ADVERTISEMENT

ಕೋಲಾರ | ಡ್ರೋನ್‌ ಗಸ್ತು ಮೂಲಕ ಪೊಲೀಸರ ನಿಗಾ!

ಕೆ.ಓಂಕಾರ ಮೂರ್ತಿ
Published 28 ನವೆಂಬರ್ 2025, 5:52 IST
Last Updated 28 ನವೆಂಬರ್ 2025, 5:52 IST
ಕೋಲಾರ ಜಿಲ್ಲೆಯ ವೇಮಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಡ್ರೋನ್‌ ಕಣ್ಗಾವಲು
ಕೋಲಾರ ಜಿಲ್ಲೆಯ ವೇಮಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಡ್ರೋನ್‌ ಕಣ್ಗಾವಲು    

ಕೋಲಾರ: ಪೊಲೀಸರ ಕಣ್ಣು ತಪ್ಪಿಸಿ ಗುಂಪುಗೂಡುವುದು, ಅಡಗಿ ಕೂರುವ ಕಳ್ಳಕಾಕರು, ಯಾರೂ ಬರಲ್ಲವೆಂದು ಯಾವುದೋ ತೋಟ, ಬೆಟ್ಟ ಗುಡ್ಡದ ಮಧ್ಯೆ ಜೂಜಾಟದಲ್ಲಿ ತೊಡಗುವ ಜೂಜುಗಾರರು ಸೇರಿದಂತೆ ಹಲವಾರು ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಜಿಲ್ಲಾ ಪೊಲೀಸರು ಡ್ರೋನ್‌ ಗಸ್ತಿನ ಮೊರೆ ಹೋಗಿದ್ದಾರೆ.

ಈಗಾಗಲೇ ಬೆಂಕಿ ಅವಘಡ ಹಾಗೂ ಪ್ರಾಣಿಗಳ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಡ್ರೋನ್‌ ಆಧಾರಿತ ಕಣ್ಗಾವಲು ವ್ಯವಸ್ಥೆ ಬಳಸುತ್ತಿದೆ. ಕೃಷಿಗೆ ಔಷಧ ಸಿಂಪಡಣೆ ಇರಬಹುದು, ಕಾರ್ಯಕ್ರಮಗಳ ವಿಡಿಯೊ, ಫೋಟೋ ತೆಗೆಯಲು ಡ್ರೋನ್‌ ಬಳಸಲಾಗುತ್ತಿದೆ.

ಇದೀಗ ಜಿಲ್ಲಾ ಪೊಲೀಸರು ಸಿ.ಸಿ.ಟಿ.ವಿ ಜೊತೆಗೆ ಡ್ರೋನ್‌ ಬಳಸುತ್ತಿದ್ದು, ಪುಂಡುಪೋಕರಿಗಳು, ಜೂಜುಗಾರರು, ಇನ್ನಿತರ ಅಪರಾಧ ಚಟುವಟಿಕೆ ಎಸಗುವವರ ಹೆಡೆಮುರಿ ಕಟ್ಟಲು ಮತ್ತಷ್ಟು ಶಕ್ತಿ ಬಂದಂತಾಗಿದೆ.

ADVERTISEMENT

ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಲನೂರು ಕೆರೆ, ಗ್ರಾಮ ಮತ್ತು ಕೈಗಾರಿಕಾ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಈಗಾಗಲೇ ಡ್ರೋನ್‌ ಮೂಲಕ ಗಸ್ತು ನಡೆಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಹರಳಕುಂಟೆ ಮತ್ತು ಭಟ್ರಹಳ್ಳಿ ಗ್ರಾಮಗಳಲ್ಲಿ ಡ್ರೋನ್‌ ಗಸ್ತು ನಡೆಸಲಾಗುತ್ತಿದೆ. ಮಾಲೂರು, ಶ್ರೀನಿವಾಸಪುರ ತಾಲ್ಲೂಕಿನ ಕೆಲ ಗ್ರಾಮಗಳಲ್ಲೂ ಡ್ರೋನ್‌ ಗಸ್ತು ಮೂಲಕ ನಿಗಾ ಇಡಲಾಗಿದೆ.

500 ಮೀಟರ್‌ ಎತ್ತರದವರೆಗೆ ಹಾರಾಟ ನಡೆಸಿ 10 ಕಿ.ಮೀ ವ್ಯಾಪ್ತಿವರೆಗಿನ ಪ್ರದೇಶವನ್ನು ಈ ಡ್ರೋನ್‌ಗಳ ಮೂಲಕ ಪರಿಶೀಲನೆ ನಡೆಸಬಹುದು. ಜನದಟ್ಟಣೆ ಪ್ರದೇಶ, ದುರ್ಗಮ ಪ್ರದೇಶ, ಬೆಟ್ಟಗುಡ್ಡ, ದಟ್ಟ ಕಾಡು, ಬೆಟ್ಟದ ತಪ್ಪಲು ಸೇರಿದಂತೆ ವಿವಿಧ ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ.

ಜಾಯ್‌ ಸ್ಟಿಕ್‌ (ಕಂಟ್ರೋಲರ್‌) ಬಳಿ ಮೊಬೈಲ್‌ ಫೋನ್‌ ಇರಿಸಿ ಡ್ರೋನ್‌ ಸೆರೆ ಹಿಡಿಯುವ ದೃಶ್ಯಗಳನ್ನು ಲೈವ್ ಆಗಿ ವೀಕ್ಷಿಸಬಹುದು. ಕೆಲವೆಡೆ ನೆಟ್ವರ್ಕ್‌ ಇಲ್ಲದ ಸ್ಥಳಗಳಲ್ಲಿ ವಿಡಿಯೊವನ್ನು ಕಚೇರಿಗೆ ತಂದು ಪರಿಶೀಲಿಸಿ ಕ್ರಮ ವಹಿಸಬಹುದು.

