ADVERTISEMENT

ಕೋಲಾರ: ರೈತರನ್ನು ಕಚೇರಿಗೆ ಅಲೆಸಬೇಡಿ -ಶಾಸಕ ಕೆ.ಶ್ರೀನಿವಾಸಗೌಡ

ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 14:10 IST
Last Updated 20 ಜುಲೈ 2021, 14:10 IST
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಮಂಗಳವಾರ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದರು
ಶಾಸಕ ಕೆ.ಶ್ರೀನಿವಾಸಗೌಡ ಕೋಲಾರದಲ್ಲಿ ಮಂಗಳವಾರ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಿದರು   

ಕೋಲಾರ: ‘ರೈತರೆಲ್ಲರೂ ಒಂದೇ, ಇಲ್ಲಿ ನಮ್ಮ ಕಡೆಯವರು ಬೇರೆಯವರು ಎಂಬ ಭೇದ ಭಾವವಿಲ್ಲ. ರೈತರನ್ನು ಕಚೇರಿಗೆ ಅಲೆದಾಡಿಸದೆ ಬೇಗನೆ ಅವರ ಕೆಲಸ ಪೂರ್ಣಗೊಳಿಸಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇಲ್ಲಿ ಮಂಗಳವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ರೈತರು, ‘ಜಮೀನಿನ ಸರ್ವೆ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಕಡತಗಳು ತಮ್ಮಲ್ಲಿ ಲಭ್ಯವಿಲ್ಲ ಎಂದು ಪರಸ್ಪರರತ್ತ ಬೆಟ್ಟು ಮಾಡುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರು, ‘ಜನರಿಗೆ ಯಾಕೆ ತೊಂದರೆ ಕೊಡ್ತಿಯಾ. ಮರ್ಯಾದೆಯಿಂದ ಕಚೇರಿಗೆ ಕಡತ ತಂದು ಇಡಬೇಕು. ಒಂದು ವಾರದೊಳಗೆ ರೈತರ ಅರ್ಜಿ ಇತ್ಯರ್ಥ ಆಗಿರಬೇಕು. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸುತ್ತೀಯಾ’ ಎಂದು ಕೇಸ್ ವರ್ಕರ್ ಪುರುಷೋತ್ತಮ್ ವಿರುದ್ಧ ಹರಿಹಾಯ್ದರು.

ADVERTISEMENT

ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ (ಎಡಿಎಲ್‍ಆರ್) ಹನುಮಂತರಾಯಪ್ಪ ಅವರನ್ನು ಸಭೆಗೆ ಕರೆಸಿಕೊಂಡ ಶಾಸಕರು, ‘ಜಮೀನು ಪ್ರಕರಣಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಸೂಕ್ತ ಮಾಹಿತಿ ಇರುವುದಿಲ್ಲ. ರೈತರು ಕಚೇರಿಗೆ ಬಂದಾಗ ಅವರಿಗೆ ಸರಿಯಾಗಿ ಮಾರ್ಗದರ್ಶನ ನೀಡಿ. ಜತೆಗೆ ಅವರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮಾಡಿ’ ಎಂದು ಸೂಚನೆ ನೀಡಿದರು.

ಸಾಗುವಳಿ ಚೀಟಿಯಿಲ್ಲ: ‘ಜಮೀನು ನನ್ನ ಸ್ವಾಧೀನದಲ್ಲಿದೆ. ಆದರೂ ಸುಮಾರು 4 ದಶಕದಿಂದ ಸಾಗುವಳಿ ಚೀಟಿ ಕೊಟ್ಟಿಲ್ಲ. ಖಾತೆಯಲ್ಲಿ ಬೀಡು ಪ್ರದೇಶವೆಂದು ನಮೂದಾಗಿದೆ. ಶೀಘ್ರವೇ ಸಾಗುವಳಿ ಚೀಟಿ ಕೊಡಬೇಕು’ ಎಂದು ರೈತರೊಬ್ಬರು ಮನವಿ ಮಾಡಿದರು.

