ADVERTISEMENT

ಶ್ರೀನಿವಾಸಪುರ ತಾಲ್ಲೂಕಿನ ಶಿವಪುರದಲ್ಲಿ ದೀಪಾವಳಿ ಆಚರಣೆಯೇ ಇಲ್ಲ! ಕಾರಣವೇನು?

ಬೆಳಕಿನ ಹಬ್ಬದಿಂದ ಮಣ್ಣು ವಡ್ಡರ ಜನಾಂಗ ದೂರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 5:32 IST
Last Updated 25 ಅಕ್ಟೋಬರ್ 2022, 5:32 IST
ದೀಪಾವಳಿ ಸಡಗರ ಕಾಣದ ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮ
ದೀಪಾವಳಿ ಸಡಗರ ಕಾಣದ ಶ್ರೀನಿವಾಸಪುರ ತಾಲ್ಲೂಕಿನ ಶಿವಪುರ ಗ್ರಾಮ   

ಶ್ರೀನಿವಾಸಪುರ: ತಾಲ್ಲೂಕಿನ ಶಿವಪುರ, ಭೋವಿ ಸಮುದಾಯ ಮಾತ್ರ ವಾಸಿಸುವ ದೊಡ್ಡ ಗ್ರಾಮ. ಆದರೆ, ಇಲ್ಲಿ ಯಾವೊಂದು ಮನೆಯಲ್ಲೂ ದೀಪಾವಳಿ ಆಚರಿಸುವುದಿಲ್ಲ!

ಗ್ರಾಮದಲ್ಲಿ 400 ಮನೆಗಳಿದ್ದು, 2,500 ಜನರು ವಾಸಿಸುತ್ತಿದ್ದಾರೆ. ಭೋವಿ ಸಮುದಾಯವನ್ನು ಅವರು ಮಾಡುವ ಕೆಲಸದ ಆಧಾರದ ಮೇಲೆ ಮಣ್ಣು ವಡ್ಡರು, ಹಗ್ಗ ವಡ್ಡರು ಹಾಗೂ ಕಲ್ಲು ವಡ್ಡರು ಎಂದು ಮೂರು ಪಂಗಡವಾಗಿ ವಿಂಗಡಿಸಲಾಗಿದೆ.

ಹಗ್ಗ ವಡ್ಡರು ಸಾಮಾನ್ಯವಾಗಿ ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಾರೆ. ಕಲ್ಲು ವಡ್ಡರು ಇತರೆ ಸಮುದಾಯಗಳು ವಾಸಿಸುವ ಗ್ರಾಮಗಳಲ್ಲಿ ವಾಸಿಸುತ್ತಾರೆ. ಈ ಎರಡು ಪಂಗಡಗಳೂ ದೀಪಾವಳಿ ಆಚರಿಸುತ್ತವೆ. ಮಣ್ಣು ವಡ್ಡರು ಮಾತ್ರ ಒಟ್ಟಾಗಿ ತಮ್ಮದೇ ಆದ ಗ್ರಾಮಗಳಲ್ಲಿ ವಾಸಿಸುತ್ತಾರೆ. ಈ ಪಂಗಡಕ್ಕೆ ಸೇರಿದವರು ಮಾತ್ರ ದೀಪಾವಳಿ ಅನಿಷ್ಟ ಎಂದು ಭಾವಿಸುತ್ತಾರೆ. ಹಾಗಾಗಿ, ಹಬ್ಬ ಆಚರಿಸುವುದಿಲ್ಲ. ಹಬ್ಬ ಆಚರಿಸದಿರುವುದಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲವಾದರೂ, ಸಮುದಾಯದಲ್ಲಿ ಬೇರೂರಿರುವ ನಂಬಿಕೆಯೊಂದು ಅವರನ್ನು ಹಬ್ಬದಿಂದ ದೂರ ಉಳಿಯುವಂತೆ ಮಾಡಿದೆ.

ADVERTISEMENT

ನೋಮುದಾರ ತರಲು ಹೋದವರು ಹಿಂತಿರಗಲಿಲ್ಲ: ‘ಗ್ರಾಮದ ಹಿರಿಯರು ಹೇಳುವಂತೆ ಬಹಳ ಹಿಂದೆ ಭೋವಿ ಸಮುದಾಯದ ಹಿರಿಯರು ದೀಪಾವಳಿ ಆಚರಿಸಲು ನೋಮುದಾರ ತರಲು
ಹೋದರಂತೆ. ಹೋದವರು ಮತ್ತೆ ಗ್ರಾಮಕ್ಕೆ ಹಿಂದಿರುಗಲಿಲ್ಲವಂತೆ. ಅಂದಿನಿಂದ ದೀಪಾವಳಿ ಅನಿಷ್ಟವೆಂದು ಬಗೆದು ಹಬ್ಬ ಆಚರಿಸಲಿಲ್ಲವಂತೆ’ ಎಂದು ಗ್ರಾಮಸ್ಥ ಶಿವಪ್ಪ ಹೇಳುತ್ತಾರೆ.

ತಾಲ್ಲೂಕಿನ ಜೆ.ವಿ. ಕಾಲೊನಿ, ಕೋನೇಟಿ ತಿಮ್ಮನಹಳ್ಳಿ, ಬಗಲಹಳ್ಳಿ ಹಾಗೂ ಗೌಡಹಳ್ಳಿ ಗ್ರಾಮಗಳಲ್ಲಿ ವಾಸಿಸುವ ಮಣ್ಣು ಕೆಲಸ ಮಾಡುವ ಭೋವಿ ಸಮುದಾಯ ದೀಪಾವಳಿ ಆಚರಿಸುವುದಿಲ್ಲ.

ದೀಪಾವಳಿ ಆಚರಿಸದಿದ್ದರೂ, ಈ ಸಮುದಾಯದ ಜನರಿಗೆ ಕಜ್ಜಾಯ ಅಚ್ಚುಮೆಚ್ಚು. ಯಾರಾದರೂ ಹಬ್ಬಕ್ಕೆ ಕರೆದರೆ ಹೋಗುತ್ತಾರೆ. ಪ್ರೀತಿಯಿಂದ ಕಜ್ಜಾಯ ಕೊಟ್ಟರೆ ಸವಿಯುತ್ತಾರೆ. ಹಬ್ಬದ ಅಚರಣೆ ಮಾತ್ರ ದೂರ. ದೀಪಾವಳಿ ಹೊರತುಪಡಿಸಿ ಉಳಿದೆಲ್ಲ ಹಬ್ಬಗಳನ್ನೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಇವರಿಗೆ ಶ್ರಾವಣ ಶನಿವಾರ ಹೆಚ್ಚು ಪ್ರಿಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.