ಕೋಲಾರ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದಲೇ ಡ್ರೋನ್‌ ಹಾರಿಸಿ ಅಂತರಗಂಗೆ ಬೆಟ್ಟದ ತಪ್ಪಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಪತ್ತೆ ಹಚ್ಚಬಹುದು. 

ಕೋಲಾರ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರಿಂದ ಡ್ರೋನ್‌ ಗಸ್ತು
ನಿಖಿಲ್‌ ಬಿ.

ಜಿಲ್ಲಾ ಪೊಲೀಸರಿಂದ ಮೊದಲ ಬಾರಿ ವಿಶಿಷ್ಟ ಪ್ರಯೋಗ ಅಕ್ರಮ ಚಟುವಟಿಕೆ ಬೇಧಿಸಲು ಸಿ.ಸಿ.ಟಿ.ವಿ ಜೊತೆಗೆ ಡ್ರೋನ್‌ ನೆರವು 500 ಮೀಟರ್‌ ಎತ್ತರ ಹಾರಾಟ, 10 ಕಿ.ಮೀ ವ್ಯಾಪ್ತಿಯಲ್ಲಿ ನಿಗಾ

ಅಪರಾಧ ಪ್ರಕರಣ ತಡೆಗೆ ಅನುಕೂಲ
ಅಪರಾಧ ಪ್ರಕರಣ ತಡೆಗೆ ಅನುಕೂಲ ದುರ್ಗಮ ಪ್ರದೇಶ ದಟ್ಟ ಕಾಡು ಬೆಟ್ಟ ಗುಡ್ಡಗಳ ತಪ್ಪಲು ಜನಸಂದಣಿ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಡ್ರೋನ್‌ ಪೆಟ್ರೋಲಿಂಗ್‌ ನೆರವಾಗಲಿದೆ. ಇಂಥ ಪ್ರದೇಶದಲ್ಲಿ ಯಾರೂ ಬರಲ್ಲವೆಂದು ಜೂಜಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಕೆಲವರು ನಿರತರಾಗುತ್ತಾರೆ. ಅವರಿಗೆ ಕಡಿವಾಣ ಹಾಕಬಹುದು. ದಾಳಿ ವೇಳೆ ಪರಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಕ್ಷಣ ಡ್ರೋನ್‌ ಬಳಿಸಿ ಆರೋಪಿಗಳ ಮುಖಚರ್ಯೆ ಕಂಡುಹಿಡಿಯಬಹುದು ಎಲ್ಲಿ ಪರಾರಿಯಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು. ಪೊಲೀಸರು ಹೋಗಲು ಸಾಧ್ಯವಾಗದಂಥ ಪ್ರದೇಶದಲ್ಲಿ ಈ ಡ್ರೋನ್‌ ಮೂಲಕ ಪರಿಶೀಲನೆ ನಡೆಸಬಹುದು. ಕೈಗಾರಿಕಾ ಪ್ರದೇಶ ಸಂಪೂರ್ಣ ಪರಿಶೀಲಿಸಬಹುದು. ಸಾವಿರಾರು ಜನ ಸೇರುವ ಕಾರ್ಯಕ್ರಮಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಜೊತೆಗೆ ಡ್ರೋನ್‌ ಮೂಲಕವೂ ಕಣ್ಣಿಡಬಹುದು. ಅಪರಾಧ ಚಟುವಟಿಕೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಡ್ರೋನ್‌ ಹಾರಿಸಿ ಆರೋಪಿಗಳ ಚಲನವಲನ ಗುರುತಿಸಬಹುದು. ಮೊದಲ ಬಾರಿ ಈ ವ್ಯವಸ್ಥೆ ಜಾರಿ ಮಾಡಿದ್ದು ನಮ್ಮನ್ನು ನೋಡಿ ವಿವಿಧೆಡೆ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. -ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ
8 ಪೊಲೀಸರಿಗೆ ತರಬೇತಿ
ಈಗಾಗಲೇ ಕೋಲಾರ ಜಿಲ್ಲಾ ಪೊಲೀಸರು ಕೆಲ ದಿನಗಳಿಂದ ವಿವಿಧೆಡೆ ಮೂರು ಡ್ರೋನ್‌ಗಳ ಮೂಲಕ ಗಸ್ತು ನಡೆಸುತ್ತಿದ್ದಾರೆ. ಅದಕ್ಕೆಂದು 8 ಕಾನ್‌ಸ್ಟೆಬಲ್‌ಗಳಿಗೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ ಒಂದು ದಿನ ಡ್ರೋನ್‌ ಬಳಸಿ ಪರಿಶೀಲನೆ ನಡೆಸುತ್ತಿದ್ದಾರೆ. 112 ಸಂಖ್ಯೆಯಿಂದ ಸಾರ್ವಜನಿಕರಿಂದ ದೂರು ಬಂದಾಗಲೂ ತಕ್ಷಣವೇ ಡ್ರೋನ್‌ಗಳ ಮೂಲಕ ಕಾರ್ಯಾಚರಣೆ ನಡೆಸಿ ಅಪರಾಧ ತಡೆಗೆ ಮುಂದಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.