ADVERTISEMENT

ಅಧಿಕಾರ ಹಂಚಿಕೆ ವಿಚಾರವಾಗಿ ಯತೀಂದ್ರ ಮಾತನಾಡಬಾರದು: ಶಾಸಕ ನಂಜೇಗೌಡ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 14:15 IST
Last Updated 13 ಡಿಸೆಂಬರ್ 2025, 14:15 IST
<div class="paragraphs"><p>ಶಾಸಕ ನಂಜೇಗೌಡ</p></div>

ಶಾಸಕ ನಂಜೇಗೌಡ

   

ಇನ್ನುಳಿದ ಅವಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ನಂಜೇಗೌಡ ಆಗ್ರಹ

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರದ ಇನ್ನುಳಿದ ಅವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

ADVERTISEMENT

ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನೇ ಈ ವಿಚಾರ ಪ್ರಸ್ತಾಪಿಸಿದೆ. ಅದು ಹೇಗೆ ಹೊರಗಡೆ ಬಂತು ಎಂಬುದು ನನಗೆ ಗೊತ್ತಿಲ್ಲ. ಆದರೆ, ಹೆಚ್ಚಿನ ಶಾಸಕರು ಮುಂದಿನ ಎರಡೂವರೆ ವರ್ಷಗಳಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ವಿಚಾರಗಳಿಗೆ ಆದ್ಯತೆ ನೀಡಬೇಕೆಂಬ ನನ್ನ ಮಾತಿಗೆ ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದರು’ ಎಂದರು.

ಎರಡೂವರೆ ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸಿರುವುದಕ್ಕೆ ನಾವು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದೇವೆ. ಯಾವುದೇ ಕಾರಣಕ್ಕೂ ನಾನು ಟೀಕೆ ಮಾಡಿಲ್ಲ ಎಂದು ಹೇಳಿದರು.

ನಮ್ಮ ಗುರಿ 2028ರಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ಉದ್ದೇಶದಿಂದ ಮತ್ತಷ್ಟು ಅಭಿವೃದ್ಧಿ ಅಗತ್ಯವಿದೆ ಎಂದು ತಿಳಿಸಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಬಾರದು. ಅವರು ಮುಖ್ಯಮಂತ್ರಿ ಪುತ್ರ, ಅರಾಮವಾಗಿರಬೇಕು. ಸಿದ್ದರಾಮಯ್ಯ ಪರ ತುಂಬಾ ಶಾಸಕರು ಇದ್ದಾರೆ. ಅವರು ರಾಜ್ಯದ ನಾಯಕ, ಅವಕಾಶ ಸಿಕ್ಕಿದರೆ ರಾಷ್ಟ್ರೀಯ ನಾಯಕರೂ ಆಗಬಹುದು ಎಂದು ತಿಳಿಸಿದರು.

ಈ ವಿಚಾರದಲ್ಲಿ ಶಾಸಕರು ಮಾತನಾಡಬಾರದೆಂದು ನಮಗೆ ಹೈಕಮಾಂಡ್‌ ಸೂಚನೆ ಕೂಡ ನೀಡಿದೆ. ಯಾರು ಮುಖ್ಯಮಂತ್ರಿ ಆಗಬೇಕೆಂದು ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೆ ನಾವೆಲ್ಲಾ ಬದ್ಧ ಎಂದರು.

ಡಿನ್ನರ್‌ ಪಾರ್ಟಿಗೆ ನಾನೂ ಹೋಗಿದ್ದೆ: ಬೆಳಗಾವಿಯ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷರು ಹಮ್ಮಿಕೊಂಡಿದ್ದ ಡಿನ್ನರ್‌ ಪಾರ್ಟಿಗೆ ನಾನೂ ಹೋಗಿದ್ದೆ. ಅದು ಡಿ.ಕೆ.ಶಿವಕುಮಾರ್‌ ಆಯೋಜಿಸಿದ ಪಾರ್ಟಿ ಅಲ್ಲ. ಆದರೆ, ರಾಜಕೀಯ ವಿಷಯ ಚರ್ಚೆ ಆಗಿಲ್ಲ. ಊಟ ಮಾಡಿ ಬಂದೆವು ಎಂದು ನಂಜೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.