ADVERTISEMENT

ಗೌರಿ–ಗಣೇಶ ಹಬ್ಬ | ಮಾರುಕಟ್ಟೆಯಲ್ಲಿ ಜನಜಂಗುಳಿ: ಭರ್ಜರಿ ವಹಿವಾಟು

ಬೆಲೆ ಏರಿಕೆ ನಡುವೆಯೂ ಖರೀದಿ ಜೋರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 11:56 IST
Last Updated 1 ಸೆಪ್ಟೆಂಬರ್ 2019, 11:56 IST
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಹಳೆ ಬಸ್‌ ನಿಲ್ದಾಣದ ಹೂವಿನ ಮಾರುಕಟ್ಟೆಯಲ್ಲಿ ಶನಿವಾರ ಹೂವಿನ ವಹಿವಾಟು ನಡೆಯಿತು.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೋಲಾರದ ಹಳೆ ಬಸ್‌ ನಿಲ್ದಾಣದ ಹೂವಿನ ಮಾರುಕಟ್ಟೆಯಲ್ಲಿ ಶನಿವಾರ ಹೂವಿನ ವಹಿವಾಟು ನಡೆಯಿತು.   

ಕೋಲಾರ: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿಸಲು ಶನಿವಾರ ನಗರದ ಮಾರುಕಟ್ಟೆಗಳಿಗೆ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ವಹಿವಾಟು ಜೋರಾಗಿ ನಡೆಯಿತು.

ಹಳೆ ಬಸ್‌್ ನಿಲ್ದಾಣ, ಎಂ.ಜಿ.ರಸ್ತೆ, ಹೊಸ ಬಸ್‌ ನಿಲ್ದಾಣ, ದೊಡ್ಡಪೇಟೆ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳ ಸುತ್ತಮುತ್ತ ಜನಜಂಗುಳಿಯೇ ಕಂಡುಬಂತು. ಬೆಳಿಗ್ಗೆಯಿಂದ ರಾತ್ರಿವರೆಗೂ ವಹಿವಾಟು ಭರ್ಜರಿಯಾಗಿ ನಡೆಯಿತು.

ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಾಳೆಕಂದು, ತುಳಸಿ, ಮಾವಿನ ಸೊಪ್ಪು, ಮೊರ ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ಹಬ್ಬದ ಸಾಮಗ್ರಿ ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು. ಹಣ್ಣು, ದಿನಸಿ ಹಾಗೂ ಬಟ್ಟೆ ಅಂಗಡಿಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು.

ADVERTISEMENT

ಪ್ರಥಮ ದರ್ಜೆ ಕಾಲೇಜಿನ ಪಕ್ಕದ ರಸ್ತೆಯಲ್ಲಿ ದೊಡ್ಡಪೇಟೆ, ಹೊಸ ಬಸ್‌್್ ನಿಲ್ದಾಣದ ಬಳಿ ಗೌರಿ–ಗಣೇಶ ಮೂರ್ತಿ ಮಾರಾಟ ಮಳಿಗೆಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ವಿಶೇಷವಾಗಿ ಮಹಿಳೆಯರು ಹೊಸ ಬಟ್ಟೆ ಹಾಗೂ ಬಳೆ ಖರೀದಿಯಲ್ಲಿ ತೊಡಗಿದ್ದರು.

ಗಗನಕ್ಕೇರಿದ ಬೆಲೆ: ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ಏಲಕ್ಕಿ ಬಾಳೆ ಕೆಜಿ ₹ 90, ದಾಳಿಂಬೆ ₹ 140, ಕಿತ್ತಳೆ ₹ 100, ಸೇಬು ₹ 200, ಸೀಬೆಹಣ್ಣು ₹ 60, ಮೋಸಂಬಿ ₹ 60, ಬಿಳಿ ದ್ರಾಕ್ಷಿ ₹ 150, ಸಪೋಟ ₹ 100 ಇತ್ತು. ತೆಂಗಿನಕಾಯಿ ಒಂದಕ್ಕೆ ₹ 30, ತುಳಸಿ ಹಾಗೂ ಮಾವಿನ ಸೊಪ್ಪು ಕಟ್ಟಿಗೆ ₹ 10 ಹಾಗೂ ಬಾಳೆಕಂದು ಎರಡಕ್ಕೆ ₹ 50 ಬೆಲೆ ಇತ್ತು.

ಮಲ್ಲಿಗೆ ಬಿಡಿ ಹೂವು ಕೆ.ಜಿಗೆ ₹ 1200, ಕನಕಾಂಬರ ₹ 1,000, ಗುಲಾಬಿ ₹ 120, ಬಟನ್‌ ಹೂವು ₹ 130, ಮಾರಿ ಗೋಲ್ಡ್‌ ಹಾಗೂ ಬಿಳಿ ಸೇವಂತಿಗೆ ಹೂವು ₹ 120, ಚೆಂಡು ಹೂವು ₹ 50 ಇತ್ತು. ಸೌತೆಕಾಯಿ ಒಂದಕ್ಕೆ ₹ 10, ಮೊರ ಎರಡಕ್ಕೆ ₹ 150 ಇತ್ತು. ಜತೆಗೆ ದಿನಸಿ ಪದಾರ್ಥಗಳ ಬೆಲೆ ಸಹ ಏರಿಕೆಯಾಗಿದ್ದವು. ಪೂಜಾ ಸಾಮಗ್ರಿಗಳ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ಸಂಚಾರ ನಿರ್ಬಂಧ: ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ವಾಹನ ಸಂಚಾರ ಹಾಗೂ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ಸಂಚಾರ ನಿರ್ವಹಣೆಗೆ ಹೆಚ್ಚಿನ ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪರಸ್ಥಳದ ಸಾರ್ವಜನಿಕರು ಹಬ್ಬದ ಆಚರಣೆಗೆ ಊರುಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ, ಹಳೇ ಬಸ್‌ ನಿಲ್ದಾಣಗಳಲ್ಲಿ ಬಸ್‌ಗೆ ಕಾಯುತ್ತಾ ನಿಂತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.