‘ನನ್ನ ಜತೆ ಅರ್ಜಿ ಸಲ್ಲಿಸಿದ್ದವರಿಗೆ ಜಮೀನು ಮಂಜೂರಾಗಿದೆ. ಆದರೆ, ನನಗಿನ್ನೂ ಜಮೀನು ಮಂಜೂರು ಮಾಡಿಲ್ಲ. ಅಧಿಕಾರಿಗಳು ವಿನಾಕಾರಣ ಕಚೇರಿಗೆ ಅಲೆಸುತ್ತಿದ್ದಾರೆ’ ಎಂದು ಮತ್ತೊಬ್ಬ ರೈತರು ಶಾಸಕರ ಬಳಿ ಅಳಲು ತೋಡಿಕೊಂಡರು.

ಆಗ ಮಧ್ಯಪ್ರವೇಶಿಸಿದ ತಹಶೀಲ್ದಾರ್ ಶೋಭಿತಾ, ‘ಫಾರಂ ನಂಬರ್‌ 53ರ ಜತೆ ಸೂಕ್ತ ದಾಖಲೆಪತ್ರಗಳೊಂದಿಗೆ ಅರ್ಜಿ ಸಲ್ಲಿಸಿದ 9 ಮಂದಿಗೆ ಜಮೀನು ಮಂಜೂರಾಗಿದೆ. ಆದರೆ, ಈ ರೈತರು ಸೂಕ್ತ ದಾಖಲೆಪತ್ರ ಸಲ್ಲಿಸಿಲ್ಲ. ದಾಖಲೆ ಒದಗಿಸಿದರೆ ಪರಿಶೀಲಿಸಿ ಜಮೀನು ಮಂಜೂರು ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಸರ್ವೆಯರ್‌ ಕೊರತೆ: ‘ತಾಲ್ಲೂಕಿನಲ್ಲಿ ಸರ್ವೆಯರ್‌ಗಳ ಕೊರತೆಯಿದೆ. ತಾಲ್ಲೂಕಿಗೆ ಕನಿಷ್ಠ 4 ಸರ್ವೆಯರ್‌ಗಳ ಅಗತ್ಯವಿದೆ. ಸೇವೆಯಲ್ಲಿರುವ ಸರ್ವೆಯರ್‌ಗಳ ಪೈಕಿ ಇಬ್ಬರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮತ್ತೊಬ್ಬರು ಕೆಲಸದ ಒತ್ತಡದ ಕಾರಣಕ್ಕೆ ತಾಲ್ಲೂಕಿನಿಂದ ತುಮಕೂರು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಇರುವ ಒಬ್ಬರೇ ಸರ್ವೆಯರ್ ಎಲ್ಲಾ ಕಡೆ ಓಡಾಡಬೇಕಿದೆ’ ಎಂದು ತಹಶೀಲ್ದಾರ್‌ ವಿವರಿಸಿದರು.

‘ಸರ್ವೆಯರ್‌ಗೆ ತಿಂಗಳಿಗೆ 20 ಕಡತ ಪರಿಶೀಲಿಸಿ ವಿಲೇವಾರಿ ಮಾಡುವ ಗುರಿ ನೀಡಲಾಗಿದೆ. ಈ ಮಧ್ಯೆ ಅವರು ಇ–ಸ್ವತ್ತು ಕೆಲಸ ಮಾಡಬೇಕಿದೆ. ತಾಲ್ಲೂಕಿಗೆ ಹೆಚ್ಚಿನ ಸರ್ವೆಯರ್‌ಗಳನ್ನು ನಿಯೋಜನೆ ಮಾಡಿಸಿ’ ಎಂದು ಶಾಸಕರಿಗೆ ಕೋರಿದರು.

‘ವೇಮಗಲ್ ಹೋಬಳಿ ವ್ಯಾಪ್ತಿಯ ಸರ್ವೆ ನಂಬರ್‌ 31ರಲ್ಲಿನ ಜಾಗವನ್ನು ಸಾರ್ವಜನಿಕ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಆ ಜಾಗದ ಸರ್ವೆ ಮಾಡಿ ಸುತ್ತಲೂ ತಡೆಗೋಡೆ ನಿರ್ಮಿಸಿ ಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ವಕೀಲ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.