ಕೋಲಾರ: ‘ಮುಂದಿನ ತಲೆಮಾರನ್ನು ಮುನ್ನಡೆಸಲು ಬೇಕಾದಂಥ ನಾಯಕರನ್ನು ತಯಾರಿಸುವ ಅನಿವಾರ್ಯ ಇದೆ. ಸರಿಯಾದ ಶಿಕ್ಷಣ ಕೊಟ್ಟು, ಸಂವಿಧಾನ ಆಶಯಗಳನ್ನು ಯುವಕರಿಗೆ ನೀಡಿ ಭಾರತ ದೇಶವನ್ನು ಸದೃಢಗೊಳಿಸಲು ಸಂವಿಧಾನ ಅಧ್ಯಯನ ಶಿಬಿರ ನೆರವಾಗುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ತಿಳಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಸಂವಿಧಾನ ಓದು ಅಭಿಯಾನ-ಕರ್ನಾಟಕ ಮತ್ತು ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನದ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ವೃದ್ಧಿಗೊಳಿಸುವ ಸಾಹಿತ್ಯಕ ಕೃತಿಗಳನ್ನು ಉಚಿತವಾಗಿ ಯುವಕರಿಗೆ ನೀಡಿ, ಓದಲು ಪ್ರೇರೇಪಿಸುವ ಕೆಲಸವನ್ನು ಅಧ್ಯಯನ ಶಿಬಿರದಲ್ಲಿ ಮಾಡಲಾಗುತ್ತಿದೆ. ಭಾರತ ದೇಶವನ್ನು ಸದೃಢಗೊಳಿಸಲು ಸಂವಿಧಾನ ಓದು ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.
‘ನಾಯಕರಿಗೆ ಭಾಷಣ ಕಲೆಯ ಕೌಶಲಗಳನ್ನು ವೃದ್ಧಿಸಲು ಈ ರೀತಿಯ ಕಲಿಕಾ ಶಿಬಿರಗಳು ನೆರವಾಗುತ್ತವೆ. ಈ ಶಿಬಿರದಲ್ಲಿ ಭಾಗಿಯಾಗಿರುವ ಸಂಪನ್ಮೂಲ ವ್ಯಕ್ತಿಗಳನ್ನು ನೋಡಿಯೂ ಕಲಿಯಬಹುದಾಗಿದೆ’ ಎಂದರು.
ಗಮನ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಶಾಂತಮ್ಮ ಮಾತನಾಡಿ, ‘ಮಹಿಳೆಯರನ್ನು ಸಮಾಜ ಇಂದಿಗೂ ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಾಣುತ್ತಿದೆ. ಹೆಜ್ಜೆ ಹೆಜ್ಜೆಗೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಅದನ್ನು ತಡೆಯಲು ಸ್ತ್ರೀಯರಿಗೂ ಸಂವಿಧಾನ ತಿಳುವಳಿಕೆ ಅತ್ಯಗತ್ಯ’ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್, ‘ಸಂವಿಧಾನದ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನವನ್ನು ಉಳಿಸಿಕೊಳ್ಳಲು ಸಂವಿಧಾನ ಅಧ್ಯಯನ ಅಗತ್ಯ. ಎಲ್ಲಾ ಜಿಲ್ಲೆಗಳಲ್ಲಿಯೂ ಈ ಬಗೆಯ ಅಧ್ಯಯನ ಶಿಬಿರಗಳು ನಡೆಯಬೇಕು’ ಎಂದರು.
ದಲಿತ ಮುಖಂಡ ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ‘ನಿವೃತ್ತಿಯ ನಂತರವೂ ನ್ಯಾಯಮೂರ್ತಿ ನಾಗಮೋಹನದಾಸ್ ನಿರಂತರವಾಗಿ ಸಂವಿಧಾನವನ್ನು ಯುವಕರಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರೂ ಅವರ ಪ್ರಯತ್ನಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಶಿಬಿರದ ಎರಡನೇ ದಿನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯ ಕುರಿತು ಸಂವಿಧಾನ ಓದು ಅಭಿಯಾನದ ಸಂಚಾಲಕ ಬಿ.ರಾಜಶೇಖರಮೂರ್ತಿ, ಸಂವಿಧಾನ ಮತ್ತು ಜಾತ್ಯತೀತತೆ ಕುರಿತು ಆರ್.ರಾಮಕೃಷ್ಣ ಗೋಷ್ಠಿ ನಡೆಸಿಕೊಟ್ಟರು. ಸಂವಿಧಾನ ಓದು ಮತ್ತು ಕುವೆಂಪು ವಿಚಾರಕ್ರಾಂತಿ ಕೃತಿಗಳನ್ನು ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.
ಮುಖಂಡ ಅನಂತ ನಾಯಕ್, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್, ಲೇಖಕ ಗೋವಿಂದಪ್ಪ, ಬೆಳಕು ಸಂಸ್ಥೆಯ ರಾಧಾಮಣಿ, ದಲಿತ ಮುಖಂಡ ಟಿ.ವಿಜಯಕುಮಾರ್, ರೈತ ಮುಖಂಡ ಅಬ್ಬಣಿ ಶಿವಪ್ಪ, ಹೂವಳ್ಳಿ ನಾಗರಾಜ್, ಅರಿಫ್ ಉಲ್ಲಾ ಖಾನ್, ಶಶಿಕುಮಾರ್, ಗೋವಿಂದಪ್ಪ, ಗೋಪಿನಾಥ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.