಿಗರಾಗಲಿ ಪಾಲ್ಗೊಳ್ಳುತ್ತಿಲ್ಲ.
ಅಷ್ಟೇ ಅಲ್ಲ; ನಂದಿನಿ ಪ್ಯಾಲೇಸ್‌ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಲಕ್ಷ್ಮಿನಾರಾಯಣ ಹಾಗೂ ಪ್ರಸಾದ್ ಬಾಬು ಅವರ ಮೇಲೆ ಹಲ್ಲೆಗೆ ಪ್ರಯತ್ನ ನಡೆದಿತ್ತು. ಮತ್ತೊಮ್ಮೆ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಅವರ ಡಿಚ್ಚಿ ಪ್ರಕರಣ ದೊಡ್ಡ ಸದ್ದು ಮಾಡಿತ್ತು. ಹೀಗೆ, ಹಲವಾರು ಕಾರ್ಯಕ್ರಮಗಳಲ್ಲಿ ಬಣಗಳ ಸಂಘರ್ಷ ನಡೆದೇ ಇದೆ.
ಹೊಸ ಅಧ್ಯಕ್ಷರ ಆಯ್ಕೆಯಲ್ಲೂ ಬಣಗಳ ಸಂಘರ್ಷ ನಡೆಯುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಎರಡೂ ಬಣದವರು ತಮ್ಮ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ವೀಕ್ಷಕರಲ್ಲಿ ಕೋರಲಿದ್ದಾರೆ. ಹೀಗಾಗಿ, ಯಾವುದೇ ಬಣದವರನ್ನು ಅಧ್ಯಕ್ಷರನ್ನಾಗಿ ಮಾಡಿದರೂ ಬಣ ಕಿತ್ತಾಟ ಮುಂದುವರಿಯಲಿದೆ.
ಈ ಅರಿವು ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ಇದೇ ಕಾರಣಕ್ಕೆ ಕೋಲಾರದ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುವಂತೆ ವೀಕ್ಷಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಬಿಜೆಪಿಯಿಂದ ವಾಪಸ್ ಕಾಂಗ್ರೆಸ್‌ಗೆ ಬಂದಿರುವ ಚಂದ್ರಾರೆಡ್ಡಿ ಪರ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲಿದ್ದಾಗ ಚಂದ್ರಾರೆಡ್ಡಿ ಅಧ್ಯಕ್ಷರಾಗಿದ್ದರು. ಪಕ್ಷಕ್ಕೆ ಸೇರುವಾಗ ಡಿ.ಕೆ.ಶಿವಕುಮಾರ್ ಜೊತೆ ಈ ಸಂಬಂಧ ಚರ್ಚೆ ಕೂಡ ನಡೆದಿತ್ತು ಎನ್ನಲಾಗಿದೆ. ಕೆ.ಎಚ್.ಮುನಿಯಪ್ಪ ಕೂಡ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಆದರೆ, ಒಮ್ಮೆ ಪಕ್ಷ ಬಿಟ್ಟು ಹೋಗಿದ್ದ ಅವರ ಆಯ್ಕೆಗೆ ಘಟಬಂಧನ್ ಬಲವಾಗಿ ವಿರೋಧಿಸುವ ಸಂಭವವಿದೆ. ಘಟಬಂಧನ್ ಕೂಡ ತಮ್ಮ ಬೆಂಬಲಿಗ ಮೂವರು ಹೆಸರನ್ನು ಸೂಚಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಪೈಕಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹೆಸರೂ ಪ್ರಸ್ತಾಪದಲ್ಲಿದೆ ಎನ್ನಲಾಗಿದೆ. ಅವರು ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹಿಂದೆ ಅರ್ಧಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒಪ್ಪಿದರೆ ಅವರನ್ನೂ ಪರಿಗಣಿಸುವ ಸಾಧ್ಯತೆ ಇದೆ ಎಂಬುದು ಗೊತ್ತಾಗಿದೆ.
ಜಾತಿ ವಿಚಾರ, ಸಂಘಟನೆ ಚುತುರತೆ, ಪಕ್ಷ ನಿಷ್ಠೆ, ವರ್ಚಸ್ಸು, ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವವನ್ನೂ ಆಯ್ಕೆಗೆ ಪರಿಗಣಿಸಲಾಗುತ್ತದೆ. ಕೊನೆಯಲ್ಲಿ ಬಹುಸಂಖ್ಯೆಯ ಪದಾಧಿಕಾರಿಗಳು, ಪಕ್ಷದ ನಾಯಕರ ಅಭಿಪ್ರಾಯವು ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖವಾಗಿ ಗಣನೆಗೆ ಬರಲಿದೆ.
ಘಟಬಂಧನ್ ಒಲವು ಯಾರ ಕಡೆ, ಕೆ.ಎಚ್.ಮುನಿಯಪ್ಪ ಬಣದ ಬೆಂಬಲ ಯಾರಿಗೆ? ರಾಣಿ ಸತೀಶ್, ನಾಗರಾಜ್ ಯಾದವ್, ವೆಂಕಟರವಣಪ್ಪ ವೀಕ್ಷಕರು ಹೊಸಬರು ಬರುತ್ತಾರಾ? ಲಕ್ಷ್ಮಿನಾರಾಯಣ ಉಳಿಯುತ್ತಾರಾ?
