ADVERTISEMENT

ಕೋಮುಲ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತರ ಕಮಾಲ್‌!: 9 ನಿರ್ದೇಶಕರ ಸ್ಥಾನ ‘ಕೈ’ ವಶ

ಕೆ.ಓಂಕಾರ ಮೂರ್ತಿ
Published 26 ಜೂನ್ 2025, 6:32 IST
Last Updated 26 ಜೂನ್ 2025, 6:32 IST
<div class="paragraphs"><p>ಕೋಮುಲ್‌ ಆಡಳಿತ ಮಂಡಳಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರಾದ ಕೆ.ವೈ.ನಂಜೇಗೌಡ, ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ಬಿ.ರಮೇಶ್‌, ಹನುಮೇಶ್‌, ಕೆ.ಕೆ.ಮಂಜುನಾಥ್‌ ಗೆಲುವಿನ ಚಿಹ್ನೆ ತೋರಿಸಿ ಸಂಭ್ರಮಿಸಿದರು</p></div>

ಕೋಮುಲ್‌ ಆಡಳಿತ ಮಂಡಳಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರಾದ ಕೆ.ವೈ.ನಂಜೇಗೌಡ, ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ಬಿ.ರಮೇಶ್‌, ಹನುಮೇಶ್‌, ಕೆ.ಕೆ.ಮಂಜುನಾಥ್‌ ಗೆಲುವಿನ ಚಿಹ್ನೆ ತೋರಿಸಿ ಸಂಭ್ರಮಿಸಿದರು

   

ಕೋಲಾರ: ಪ್ರತಿಷ್ಠೆ ಹಾಗೂ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್‌) ಆಡಳಿತ ಮಂಡಳಿಯ 2025–2030ರ ಅವಧಿಯ ಚುಕ್ಕಾಣಿಯನ್ನು ಕಾಂಗ್ರೆಸ್‌ ಪಕ್ಷದ ಬೆಂಬಲಿತರು ಮತ್ತೊಮ್ಮೆ ಹಿಡಿಯುವುದು ನಿಚ್ಚಳವಾಗಿದೆ.

12 ನಿರ್ದೇಶಕರ ಕ್ಷೇತ್ರಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ‘ಕೈ’ ಬೆಂಬಲಿತರು ಜಯಭೇರಿ ಬಾರಿಸಿದ್ದು, ಒಂದು ಕ್ಷೇತ್ರದಲ್ಲಿ ಶಾಸಕ ಕೆ.ವೈ.ನಂಜೇಗೌಡ ಈಗಾಗಲೇ ಅವಿರೋಧ ಅಯ್ಕೆಯಾಗಿದ್ದಾರೆ. ಇದರಿಂದಾಗಿ ಒಟ್ಟು 13 ನಿರ್ದೇಶಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಬೆಂಬಲಿಗರು ಒಂಬತ್ತು ಸ್ಥಾನ ಗೆದ್ದಂತಾಗಿದೆ. ಇದರಲ್ಲಿ ಕೆ.ಎಚ್.ಮುನಿಯಪ್ಪ ಬಣದ ಮಹಾಲಕ್ಷ್ಮಿ (ಕೋಲಾರ ಮಹಿಳಾ ಉತ್ತರ ಕ್ಷೇತ್ರ) ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ‌(ಬಂಗಾರಪೇಟೆ ಕ್ಷೇತ್ರ) ಸೇರಿದ್ದಾರೆ.

ADVERTISEMENT

ಕೇವಲ ನಾಲ್ಕು ನಿರ್ದೇಶಕರ ಸ್ಥಾನ ಗೆದ್ದ ಜೆಡಿಎಸ್‌–ಬಿಜೆಪಿ ಮೈತ್ರಿಕೂಟ ನಿರಾಸೆ ಅನುಭವಿಸಿತು. ಕೋಲಾರ ತಾಲ್ಲೂಕಿನ ಎರಡು ಕ್ಷೇತ್ರ ಹಾಗೂ ಮುಳಬಾಗಿಲು ತಾಲ್ಲೂಕಿನ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದ್ದು, ಉಳಿದೆಡೆ ಸೋಲು ಎದುರಾಯಿತು.

ಬೆಳಿಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ನಗರದ ಬಾಲಕಿಯರ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ಬಿರುಸಿನ ಮತದಾನ ನಡೆಯಿತು. 12 ನಿರ್ದೇಶಕರ ಕ್ಷೇತ್ರಗಳಿಗೆ 29 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. 855 ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಪಡೆದುಕೊಂಡಿದ್ದರು.

ಭಾರಿ ಬಿಗಿ ಬಂದೋಬಸ್ತ್‌ ನಡುವೆ ಮತದಾರರು ತಮಗೆ ಸಂಬಂಧಿಸಿದ ಬೂತ್‌ಗಳಲ್ಲಿ ಮತದಾನ ಮಾಡಿದರು. ಕಾಂಗ್ರೆಸ್‌ನ ಎರಡು ಬಣಗಳು ಹಾಗೂ ಜೆಡಿಎಸ್‌–ಬಿಜೆಪಿ ಮೈತ್ರಿಕೂಟ ಮತದಾರರನ್ನು ಓಲೈಸಿಕೊಳ್ಳಲು ಭಾರಿ ಕಸರತ್ತು ನಡೆಸಿದ್ದವು.

4 ಗಂಟೆ ನಂತರ ಮತ ಎಣಿಕೆ ಆರಂಭವಾಗಿ 5.30 ರ ಹೊತ್ತಿಗೆ ಮುಗಿಯಿತು. ನಂತರ ಕೋಮುಲ್‌ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್‌ ಫಲಿತಾಂಶ ಪ್ರಕಟಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅವಿರೋಧವಾಗಿ ಆಯ್ಕೆಯಾಗಿರುವ ಕೆ.ವೈ.ನಂಜೇಗೌಡ, ಕೋಲಾರ ವೇಮಗಲ್‌ ಕ್ಷೇತ್ರದಿಂದ ಗೆದ್ದಿರುವ ಚಂಜಿಮಲೆ ಬಿ.ರಮೇಶ್‌, ಕೆಜಿಎಫ್‌ ಕ್ಷೇತ್ರದಿಂದ ಜಯ ಗಳಿಸಿರುವ ಜಯಸಿಂಹ ಕೃಷ್ಣಪ್ಪ ಅವರನ್ನು ಎತ್ತಿ ಮೆರವಣಿಗೆ ಮಾಡಿದರು.

ಇನ್ನೊಂದೆಡೆ ಶಾಸಕ ಸಮೃದ್ಧಿ ಮಂಜುನಾಥ್‌ ನೇತೃತ್ವದಲ್ಲಿ ಮುಳಬಾಗಿಲು ಕ್ಷೇತ್ರಗಳಿಂದ ವಿಜೇತರಾದ ಕಾಡೇನಹಳ್ಳಿ ನಾಗರಾಜ್‌ ಹಾಗೂ ಸಾಮೇಗೌಡ ಅವರನ್ನು ಹೆಗಲು ಮೇಲೆ ಕೂರಿಸಿಕೊಂಡು ಜೆಡಿಎಸ್‌ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹಾಗೂ ಇದೇ ಪಕ್ಷದ ಮತ್ತೊಂದು ಬಣದ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಜೆಡಿಎಸ್‌–ಬಿಜೆಪಿ ಮೈತ್ರಿಕೂಟದಿಂದ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದು, ಹೇಳಿಕೊಳ್ಳುವಂಥ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಸ್ಪರ್ಧಿಸಿದ್ದ 10ರಲ್ಲಿ ನಾಲ್ಕು ಸ್ಥಾನ ಮಾತ್ರ ಗೆದ್ದರು.

