
ಮಾಲೂರು: ನಗರದ ತಾಲ್ಲೂಕು ಕಚೇರಿಗಳ ಮುಂಭಾಗದಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಿದಲ್ಲಿ, ಪ್ರಿಂಟಿಂಗ್ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ರೂಪ ಎಚ್ಚರಿಕೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕು ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳ ಮುಂದೆ ಯಾವುದೇ ರಾಜಕೀಯ ಪಕ್ಷದವರು ಪ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ. ಸರ್ಕಾರಿ ಕಾರ್ಯಕ್ರಮಗಳ ಪ್ರಚಾರಕ್ಕೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ಅಳವಡಿಸಲು ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದರು.
ಯಾವುದೇ ಪಕ್ಷ, ಸಂಘಟನೆ ಅಥವಾ ವ್ಯಕ್ತಿಗಳು ಪಟ್ಟಣದಲ್ಲಿ ಬ್ಯಾನರ್ ಅಥವಾ ಫ್ಲೆಕ್ಸ್ ಹಾಕುವ ಮುನ್ನ ನಗರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ಅಧಿಕಾರಿಗಳು ಸೂಚಿಸುವ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಬ್ಯಾನರ್ ಅಳವಡಿಸಬೇಕು. ಇನ್ನು ಫ್ಲೆಕ್ಸ್ ಪ್ರಿಂಟ್ ಮಾಡುವ ಅಂಗಡಿ ಮಾಲೀಕರು ಬ್ಯಾನರ್ ಕೆಳಭಾಗದಲ್ಲಿ ತಮ್ಮ ಅಂಗಡಿ ಹೆಸರು ಮತ್ತು ನಗರಸಭೆಯಿಂದ ಪಡೆದ ಶುಲ್ಕ ಪಾವತಿಸಿದ ರಸೀದಿ ಸಂಖ್ಯೆಯನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದರು.
ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲಿಸದಿದ್ದರೆ ಅಥವಾ ಅನಧಿಕೃತ ಬ್ಯಾನರ್‌ಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ, ನೇರವಾಗಿ ಫ್ಲೆಕ್ಸ್ ಅಂಗಡಿ ಮಾಲೀಕರನ್ನೇ ಹೊಣೆಗಾರರನ್ನಾಗಿಸಲಾಗುವುದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಯಾವುದೇ ಕಾರ್ಯಕ್ರಮದ ಕುರಿತು ಅಳವಡಿಸಲಾಗುವ ಬ್ಯಾನರ್ ಅನ್ನು ನಾಲ್ಕು ದಿನಕ್ಕಿಂತ ಹೆಚ್ಚು ದಿನ ಬಿಡುವಂತಿಲ್ಲ ಎಂದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಪ್ರದೀಪ್ ಕುಮಾರ್, ವೃತ್ತ ನಿರೀಕ್ಷಕ ರಾಮಪ್ಪ ಗುತ್ತೇರ್, ತಾಲ್ಲೂಕಿನ ಫ್ಲೆಕ್ಸ್ ಬ್ಯಾನರ್ ಪ್ರಿಂಟರ್ ಅಂಗಡಿ ಮಾಲೀಕರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.