ನಾನೂ ಆಕಾಂಕ್ಷಿ: ಲಕ್ಷ್ಮಿನಾರಾಯಣ
‘ನಾನು ಅಧ್ಯಕ್ಷನಾದ ಮೇಲೆ ಜಿಲ್ಲೆಯಲ್ಲಿ ನಾಲ್ವರು ಶಾಸಕರು ಒಬ್ಬ ವಿಧಾನ ಪರಿಷತ್ ಸದಸ್ಯ ಗೆದ್ದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಯಶಸ್ಸು ದೊರೆತಿದೆ. ರಾಹುಲ್ ಗಾಂಧಿ ಅವರ ಎರಡು ಸಮಾವೇಶಗಳನ್ನು (ಕೋಲಾರ ಹಾಗೂ ಮಾಲೂರು) ಯಶಸ್ವಿಯಾಗಿ ನಡೆಸಿಕೊಟ್ಟಿದ್ದೇನೆ. ಕೆಪಿಸಿಸಿ ಎಐಸಿಸಿ ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನನ್ನು ಬದಲಾಯಿಸಲು ಕಾರಣಗಳೇ ಇಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಹಾಲಿ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಾನು ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಜೊತೆ ಚರ್ಚಿಸಿದ್ದೇನೆ. ಅವರು ಮುಂದುವರಿಕೆಗೆ ಬೆಂಬಲ ಸೂಚಿಸಿದ್ದಾರೆ. ಕೆ.ಎಚ್.ಮುನಿಯಪ್ಪ ಅವರನ್ನೂ ಭೇಟಿಯಾಗಿದ್ದೇನೆ’ ಎಂದರು. ‘ಅತಿ ಸೂಕ್ಷ್ಮ ಹಿಂದುಳಿದ ವರ್ಗದ ನಾನು ಯಾರ ಬಣವೂ ಅಲ್ಲ; ಬದಲಾಗಿ ಕಾಂಗ್ರೆಸ್ ಬಣ. ಪಕ್ಷ ಪರ ನಿರ್ಧಾರಗಳು ಕೆಲವರಿಗೆ ಕಹಿ ಆಗಿರಬಹುದು. ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇದೆ. ಹೀಗಾಗಿ ಮತ್ತೆ ನಾನು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ’ ಎಂದು ಹೇಳಿದರು.
ಜುಲೈ 12ಕ್ಕೆ ಜಿಲ್ಲೆಗೆ ವೀಕ್ಷಕರು
ಕೋಲಾರ ಜಿಲ್ಲಾ ವೀಕ್ಷಕರಾಗಿ ನೇಮಕವಾಗಿರುವ ರಾಣಿ ಸತೀಶ್ ನಾಗರಾಜ ಯಾದವ್ ಹಾಗೂ ಕೆಪಿಸಿಸಿ ಕೋಲಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವೆಂಕಟರವಣಪ್ಪ ಇದೇ ಜುಲೈ 12 ಹಾಗೂ 13ರಂದು ಜಿಲ್ಲೆಗೆ ಭೇಟಿ ನೀಡಿ ಮುಖಂಡರ ಅಭಿಪ್ರಾಯ ಕಲೆಹಾಕಲಿದ್ದಾರೆ. ಮೊದಲ ದಿನ ಮೂರು ವಿಧಾನಸಭಾ ಕ್ಷೇತ್ರ ಎರಡನೇ ದಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ‘ಈಗಿನ ಅಧ್ಯಕ್ಷರು ಮುಂದುವರಿಬೇಕೇ ಬೇಡವೇ? ಹೊಸದಾಗಿ ಯಾರಾಗಬೇಕು? ಯಾರು ಯಾರು ಸಮರ್ಥರಿದ್ದಾರೆ?’ ಎಂಬ ಮಾಹಿತಿ ಸಂಗ್ರಹಿಸಲಿದ್ದಾರೆ.
ಮುಚ್ಚಿದ ಲಕೋಟೆಯಲ್ಲಿ ಶಿಫಾರಸು
ವೀಕ್ಷಕರು ಶಿಫಾರಸು ಮಾಡುವ ವ್ಯಕ್ತಿಯು ಜಿಲ್ಲಾ ಮಟ್ಟದಲ್ಲಿ ಸಕ್ರಿಯವಾಗಿ ಪಕ್ಷದಲ್ಲಿ ಗುರುತಿಸಿಕೊಂಡಿರಬೇಕು. ಸಂಘಟನಾ ಸಾಮರ್ಥ್ಯ ಪಕ್ಷದಲ್ಲಿ ಹಿರಿತನ ಪ್ರಾಮಾಣಿಕತೆ ಪಕ್ಷ ನಿಷ್ಠೆ ಮಾನದಂಡವಾಗಿ ಪರಿಗಣಿಸಬೇಕು. ಅಂತಹ ಮೂರು ಹೆಸರನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವೀಕ್ಷಕರಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.