ಸಣ್ಣಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ನಡೆದಿದ್ದು ಹೊರತುಪಡಿಸಿದರೆ ಮತದಾನ ಹಾಗೂ ಫಲಿತಾಂಶ ಘೋಷಣೆ ಬಹುತೇಕ ಶಾಂತಿಯುತವಾಗಿ ನಡೆಯಿತು.

ಮತ ಚಲಾಯಿಸಲು ಬಂದ ಮತದಾರರನ್ನು ಮೂರು ಹಂತದಲ್ಲಿ ಪೊಲೀಸರು, ಒಕ್ಕೂಟದ ಅಧಿಕಾರಿಗಳು ಪರಿಶೀಲಿಸಿ ಮತ ಚಲಾವಣೆಗೆ ಕಳುಹಿಸಿಕೊಟ್ಟರು. ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಿದ್ದರು. ಕೋಲಾರ–ಬಂಗಾರಪೇಟೆ ರಸ್ತೆಯನ್ನು ಬಂದ್‌ ಮಾಡಿ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಖುದ್ದಾಗಿ ಎಸ್‌ಪಿ ನಿಖಿಲ್‌ ಬಿ. ನಿಗಾ ಇಟ್ಟಿದ್ದರು. ಅಭ್ಯರ್ಥಿಗಳೊಂದಿಗೆ ಬಂದ ಕಾರ್ಯಕರ್ತರು ಒಳಾಂಗ‌ಣ ಕ್ರೀಡಾಂಗಣ ಹಾಗೂ ಕಾಲೇಜು ವೃತ್ತದಲ್ಲಿ ಜಮಾಯಿಸಿದ್ದರು. ಅವರನ್ನು ಪೊಲೀಸರು ಚದುರಿಸಿದರು.

ಸಂಸದ ಎಂ.ಮಲ್ಲೇಶ್‌ ಬಾಬು, ಮಾಜಿ ಸಂಸದ ಎಸ್‌.ಮುನಿಸ್ವಾಮಿ, ಶಾಸಕರಾದ ಕೆ.ವೈ.ನಂಜೇಗೌಡ, ಎಸ್‌.ಎನ್‌.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್‌, ಸಿಎಂಆರ್‌ ಶ್ರೀನಾಥ್‌, ವರ್ತೂರು ಪ್ರಕಾಶ್‌, ಅಭ್ಯರ್ಥಿಗಳು, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಮತದಾನ ಕೇಂದ್ರದ ಬಳಿ ಇದ್ದರು.

ಅಭ್ಯರ್ಥಿಗಳ ಪರವಾಗಿ ಪ್ರವಾಸಕ್ಕೆ ಕೊಂಡೊಯ್ದಿದ್ದ ಮತದಾರರನ್ನು ಹೊತ್ತು ತಂದ ಬಸ್ಸು ಮತ್ತು ಕಾರುಗಳು ಮತದಾನ ಕೇಂದ್ರದ ಮುಂಭಾಗ ಬಂದಾಗ ಶಾಸಕರು ಹಾಗೂ ಮುಖಂಡರು ಮುಂದಾಳತ್ವ ವಹಿಸಿಕೊಂಡು ಮತದಾರರನ್ನು ಮತಕೇಂದ್ರಕ್ಕೆ ಕಳುಹಿಸಿಕೊಟ್ಟರು. ಮತದಾರರ ಡೆಲಿಗೇಟ್‌ ಫಾರಂಅನ್ನು ಪೊಲೀಸರು ಪರಿಶೀಲಿಸಿ ಮತ ಚಲಾವಣೆಗೆ ಕಳುಹಿಸಿಕೊಟ್ಟರು.

