ADVERTISEMENT

ಪಡಿತರದ ಜತೆ ಹಾಲು ಪುಡಿ ವಿತರಣೆ

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕೋಚಿಮುಲ್‌ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 13:34 IST
Last Updated 23 ಜುಲೈ 2020, 13:34 IST

ಕೋಲಾರ: ಪಡಿತರ ವ್ಯವಸ್ಥೆಯಲ್ಲಿ ಆಹಾರ ಪದಾರ್ಥಗಳ ಜತೆಗೆ ಹಾಲಿನ ಪುಡಿ ವಿತರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಇಲ್ಲಿ ಗುರುವಾರ ನಡೆದ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

ಕೋವಿಡ್–19 ಹಿನ್ನೆಲೆಯಲ್ಲಿ ಶಾಲೆಗಳನ್ನು ಬಂದ್‌ ಮಾಡಿರುವುದರಿಂದ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ಹಾಲಿನ ಪುಡಿ ವಿತರಣೆ ಆಗುತ್ತಿಲ್ಲ. ಹೀಗಾಗಿ ಒಕ್ಕೂಟದಲ್ಲಿ ಹಾಲಿನ ಪುಡಿ ಬಳಕೆಯಾಗದೆ ಉಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಪುಡಿಯನ್ನು ಪಡಿತರದಾರರಿಗೆ ವಿತರಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಒಕ್ಕೂಟದ ಸದಸ್ಯರು ನಿರ್ಣಯ ಕೈಗೊಂಡರು.

ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ₹ 5ರಿಂದ ₹ 6ಕ್ಕೆ ಹೆಚ್ಚಿಸಿದೆ. ಹೆಚ್ಚಳವಾಗಿರುವ ₹ 1ನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಹಾಲು ಉತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡಲು ಅನುಕೂಲವಾಗುವಂತೆ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಬಜೆಟ್‌ನಲ್ಲಿ ಪ್ರತ್ಯೇಕ ನಿಧಿ ಘೋಷಿಸುವಂತೆ ಒತ್ತಾಯಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ADVERTISEMENT

ಒಕ್ಕೂಟದಲ್ಲಿ ಹಾಲು ಸಂಗ್ರಹಣೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಹಾಲನ್ನು ಪುಡಿಯಾಗಿ ಪರಿವರ್ತಿಸಲು ಹೆಚ್ಚಿನ ಸಾಮರ್ಥ್ಯದ ಘಟಕಗಳಿಲ್ಲ. ಹೀಗಾಗಿ ಹೊರ ರಾಜ್ಯಗಳಿಗೆ ಹಾಲು ಕಳುಹಿಸಿ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರಿಂದ ಹಾಲು ಸಾಗಾಣಿಕೆ ಮತ್ತು ದಾಸ್ತಾನಿಗೆ ಹೆಚ್ಚು ಹಣ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಹಾಲಿನ ಪುಡಿ ಪರಿವರ್ತನಾ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸುವಂತೆ ಕೆಎಂಎಫ್‌ಗೆ ಕೋರಬೇಕೆಂದು ಆಡಳಿತ ಮಂಡಳಿ ಸದಸ್ಯರು ನಿರ್ಣಯ ಮಾಡಿದರು.

ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಪಶು ಆಹಾರದ ಬೆಲೆ ಕಡಿಮೆ ಮಾಡುವಂತೆ ಕೆಎಂಎಫ್‌ಗೆ ಮನವಿ ಮಾಡಬೇಕೆಂದು ಸದಸ್ಯರು ಸರ್ವಾನುಮತದಿಂದ ಸಭೆಯಲ್ಲಿ ಒತ್ತಾಯಿಸಿದರು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಸಿತ, ಹಾಲಿನ ಪುಡಿ ಮತ್ತು ಬೆಣ್ಣೆಯ ದರ ಕುಸಿತ, ಹಾಲು ಸಂಗ್ರಹಣೆ ಪ್ರಮಾಣ ಹೆಚ್ಚಳದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.