ADVERTISEMENT

‘ಒಪ್ಪಂದದಂತೆ ಡಿಕೆಶಿ ಸಿ.ಎಂ ಮಾಡಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 6:52 IST
Last Updated 10 ಡಿಸೆಂಬರ್ 2025, 6:52 IST
ಕೋಲಾರ ಜಿಲ್ಲಾ ಡಿಕೆಶಿ ಅಭಿಮಾನಿಗಳ ಸಂಘ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವಿರುವ ಪೋಸ್ಟರ್‌ ಹಿಡಿದು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು
ಕೋಲಾರ ಜಿಲ್ಲಾ ಡಿಕೆಶಿ ಅಭಿಮಾನಿಗಳ ಸಂಘ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವಿರುವ ಪೋಸ್ಟರ್‌ ಹಿಡಿದು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರು   

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರ ರಚನೆ ವೇಳೆ ಕೊಟ್ಟ ಮಾತು ಹಾಗೂ ಒಪ್ಪಂದದಂತೆ ಡಿ.ಕೆ.ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಡಿಕೆಶಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಘೋಷಣೆ ಕೂಗಿದರು.

ಪ್ರತಿಭಟನೆಗೂ ಮೊದಲು ಕಾರ್ಯಕರ್ತರು ಶಕ್ತಿದೇವತೆ ಕೋಲಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ನಂತರ ಆವರಣದಲ್ಲಿ 101 ಈಡುಗಾಯಿ ಒಡೆದರು. ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವಿರುವ ಪೋಸ್ಟರ್‌ ಹಿಡಿದು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಮೊಳಗಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಸುಜಿತ್ ಗೌಡ ಮಾತನಾಡಿ, ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎರಡೂವರೆ ವರ್ಷ ಪೂರೈಸಿದ್ದಾರೆ. ಉಳಿದ ಎರಡು ವರ್ಷಗಳನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಬಿಟ್ಟುಕೊಡಬೇಕು. ಈ ಸಂಬಂಧ ಪೂಜೆ ಸಲ್ಲಿಸಿ ಅರ್ಚನೆ ಮಾಡಿದ್ದೇವೆ’ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷ ಪುನಃ ಅಧಿಕಾರ ಹಿಡಿಯುವಲ್ಲಿ ಶಿವಕುಮಾರ್‌ ಪಾತ್ರ ದೊಡ್ಡದಿದೆ. 2018ರಲ್ಲಿ 78 ಸ್ಥಾನ ಪಡೆದಿದ್ದ ಪಕ್ಷ 2023ರಲ್ಲಿ 136 ಸ್ಥಾನ ಪಡೆಯಿತು. ಅವರಿಗೆ ಎಲ್ಲಾ ಶಾಸಕರ ಬೆಂಬಲ ಇದೆ ಎಂದು ಹೇಳಿದರು.

ಯಾವುದೇ ರೀತಿಯ ಒಪ್ಪಂದ ಆಗಿಲ್ಲ ಎಂಬುದಾಗಿ ಸಿದ್ದರಾಮಯ್ಯ, ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳುತ್ತಾರೆ ಎಂಬುದಕ್ಕೆ, ‘ಸಿದ್ದರಾಮಯ್ಯ ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ. ಜನವರಿಯಲ್ಲಿ ಆ ಕಾಲ ಕೂಡಿಬರಲಿದೆ. ಹರಕೆ ಹೊತ್ತುಕೊಂಡಿದ್ದ ಮುಖ್ಯಮಂತ್ರಿ ಆದ ಬಳಿಕ ಮತ್ತೆ ಪೂಜೆ ಸಲ್ಲಿಸುತ್ತೇವೆ’ ಎಂದರು.

ಈ ವೇಳೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.