ಈ ಚುನಾವಣೆಯು ವಿಧಾನಸಭೆ, ವಿಧಾನ ಪರಿಷತ್‌, ಲೋಕಸಭೆ ಸೇರಿದಂತೆ ಬೇರಾವುದೇ ಚುನಾವಣೆಗಳಿಗಿಂತಲೂ ಭಾರಿ ಪೈಪೋಟಿ ಹಾಗೂ ಪ್ರತಿಷ್ಠೆಯಿಂದ ಕೂಡಿತ್ತು. ಹಣದ ಹೊಳೆಯೇ ಹರಿದ ಆರೋಪವಿದ್ದು, ಆಮಿಷ, ಪ್ರವಾಸ, ಉಡುಗೊರೆ ನೀಡಿರುವ ಬಗ್ಗೆ ಮಾತುಗಳು ಕೇಳಿಬಂದಿವೆ. ಒಬ್ಬೊಬ್ಬ ಮತದಾರರಿಗೆ ₹ 5 ಲಕ್ಷದವರೆಗೆ ಹಣ ಸೇರಿರುವ ಆರೋಪಗಳಿವೆ.

ಕೋಮುಲ್‌ ನಿರ್ದೇಶಕರ ಚುನಾವಣೆ ಫಲಿತಾಂಶ ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರು ವಿವಿಧ ಪಕ್ಷಗಳ ಕಾರ್ಯಕರ್ತರು ಸಂಭ್ರಮಿಸಿದರು
ನಾಲ್ಕು ಮತಗಳು ತಿರಸ್ಕೃತ
ಕೋಮುಲ್‌ ಆಡಳಿತ ಮಂಡಳಿ 12 ನಿರ್ದೇಶಕರ ಸ್ಥಾನಗಳಿಗೆ 855 ಮತದಾರರು (ಡೆಲಿಗೇಟ್‌) ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದರು. ಅವರಲ್ಲಿ 854 ಮಂದಿ ಮತದಾನ ಮಾಡಿದ್ದಾರೆ. ಈ ಪೈಕಿ ನಾಲ್ಕು ಮತಗಳು ತಿರಸ್ಕೃತಗೊಂಡಿವೆ. ಕೋಲಾರ ನೈರುತ್ಯ ಕ್ಷೇತ್ರಗಳಲ್ಲಿ 2 ಮುಳಬಾಗಿಲು ಪಶ್ಚಿಮ ಕ್ಷೇತ್ರಗಳಲ್ಲಿ 1 ಹಾಗೂ ಕೋಲಾರ ಉತ್ತರ ಮಹಿಳಾ ಕ್ಷೇತ್ರದಲ್ಲಿ 1 ಮತ ಅಸಿಂಧುವಾಗಿವೆ.
ಕೋಮುಲ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ
ಕೋಮುಲ್‌ ಅಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಪ್ರಕ್ರಿಯೆ ನಡೆಯಲಿದೆ. ಆ ಚುನಾವಣೆ ವೇಳೆಗೆ ಏನೆಲ್ಲಾ ಬೆಳವಣಿಗೆ ನಡೆಯಬಹುದು ಯಾರು ಯಾರನ್ನು ಸೆಳೆಯಲು ಪ್ರಯತ್ನಿಸಬಹುದು ಎಂಬ ಕುತೂಹಲ ಮೂಡಿಸಿದೆ. ಚುನಾಯಿತ 13 ಹಾಗೂ ಸರ್ಕಾರದ 5 ಪ್ರತಿನಿಧಿಗಳು ಸೇರಿ 18 ಸ್ಥಾನ ಇರುತ್ತವೆ‌. ಹೀಗಾಗಿ ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಿರುತ್ತದೆ. ಸದ್ಯಕ್ಕೆ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಮೇಲುಗೈ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನದ ಮೇಲೆ ಕಾಂಗ್ರೆಸ್‌ ಶಾಸಕರಾದ ಕೆ.ವೈ.ನಂಜೇಗೌಡ ಹಾಗೂ ಎಸ್‌.ಎನ್‌.ನಾರಾಯಣಸ್ವಾಮಿ ಕಣ್ಣಿಟ್ಟಿದ್ದು ಇವರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.