ADVERTISEMENT

ಕೆಜಿಎಫ್‌: ಆಮ್ಲಜನಕ ಘಟಕ ಕಾರ್ಯಾರಂಭಕ್ಕೆ ಕ್ಷಣಗಣನೆ

ನಿಮಿಷಕ್ಕೆ 500 ಲೀಟರ್‌ ದ್ರವ ರೂಪದ ಆಮ್ಲಜನಕ ಉತ್ಪಾದನೆ

ಜೆ.ಆರ್.ಗಿರೀಶ್
Published 11 ಮೇ 2021, 17:16 IST
Last Updated 11 ಮೇ 2021, 17:16 IST
ಇಸ್ರೇಲ್‌ನಿಂದ ಆಮದಾಗಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನು ಕೋಲಾರ ಜಿಲ್ಲೆಯ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕ್ರೇನ್‌ನ ಸಹಾಯದಿಂದ ಕೆಳಗಿಳಿಸಲಾಯಿತು.
ಇಸ್ರೇಲ್‌ನಿಂದ ಆಮದಾಗಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕವನ್ನು ಕೋಲಾರ ಜಿಲ್ಲೆಯ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕ್ರೇನ್‌ನ ಸಹಾಯದಿಂದ ಕೆಳಗಿಳಿಸಲಾಯಿತು.   

ಕೋಲಾರ: ಕೋವಿಡ್‌ ವಿಷಮ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ 3 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳ ಪೈಕಿ ಜಿಲ್ಲೆಯ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆಯಲ್ಲಿನ ಘಟಕದ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ಹಾಗೂ ಸೋಂಕಿತರ ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಪ್ರಾಣವಾಯು ವೈದ್ಯಕೀಯ ಆಮ್ಲಜನಕಕ್ಕೆ ಹಾಹಾಕಾರ ಸೃಷ್ಟಿಯಾಗಿದೆ. ಆಮ್ಲಜನಕ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರವು ಪ್ರಧಾನಿ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರ ಸೇರಿದಂತೆ 3 ಕಡೆ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಹಸಿರು ನಿಶಾನೆ ತೋರಿತ್ತು.

ವಾರಣಾಸಿ ಜತೆಗೆ ಕರ್ನಾಟಕದ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ಮತ್ತು ಕೋಲಾರ ಜಿಲ್ಲೆಯ ಕೆಜಿಎಫ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಕೇಂದ್ರ ಆರೋಗ್ಯ ಸಚಿವಾಲಯ ಸಮ್ಮತಿಸಿತ್ತು. ಅದರಂತೆ ಇಸ್ರೇಲ್‌ನಿಂದ ದೇಶಕ್ಕೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಈ ಪೈಕಿ ಕೆಜಿಎಫ್‌ ಆಸ್ಪತ್ರೆಯಲ್ಲಿ ಘಟಕ ಜೋಡಣೆ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಬುಧವಾರ (ಮೇ 12) ಆಮ್ಲಜನಕ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ.

ADVERTISEMENT

ಈ ಘಟಕವು ನಿಮಿಷಕ್ಕೆ 500 ಲೀಟರ್‌ ದ್ರವ ರೂಪದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೆಜಿಎಫ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೈದ್ಯಕೀಯ ಆಮ್ಲಜನಕ ಮತ್ತು ವೆಂಟಿಲೇಟರ್‌ ಸಂಪರ್ಕವುಳ್ಳ 30 ಬೆಡ್‌, ಆಮ್ಲಜನಕ ಸೌಲಭ್ಯ ಮಾತ್ರ ಹೊಂದಿರುವ 70 ಬೆಡ್‌ಗಳಿವೆ. ಘಟಕದಲ್ಲಿ ಆಸ್ಪತ್ರೆಯ ಅಗತ್ಯತೆಗೂ ಹೆಚ್ಚು ಆಮ್ಲಜನಕ ಉತ್ಪಾದನೆ ಆಗಲಿದೆ.

2 ದಶಕದಿಂದ ಬಂದ್‌ ಆಗಿರುವ ಕೆಜಿಎಫ್‌ನ ಚಿನ್ನದ ಗಣಿ (ಬಿಜಿಎಂಎಲ್‌) ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತಿದ್ದು, ಈ ಆಸ್ಪತ್ರೆಗೂ ನೂತನ ಘಟಕದಿಂದ ಆಮ್ಲಜನಕ ಪೂರೈಸಲು ಉದ್ದೇಶಿಸಲಾಗಿದೆ. ಜತೆಗೆ ಜಿಲ್ಲೆಯ ಇತರೆ ಕೋವಿಡ್‌ ಆಸ್ಪತ್ರೆಗಳಿಗೂ ನೂತನ ಘಟಕದಿಂದ ಸಿಲಿಂಡರ್‌ಗಳಲ್ಲಿ ಆಮ್ಲಜನಕ ರವಾನಿಸುವ ಚಿಂತನೆಯಿದೆ.

ಹೋರಾಟಕ್ಕೆ ಸಿಕ್ಕ ಫಲ: ಕೋಲಾರ ಜಿಲ್ಲೆಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತು ಸಾವಿನ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂತಿಮ ಕ್ಷಣದಲ್ಲಿ ಆಮ್ಲಜನಕ ಘಟಕವನ್ನು ತುಮಕೂರಿಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿತ್ತು.

ಈ ಸಂಗತಿ ತಿಳಿದ ಸಂಸದ ಎಸ್‌.ಮುನಿಸ್ವಾಮಿ ಅವರು ಆಮ್ಲಜನಕ ಘಟಕವನ್ನು ಕೋಲಾರ ಜಿಲ್ಲೆಯಲ್ಲೇ ಉಳಿಸಿಕೊಳ್ಳುವಲ್ಲಿ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ.

ಸದ್ಯ ಜಿಲ್ಲೆಯ ಆಸ್ಪತ್ರೆಗಳಿಗೆ ಬಳ್ಳಾರಿ ಮತ್ತು ಬೆಂಗಳೂರಿನಿಂದ ಆಮ್ಲಜನಕ ಆಮದು ಮಾಡಿಕೊಳ್ಳಲಾಗುತ್ತಿದೆ. ಕೆಜಿಎಫ್‌ ಆಸ್ಪತ್ರೆಯಲ್ಲಿ ನೂತನ ಘಟಕ ಕಾರ್ಯಾರಂಭ ಮಾಡಿದರೆ ಹೊರ ಜಿಲ್ಲೆಗಳ ಮೇಲಿನ ಅವಲಂಬನೆ ಕೊಂಚ ತಗ್ಗಲಿದೆ.

*
ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರವು ಕೆಜಿಎಫ್‌ ಆಸ್ಪತ್ರೆಗೆ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ನೀಡಿರುವುದು ಜಿಲ್ಲೆಯ ಜನರ ಸೌಭಾಗ್ಯ.
–ಎಸ್‌.ಮುನಿಸ್ವಾಮಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.