ADVERTISEMENT

ಕೋಲಾರ: ಜೀವನ್ಮರಣ ಹೋರಾಟದಲ್ಲಿದ್ದ ಮಹಿಳೆ ಕೊನೆಯುಸಿರು

ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 14:35 IST
Last Updated 26 ಜೂನ್ 2020, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಕೆಜಿಎಫ್‌ ತಾಲ್ಲೂಕಿನ ತೂಕಲ್‌ ರಾಮಪುರ ಗ್ರಾಮದ 43 ವರ್ಷದ ಸೋಂಕಿತ ಮಹಿಳೆ (ಸೋಂಕಿತೆ ಸಂಖ್ಯೆ–8495) ಶುಕ್ರವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ತೂಕಲ್ ರಾಮಪುರ ಗ್ರಾಮದ ಈ ಮಹಿಳೆ ಕೆಲ ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದರು. ನಂತರ ಹೆಸರು ಬದಲಿಸಿಕೊಂಡು ದೆಹಲಿಯಲ್ಲೇ ಅಂತರ ಧರ್ಮೀಯ ವ್ಯಕ್ತಿಯನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದರು.

ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಉದ್ದೇಶಕ್ಕೆ ಈ ಮಹಿಳೆಯು ಕುಟುಂಬ ಸದಸ್ಯರೊಂದಿಗೆ ಜೂನ್‌ 14ರಂದು ತೂಕಲ್‌ ರಾಮಪುರಕ್ಕೆ ಬಂದಿದ್ದರು. ಹೊರ ರಾಜ್ಯದಿಂದ ಬಂದಿದ್ದ ಕಾರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರನ್ನು ಕೆಲ ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ (ಕ್ವಾರಂಟೈನ್‌) ಇರಿಸಿದ್ದರು. ಬಳಿಕ ಇವರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು.

ADVERTISEMENT

ಹೀಗಾಗಿ ಇವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ಇರುವುದು ಜೂನ್‌ 19ರಂದು ದೃಢಪಟ್ಟಿತ್ತು. ನಂತರ ಅದೇ ದಿನ ಇವರನ್ನು ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಈ ಮಹಿಳೆ ಶುಕ್ರವಾರ ಕೊನೆಯುಸಿರೆಳೆದರು.

ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಪತಿಗೂ ಸೋಂಕು ಹರಡಿರುವುದು ಗುರುವಾರವಷ್ಟೇ (ಜೂನ್‌ 25) ಗೊತ್ತಾಗಿತ್ತು. ಹೀಗಾಗಿ ಅವರನ್ನು ಗುರುವಾರ ರಾತ್ರಿ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೆಹಲಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಈ ಸೋಂಕಿತ ಮಹಿಳೆಗೆ 10 ವರ್ಷದ ಒಬ್ಬ ಮಗನಿದ್ದಾನೆ.

‘ಬಹು ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ತೂಕಲ್‌ ರಾಮಪುರದ ಮಹಿಳೆಗೆ ಕೊರೊನಾ ಸೋಂಕು ತಗುಲಿದ ನಂತರ ಅವರ ದೇಹ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಗುಣಮುಖರಾಗಿಸಲು ವೈದ್ಯರು ಸರ್ವ ಪ್ರಯತ್ನ ನಡೆಸಿದರು. ಆದರೂ ಮಹಿಳೆಯ ಆರೋಗ್ಯ ಸುಧಾರಿಸದೆ ಮೃತಪಟ್ಟಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತ್ಯಕ್ರಿಯೆ: ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಪ್ರಕಾರ ಆರೋಗ್ಯ ಇಲಾಖೆ ಸಿಬ್ಬಂದಿಯು ಮೃತ ಮಹಿಳೆಯ ಪತಿ ಮತ್ತು ಕುಟುಂಬ ಸದಸ್ಯರ ಅನುಮತಿ ಪಡೆದು ಅಂತ್ಯಕ್ರಿಯೆ ನೆರವೇರಿಸಿದರು. ಸಿಬ್ಬಂದಿಯು ಪಿಪಿಇ ಕಿಟ್‌ ಧರಿಸಿ ಜಿಲ್ಲಾ ಕೇಂದ್ರದ ರಹಮತ್‌ನಗರ ರುದ್ರಭೂಮಿಯಲ್ಲಿ ಮೃತ ಮಹಿಳೆಯ ಶವ ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಿದರು. ಸುರಕ್ಷತೆ ಕಾರಣಕ್ಕೆ ಕುಟುಂಬ ಸದಸ್ಯರಿಗೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.